ಸುದ್ದಿವಿಜಯ, ಜಗಳೂರು: ಪೂರ್ವ ಮುಂಗಾರು ತಾಲೂಕಿನಾದ್ಯಂತ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದು ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ತಾಲೂಕಿನ ಬಿಳಿಚೋಡು, ಸೊಕ್ಕೆ, ಗಡಿಮಾಕುಂಟೆ, ಬಿಸ್ತುವಳ್ಳಿ, ಗೋಪಗೊಂಡನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಉತ್ತಮ ಪೂರ್ವ ಮುಂಗಾರು ಸುರಿದಿದೆ.
ಹೀಗಾಗಿ ಟ್ರ್ಯಾಕ್ಟರ್ ಜಮೀನು ಉಳಿಮೆ ಮಾಡಿಸಿದ್ದರಿಂದ ಬೃಹತ್ ಮಣ್ಣಿನ ದಿಬ್ಬಗಳಾಗಿದ್ದು ಸಮ ಮಾಡಲು ರೈತರು ಅಲ್ಲಲ್ಲಿ ಎತ್ತುಗಳ ಸಹಾಯದಿಂದ ಕುಂಟೆ ಬೇಸಾಯ ಪ್ರಾರಂಭಿಸಿದ್ದಾರೆ.
ರಸ್ತೆ ಮಾಕುಂಟೆ ಗೊಲ್ಲರಹಟ್ಟಿಯ ಗ್ರಾಮದ ರೈತ ಕಾಟಲಿಂಗಪ್ಪ ತಮ್ಮ ಜಮೀನಿನಲ್ಲಿ ಎತ್ತುಗಳ ಸಹಾಯದಿಂದ ಭೂಮಿ ಹದ ಮಾಡುತ್ತಿರುವ ದೃಶ್ಯ ಕಂಡು ಬಂತು.
ಇತ್ತೀಚಿಗೆ ಎತ್ತುಗಳ ಬೇಸಾಯದ ಉಳುಮೆ ಕಡಿಮೆಯಾಗಿದ್ದು, ಟ್ರ್ಯಾಕ್ಟರ್‍ಗಳನ್ನು ಬಳಸುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸ್ತುತ ವರ್ಷ ಪೂರ್ವ ಮುಂಗಾರು ಭರವಸೆ ಮೂಡಿಸಿದ್ದು,
ಜೂನ್ 8 ರಂದು (ಮಾನ್ಸೂನ್)ಮುಂಗಾರು ಕರ್ನಾಟಕ ಪ್ರವೇಶ ಮಾಡುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು ಅಲ್ಲಲ್ಲಿ ಮಳೆಯಾಗುತ್ತಿದೆ.
ತಾಲೂಕಿನಲ್ಲಿ 52 ಸಾವಿರ ಹೆಕ್ಟೇರ್ ಕೃಷಿ ಭೂಮಿ ಇದ್ದು, ಪ್ರಧಾನವಾಗಿ ಮುಂಗಾರಿನಲ್ಲಿ ಮೆಕ್ಕೆಜೋಳ, ಹತ್ತಿ ಸೇರಿದಂತೆ ಅಕ್ಕಡಿ ಬೆಳೆಗಳಾದ ತೊಗರಿ ಬಿತ್ತನೆಗೆ ರೈತರು ತಮ್ಮ ತಮ್ಮ ಜಮೀಣು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಬೀಜ ವಿತರಣೆಗೆ ಸಿದ್ಧತೆ:ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್
ತಾಲೂಕಿನಾದ್ಯಂತ ಕೃಷಿ ಇಲಾಖೆಯಿಂದ ಬೀಜ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂಗಾರು ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಸೂರ್ಯಕಾಂತಿ, ರಾಗಿ, ತೊಗರಿ ಸೇರಿದಂತೆ ರೈತರಿಗೆ ಬೇಕಾದ ಎಲ್ಲ ಬಿತ್ತನೆ ಬೀಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಶೇಖರಣೆ ಮಾಡಿಕೊಳ್ಳಲಾಗಿದೆ.
ಗೊಬ್ಬರ ಆಗ್ರೋ ಕೇಂದ್ರಗಳಲ್ಲಿ ಲಭ್ಯವಿದ್ದು ಮಳೆ ಬಂದ ತಕ್ಷಣ ರೈತರಿಗೆ ಬೇಕಾಗುವ ಬಿತ್ತನೆ ಬೀಜ ವಿತರಣೆ ಮಾಡಲು ಇಲಾಖೆ ಸಿದ್ಧವಿದೆ ಎಂದು ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್ ತಿಳಿಸಿದರು.