ಜಗಳೂರು: 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ ನಿಧಾನವಾಗಿ ಚಲಿಸಿ!

Suddivijaya
Suddivijaya June 15, 2023
Updated 2023/06/15 at 5:12 AM

Suddivijaya/Kannadanews/15/6/2023

ಸುದ್ದಿವಿಜಯ, ಜಗಳೂರು(ವಿಶೇಷ ವರದಿ)ಬರದ ನಾಡನ್ನು ಹಸಿರು ನಾಡನ್ನಾಗಿ ಮಾಡುವ ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಜಗಳೂರು ಏತ ನೀರಾವರಿ ಯೋಜನೆ ಇನ್ನು ಕೇವಲ 25 ಕಿಮೀ ನಷ್ಟು ಬಾಕಿ ಉಳಿದಿದ್ದು ಪ್ರಸ್ತುತ ಮಳೆಗಾಲಕ್ಕೆ 15 ಕೆರೆಗಳಿಗೆ ನೀರು ಹರಿಸಲು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಶರವೇಗದಲ್ಲಿ ಕಾಮಗಾರಿ ಮುಕ್ತಾಯಕ್ಕೆ ಪಣತೊಟ್ಟಿದ್ದಾರೆ.

ಹೌದು, ಮುಗಿಲ ಕೃಪೆಯಿಂದ ಬದುಕು ಸಾಗಿಸುತ್ತಿರುವ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಎರಡನೇ ಸ್ಥಾನದಲ್ಲಿರುವ ಜಗಳೂರು ತಾಲೂಕಿಗೆ 2018ರಲ್ಲಿ ನಡೆದ ತರಳಬಾಳು ಹುಣ್ಣೆಮೆಯಂದು ಘೋಷಣೆಯಾದ ದೀಟೂರು ಏತ ನೀರಾವರಿ ಯೋಜನೆ ಐದು ವರ್ಷಗಳ ನಂತರ ಶೇ.80 ರಷ್ಟು ಕಾಮಗಾರಿ ಮುಕ್ತಾಯವಾಗಿದೆ.

ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದ ಈ ಯೋಜನೆ ಮತ್ತೆ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಹೊಸದರಲ್ಲೇ ತಾರ್ಕಿಕ ಅಂತ್ಯಕ್ಕೆ ಬರುತ್ತಿರುವುದು ಕಾಕತಾಳಿಯವೇನೋ ಎಂದು ಭಾಸವಾಗುತ್ತಿದೆ.

665 ಕೋಟಿ ರೂ ವೆಚ್ಚದ ಈ ಯೋಜನೆಗೆ ಸಿದ್ದರಾಮಯ್ಯ ಅವರು ತಮ್ಮ ಕಡೆಯ ಬಜೆಟ್‍ನಲ್ಲಿ 250 ಕೋಟಿ ರೂ ಮೀಸಲಿಟ್ಟಿದ್ದರು.

ನಂತರ ಬಂದ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರು 415 ಕೋಟಿ ರೂ ನೀಡಿ ಆಡಳಿತಾತ್ಮಕ ಮಂಜೂರಾತಿ ನೀಡಿದ್ದರು.

ದೀಟೂರು ಬಳಿ ಇರುವ ತುಂಗಭದ್ರಾ ನದಿಯಿಂದ ಜಗಳೂರು ತಾಲೂಕಿನ 57 ಕೆರೆಗಳನ್ನು ತುಂಬಿಸುವ ಈ ಯೋಜನೆಯ ವಿಸ್ತೀರ್ಣ 250 ಕಿ.ಮೀಗಳಷ್ಟು ದೂರವಿದೆ.

ಕೋವಿಡ್ ಸಂಕಷ್ಟದ ಮಧ್ಯೆ ಎರಡು ವರ್ಷಗಳ ಕಾಲ ಕುಂಟುತ್ತಾ ಸಾಗಿದ ಯೋಜನೆ ಬಿಜೆಪಿ ಸರಕಾರದ ಅವಧಿಯಲ್ಲಿ ಆಮೆವೇಗ ಪಡೆದಿತ್ತು.

ಅಷ್ಟರಲ್ಲಾಗಲೇ ಚುನಾವಣೆ ಬಂತು. ಭೂ ವ್ಯಾಜ್ಯ ಕಾಮಾಗಾರಿಗಳಿಗೆ ಅಡ್ಡಿ, ಭೂ ಮಂಜೂರಾತಿ ಪಡೆಯಲು ವಿಳಂಬ, ಗ್ಯಾಸ್‍ಪೈಲ್ ಲೈನ್ ಅಡ್ಡಿ, ಮಳೆಯಿಂದ ಕಾಮಗಾರಿ ವಿಳಂಬದ ಹೀಗೆ ನಾನಾ ವಿಘ್ನಗಳ ಮಧ್ಯೆಯೂ ಇನ್ನು 25 ಕಿಮೀ ನಷ್ಟು ಕಾಮಗಾರಿ ಬಾಕಿ ಉಳಿದಿದ್ದು ಜುಲೈ ಅಂತ್ಯಕ್ಕೆ ಮುಕ್ತಾಯಗೊಳಿಸುವ ಭರವಸೆಯನ್ನು ಕರ್ನಾಟಕ ನೀರಾವರಿ ನಿಗದಮದ ದಾವಣಗೆರೆ ವಿಭಾಗದ ಎಇಇ ಆರ್.ಬಿ.ಮಂಜುನಾಥ್, ಎಇ ಮನೋಜ್ ತಿಳಿಸಿದ್ದಾರೆ.

15 ಕೆರೆಗಳಿಗೆ ಜುಲೈ ಒಳಗೆ ನೀರು?

ಕಳೆದ ಭಾರಿ ಅತಿವೃಷ್ಟಿಯಾಗಿದ್ದರಿಂದ ತಾಲೂಕಿನ ಬಹುತೇಕ ಕೆರೆಗಳಲ್ಲಿ ಶೇ.50 ರಷ್ಟು ನೀರಿದೆ. ಆದರೆ ಈ ಬಾರಿ ಮಳೆಗಾಲ ವಿಳಂಬವಾಗುತ್ತಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ.

ಹೀಗಾಗಿ ಜಗಳೂರು ಏತ ನೀರಾವರಿ ಯೋಜನೆ ತ್ವರಿತವಾಗಿ ಪೂರ್ಣಗೊಳಿಸುವ ಉದ್ದೇಶ ಹೊಂದಿರುವ ಕಾರಣ ಕಿಷ್ಕಿಂದೆಯಂತಹ ಜಾಗಗಳಲ್ಲಿ ಮತ್ತು ರೈತರ ಹೊಲಗಳಲ್ಲಿ ಈಗಾಗಲೇ ಪೈಪ್ ಲೈನ್ ಅಳವಡಿಕೆ ಕಾರ್ಯ ಶೇ.80 ರಷ್ಟು ಮುಕ್ತಾಯವಾಗಿದೆ.

ಪ್ರಸ್ತುತ ಮಳೆಗಾಲದ ವರ್ಷದಲ್ಲಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದರೆ. ಮೆದಗಿನಕೆರೆ, ರಸ್ತೆಮಾಚಿಕೆರೆ, ತುಪ್ಪದಹಳ್ಳಿ, ಕಾಟೇನಹಳ್ಳಿ, ಅಸಗೋಡು, ಗೋಡೆ, ತಾರೆಹಳ್ಳಿ, ಉರಲಕಟ್ಟೆ, ಹಾಲೇಕಲ್ಲು, ಬಿಳಿಚೋಡು, ಚದರಗೊಳ್ಳ, ಚಟ್ನಳ್ಳಿ, ಕುರೆಮಗನಹಳ್ಳಿ, ಯು.ಕಲ್ಲಹಳ್ಳಿ, ಪುಣಭಘಟ್ಟ, ನಂದಿಕಂಬ, ಬೇವಿನಹಳ್ಳಿ ಸೇರಿ ಒಟ್ಟು 15 ಕೆರೆಗಳಿಗೆ ನೀರು ಹರಿಸಲು ಎಲ್ಲ ಸಿದ್ದತೆಗಳು ಮಾಡಿಕೊಳ್ಳಲಾಗಿದೆ.

ಕಡೆ ಹಂತದ ಕಾಮಗಾರಿಗಳು ಬಾಕಿ ಇದ್ದು ಅಂತಿಮ ಸ್ಪರ್ಶ ಕೊಡುವ ಮೂಲಕ ಕೆರೆಗಳಿಗೆ ನೀರು ಹರಿಸಲು ಗುತ್ತಿಗೆ ಪಡೆದಿರುವ ಜಿಶಂಕರ್ ಕಂಪನಿ ಮತ್ತು ನೀರಾವರಿ ನಿಗದಮ ಅಧಿಕಾರಿಗಳು ಸಿದ್ದರಾಗಿದ್ದಾರೆ.

ಜಗಳೂರು ಕೆರೆಗೆ ನೀರು ತಲುಪಲು ಇನ್ನು 5 ಕಿಮೀ ಕಾಮಗಾರಿ ಬಾಕಿ ಉಳಿದಿದ್ದು ರಸ್ತೆಯ ಪಕ್ಕ ಪೈಪ್‍ಲೈನ್ ಅಳವಡಿಸುವುದರಿಂದ ಕಾಮಗಾರಿ ಯಾವುದೇ ಅಡೆ ತಡೆಯಿಲ್ಲದೇ ಸಾಗುತ್ತಿದೆ.

ಆದರೆ ಕೊಡದಗುಡ್ಡ, ಮೆದಗಿನಕೆರೆ ಮತ್ತು ಬಿದರಕೆರೆ ಗ್ರಾಮಗಳಲ್ಲಿ ಹಾದು ಹೋಗಿರುವ ಗ್ಯಾಸ್ ಪೈಪ್ ಲೈನ್ ಕೆಳಭಾಗದಲ್ಲಿ ನೀರಿನ ಪೈಪ್ ಲೈನ್ ಅಳವಡಿಸವ ಕಾಮಗಾರಿಗೆ ಅನೇಕ ವಿಘ್ನಗಳು ಬಂದ ಕಾರಣ ಕಾಮಗಾರಿ ವಿಳಂಭವಾಗಿತ್ತು.

ಆದರೆ ಅಡೆತಡೆ ನಿವಾರಣೆಯಾಗಿದ್ದು ಕಾಮಗಾರಿ ವೇಗಪಡೆದು ಕೊಂಡಿದೆ. ಏರ್‌ ವಲ್ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ.

ಜಗಳೂರು ಕೆರೆಗೆ ನೀರು ಹರಿದರೆ ಅಲ್ಲಿಂದ ಮತ್ತೆ ಅಲ್ಲಿಂದ ಅಬಬೂರು, ಹನುಮಂತಾಪುರ, ಸಿದ್ದಮ್ಮನಹಳ್ಳಿ, ಬಂಗಾರಕ್ಕನಗುಡ್ಡ, ಬಿಸ್ತುವಳ್ಳಿ, ರಸ್ತೆಮಾಕುಂಟೆ ಸೇರಿದಂತೆ ಇನ್ನು 16ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಯಲಿದೆ. ಪ್ರಸ್ತುತ ಮಳೆ ಬಂದರೆ 15 ಕೆರೆಗಳಿಗೆ ನೀರು ಹರಿಸಲು ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದು ಐದು ಕಿಮೀ ಕಾಮಗಾರಿ ಮುಗಿದರೆ

ಒಟ್ಟು 36 ಕೆರೆಗಳಿಗೆ ನೀರು ಹರಿಸಲು ಪ್ರತಿ ನಿತ್ಯ ಸರಾಸರಿ 600 ಮೀಟರ್ ಪೈಪ್ ಲೈನ್ ಅಳವಡಿಸಲು ಟಾರ್ಗೆಟ್ ಹಾಕಿಕೊಂಡಿದ್ದಾರೆ. ಹೀಗಾಗಿ ಮಳೆಗೂ ಮುನ್ನ ರೈತರ ಹೊಲಗಳಲ್ಲಿ ಪೈಪ್‍ಲೈನ್ ಹಾಕುವ ಕಾಮಗಾರಿಗೆ ಜರೂರಾಗಿ ಮುಗಿಸುತ್ತಿದ್ದಾರೆ.

ತರಳಬಾಳು ಶ್ರೀಗಳ ದೂರ ದೃಷ್ಟಿಯ ಫಲ

ತರಳಬಾಳು ಶ್ರೀಗಳ ದೂರದೃಷ್ಟಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಳಜಿಯಿಂದ 57 ಕೆರೆತುಂಬಿಸುವ ಯೋಜನೆ ತ್ವರಿತವಾಗಿ ಮುಕ್ತಾಯಗೊಳ್ಳುತ್ತದೆ. ನಮ್ಮ ತಾಲೂಕಿನ ಜನರ ಬಹುದಿನಗಳ ಬೇಡಿಕೆ ಈಡೇರಿಸುವ ಕಾರ್ಯ ಹತ್ತಿರವಾಗಿದೆ. ದೇವರ ಕೃಪೆಯಿಂದ ಮಳೆ ಬಂದರೆ ಕೆರೆಗಳು ಭರ್ತಿಯಾಗುತ್ತವೆ. ನಮ್ಮ ತಾಲೂಕು ಮಲೆನಾಡಿನ ರೀತಿ ಅಡಕೆ ನಾಡಾಗುವುದರಲ್ಲಿ ಅನುಮಾನವಿಲ್ಲ.
ಬಿ.ದೇವೇಂದ್ರಪ್ಪ, ಶಾಸಕರು, ಜಗಳೂರು.

ಕೇವಲ 25 ಕಿಮೀ ಕಾಮಗಾರಿ ಬಾಕಿ

ಜಗಳೂರು ಏತ ನಿರಾವರಿ ಯೋಜನೆ ಕಾಮಗಾರಿ ಶೇ.80 ರಷ್ಟು ಮುಕ್ತಾಯವಾಗಿದೆ. 25 ಕಿಮೀ ಪೈಪ್‍ಲೈನ್ ಅಳವಡಿಸಿದರೆ ಯೋಜನೆ ಮುಕ್ತಾಯವಾಗುತ್ತದೆ. ಈಗಾಗಲೇ 20 ಕಿಮೀ ಬೇಕಾಗುವ ಪೈಪ್‍ಗಳು ಸರಬರಾಜಾಗಿವೆ. ಇನ್ನು 5 ಕಿಮೀ ಕಾಮಗಾರಿಗೆ ರೈತರು, ಬಿಎಸ್‍ಎನ್‍ಎಲ್ ಕಂಪನಿಯವರು ಅಡ್ಡಿಯಾಗುತ್ತಿದ್ದಾರೆ. ಇನ್ನು 5 ಕಿಮೀ ಕಾಂಗಾರಿ ಮುಗಿದರೆ ಜಗಳೂರು ಕೆರೆಗೆ ನೀರು ಹರಿಯಲಿದೆ. ಅಲ್ಲಿಂದ ಮತ್ತೆ 15 ಕೆರೆಗಳಿಗೆ ನೀರು ಹರಿದು ಹೋಗಲಿದೆ.
ಆರ್.ಬಿ.ಮಂಜುನಾಥ್, ಎಇಇ, ಕ.ನೀ.ನಿಗಮ, ದಾವಣಗೆರೆ.

ಕನಸು ನನಸಾಗುವ ಕಾಲ ಸನಿಹವಾಗುತ್ತಿದೆ

ಜಗಳೂರು ತಾಲೂಕಿನ ಬಹುದಿನಗಳ ಕನಸು ನನಸಾಗುವ ಕಾಲ ಸನಿಹವಾಗುತ್ತಿದೆ. ಸಿರಿಗೆರೆ ಶ್ರೀಗಳ ಶ್ರಮ, ರಾಜಕಾರಣಿಗಳ ಕಾಳಜಿ, ಕೋವಿಡ್ ಸಂಕಷ್ಟದ ಸಮಯದ ಮಧ್ಯೆಯೂ 57 ಕೆರೆ ಏತ ನೀರಾವರಿ ಪ್ರಾಜಕ್ಟ್ ಶೇ.80 ರಷ್ಟು ಮುಕ್ತಾಯವಾರುವುದು ಸಂತೋಷ ಇಮ್ಮಡಿಯಾಗಿದೆ. ನಮ್ಮ 13 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಂತಾಗುತ್ತದೆ. ನಮ್ಮ ತಾಲೂಕಿನ ಕೆರೆಗಳಿಗೆ ನೀರು ಬಂದರೆ ಅದಕ್ಕಿಂತ ಸಂತೋಷ ಮತ್ತೇನಿದೆ.
ಕೆ.ಬಸವರಾಜಪ್ಪ, ತಾಲೂಕು ರೈತ ಸಂಘದ ಅಧ್ಯಕ್ಷರು, ನಂಜುಂಡಸ್ವಾಮಿ ಬಣ.

Share this Article
Leave a comment

Leave a Reply

Your email address will not be published. Required fields are marked *

error: Content is protected !!