ಜಗಳೂರು ಕೆರೆಗೆ ಗಂಗಾವತರಣ, ಹಾಲಿ, ಮಾಜಿ ಶಾಸಕರ ಸಂಭ್ರಮ

Suddivijaya
Suddivijaya July 6, 2024
Updated 2024/07/06 at 1:44 PM

suddivijayanews6/07/2024
ಸುದ್ದಿವಿಜಯ, ಜಗಳೂರು: ತುಂಗಭದ್ರೆ ನದಿಯಿಂದ ಏತ ನೀರಾವರಿ ಯೋಜನೆಯ ನೀರು ಪಟ್ಟಣದ ಜಗಳೂರು ಕೆರೆಗೆ ಹರಿದ ಹಿನ್ನೆಲೆ ಹಾಲಿ ಶಾಸಕ ಬಿ.ದೇವೇಂದ್ರಪ್ಪ ಮತ್ತು ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ ಹಾಗೂ ಎಚ್.ಪಿ.ರಾಜೇಶ್ ಶನಿವಾರ ಕೆರೆಗೆ ಭೇಟಿ ನೀಡಿ ಕೆರೆಗೆ ಗಂಗಾವತರಣ ವೀಕ್ಷಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ತರಳಬಾಳು ಶ್ರೀಗಳ ದೂರ ದೃಷ್ಟಿಯ ಫಲವಾಗಿ ತುಂಗಭದ್ರಾ ಏತ ಕಾಮಗಾರಿ ಯಶಸ್ವಿಯಾಗಿದ್ದು, ಬರದ ನಾಡಿಗೆ ಗಂಗೆ ಹರಿಯುತ್ತಿರುವುದು ಸಂಭ್ರಮ ಇಮ್ಮಡಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 2018ರಲ್ಲಿ ಆರಂಭಿಸಿದ ಈ ಯೋಜನೆ ಜಗಳೂರು ಕ್ಷೇತ್ರದ ಜನರ ಜೀವನಾಡಿಯಾಗಲಿದೆ.

ಜಗಳೂರು ಪಟ್ಟಣದ ಕೆರೆಗೆ ಹಾಲಿ ಮತ್ತು ಮಾಜಿ ಶಾಸಕರು ಭೇಟಿ ನೀಡಿ ಸಿಹಿ ಹಂಚಿ ಸಂಭ್ರಮಿಸಿದರು.
ಜಗಳೂರು ಪಟ್ಟಣದ ಕೆರೆಗೆ ಹಾಲಿ ಮತ್ತು ಮಾಜಿ ಶಾಸಕರು ಭೇಟಿ ನೀಡಿ ಸಿಹಿ ಹಂಚಿ ಸಂಭ್ರಮಿಸಿದರು.

ಇದಕ್ಕೆ ಕಾರಣೀಭೂತರಾದ ಆಗಿನ ಶಾಸಕರಾದ ಎಚ್.ಪಿ.ರಾಜೇಶ್ ಮತ್ತು ಯೋಜನೆಗಾಗಿ ಶ್ರಮಿಸಿದ ಎಸ್.ವಿ.ರಾಮಚಂದ್ರ ಅವರಿಗೆ ಅಭಿನಂದನೆಗಳು ಎಂದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ನಾನು ಶಾಸಕನಾಗಿದ್ದಾಗ ತರಳಬಾಳು ಹುಣ್ಣಿಮೆಯ ಅಂತಿಮ ದಿನದಂದು ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಭರಮಸಾಗರ ಮತ್ತು ಜಗಳೂರು ಜೋಡಿ ಯೋಜನೆಗೆ ಚಾಲನೆ ನೀಡಿದರು.

ಈ ಯೋಜನೆ ಭರಪೀಡಿತ ಜಗಳೂರು ಕ್ಷೇತ್ರದ ಜನತೆಗೆ ವರದಾನವಾಗಲಿದೆ. ಇದಕ್ಕೆ ಕಾರಣರಾದ ತರಳಬಾಳು ಶ್ರೀಗಳನ್ನು ಮರೆಯಲು ಸಾಧ್ಯವಿಲ್ಲ. ಜಗಳೂರು ಕ್ಷೇತ್ರದ ಜನರು ಗಂಗೆ ಹರಿಯುತ್ತಿರುವುದನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.

ನಾನು ಶಾಸಕನಾಗಿದ್ದಾಗ ಈ ಯೋಜನೆ ಜಾರಿಗೆ ಬಂದಿದ್ದು ಸಂತೋಷದ ವಿಷಯ. ಇನ್ನು ಜಗಳೂರು ಕ್ಷೇತ್ರದಲ್ಲಿ ರೈತರು ಉತ್ತಮ ಬೆಳೆ ಬೆಳೆಯಲು 57 ಕೆರೆ ತುಂಬಿಸುವ ಯೋಜನೆ ವರದಾನವಾಗಲಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಸ್.ವಿ.ರಾಮಚಂದ್ರ, 57 ಕೆರೆ ಯೋಜನೆ ಫಲಪ್ರದವಾಗಲು ಆಡಳಿತಕ್ಕೆ ಬಂದ ಮುಖ್ಯಮಂತ್ರಿಗಳ ಸಹಕಾರ ನೀಡಿದರು. ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ, ಕುಮಾರಸ್ವಾಮಿ ಹೆಚ್ಚಿನ ಆರ್ಥಿಕ ನೆರವು ನೀಡಿ ಯೋಜನೆ ಯಶಸ್ವಿಗೆ ಕೈಜೋಡಿಸಿದರು.

ಯೋಜನೆ ತ್ವರಿತವಾಗಿ ಮತ್ತು ಶಿಸ್ತುಬದ್ಧವಾಗಿ ನಡೆಯಲು ಡಾ. ಶಿವಮೂರ್ತಿ ಶಿವಾಚಾರ್ಯ ಜಗದ್ಗುರುಗಳವರ ಆಶೀರ್ವಾದ ಕಾರಣ ಎಂದು ಸ್ಮರಿಸಿದರು.

ಈ ವೇಳೆ ಕೆಪಿಸಿಸಿ ಎಸ್‍ಟಿ ಘಟದ ರಾಜ್ಯಾಧ್ಯಕ್ಷರಾದ. ಕೆ.ಪಿ. ಪಾಲಯ್ಯ, ಜಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮದ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್,

ಪಲ್ಲಾಗಟ್ಟೆ ಮಹೇಶ್, ಡಿವಿ ನಾಗಪ್ಪ, ಸಿದ್ದೇಶ್ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರು, ಪಟ್ಟಣ ಪಂಚಾಯಿತಿಯ ಹಾಲಿ ಮತ್ತು ಮಾಜಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!