ಸುದ್ದಿವಿಜಯ,ದಾವಣಗೆರೆ: ಶಿವಮೊಗ್ಗ ತಾಲೂಕು ಸೂಗೂರು ಬಳಿ ಹೊನ್ನಾಳಿ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಕಾರು ಮರಕ್ಕೆ ಡಿಕ್ಕಿ ಹೊಡೆದು ಹೊನ್ನಾಳಿ ತಾಲೂಕಿನ ಯುವಕ ಮೃತಪಟ್ಟ ಘಟನೆ ನಡೆದಿದೆ.
ಹೊನ್ನಾಳಿ ತಾಲೂಕು ಸುಂಕದಕಟ್ಟೆ ಗ್ರಾಮದ ಶರತ್ (31) ಮೃತ ಯುವಕ. ಕಾರ್ಯನಿಮಿತ್ತ ಪತ್ನಿ ಹಾಗೂ ಮಗುವಿನ ಜತೆ ಶಿವಮೊಗ್ಗ ನಗರಕ್ಕೆ ಹೋಗಿದ್ದ ಶರತ್,
ಸೋಮವಾರ ಮಧ್ಯಾಹ್ನ ಹೊನ್ನಾಳಿಗೆ ವಾಪಸ್ ಬರುವಾಗ ಅತಿ ವೇಗವಾಗಿ ವಾಹನ ಚಾಲನೆ ಮಾಡಿದ್ದು, ಸೂಗೂರು ಬಳಿ ನಿಯಂತ್ರಣ ಕಳೆದುಕೊಂಡ ಕಿಯಾ ಕಾರು, ರಸ್ತೆ ಬದಿ ಇರುವ ಹುಣಸೆ ಮರಕ್ಕೆ ಡಿಕ್ಕಿ ಹೊಡೆದಿದೆ.
ಹುಣಸೆ ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಬಲಭಾಗ ಸಂಪೂರ್ಣ ನುಜುಗೊಜ್ಜಾಗಿದ್ದು, ಕಾರು ಚಾಲನೆ ಮಾಡುತ್ತಿದ್ದ ಶರತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶರತ್ ಅವರ ಪತ್ನಿ ಹಾಗೂ ಮಗು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.