ಸುದ್ದಿವಿಜಯ, ಜಗಳೂರು: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅವೈಜ್ಞಾನಿಕ ತೀರ್ಮಾನ, ಭ್ರಷ್ಟಾಚಾರ ಖಂಡಿಸಿ ಸೋಮವಾರ ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂದೆ ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಎಐಟಿಯುಸಿ ಗೌರವಾಧ್ಯಕ್ಷ ಮಹಮ್ಮದ್ ಭಾಷಾ ಮಾತನಾಡಿ, ಕಳೆದ ವರ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ ನೀಡಿರುವ ಹಲವಾರು ರೀತಿಯ ಕಿಟ್‍ಗಳು, ಲ್ಯಾಪ್‍ಟಾಪ್‍ಗಳು, ಟ್ಯಾಬ್‍ಗಳು, ಶಾಲಾ ಕಿಟ್‍ಗಳು, ಆರೋಗ್ಯ ತಪಾಸಣೆ, ಕಾರ್ಮಿಕರ ಕೌಶಲ್ಯಭಿವೃದ್ಧಿ ತರಬೇತಿ ಕಾರ್ಯಕ್ರಮಗಳಲ್ಲಿ ಅವ್ಯವಹಾರವಾಗಿದೆ.
ಕಾರ್ಮಿಕರ ಬೆವರು ಸುರಿಸಿ ದುಡಿದ ತೆರಿಗೆ ಹಣವನ್ನು ಬೇಕಾ ಬಿಟ್ಟಿ ಖರ್ಚು ಮಾಡಿದ್ದಾರೆ. ಇದು 1996ರ ಕಾಯ್ದೆಗೆ ವಿರುದ್ಧವಾಗಿದೆ. ಈ ಅವ್ಯವಹಾರ ತಕ್ಷಣ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಕಳೆದ ಸರಕಾರದಲ್ಲಿ ನಡೆದ ಹಗರಣವನ್ನು ತನಿಖೆ ಮಾಡಿ ಎಂದು ಈಗಿನ ಸರಕಾರಕ್ಕೆ ದೂರು ಸಲ್ಲಿಸಿದರೂ ಇನ್ನೂ ತನಿಖೆ ನಡೆಸಿಲ್ಲ. ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ 7 ಸಾವಿರ ಲ್ಯಾಪ್‍ಟಾಪ್ ಖರೀದಿಸಿದ್ದಾರೆ ಮತ್ತು ಆರೋಗ್ಯ ತಪಾಸಣೆ ಹೆಸರಿನಲ್ಲಿ ಪ್ರತಿ ಜಿಲ್ಲೆಯ 33 ಸಾವಿರ ಕಾರ್ಮಿಕರಿಗೆ ತಲಾ 2850 ರೂ ನಂತೆ 31 ಜಿಲ್ಲೆಗಳಿಗೆ 310 ಕೋಟಿ ರೂ ಮೀಸಲಿಡಲಾಗಿದೆ.
ಆದರೆ ಇದರಲ್ಲಿ ಅವ್ಯವಹಾರವಾಗಿದೆ ತಕ್ಷಣ ನಿಲ್ಲಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿತ್ತು. ಆದರೆ ಅವರು ಅಕ್ರಮ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ. ರಾಜ್ಯದ ಬೆಳಗಾವಿ, ತುಮಕೂರು, ರಾಮನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ನಡೆಯುತ್ತಿರುವ ಆರೋಗ್ಯ ತಪಾಸಣೆ ಹೆಸರಿನಲ್ಲಿ ಭ್ರಷ್ಟಾಚಾರವಾಗಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಎಲ್ಲ ಕಾರ್ಯಕ್ರಮಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ಅಧ್ಯಕ್ಷರಾದ ಬಿ.ಒ.ವೀರಣ್ಣ, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಖಜಾಂಚಿ ನಾಜೀಮಾಸಾಬ್, ಡಿಎಸ್‍ಎಸ್ ಸಂಚಾಲಕ ಸತೀಶ್ ಸೇರಿದಂತೆ ಅನೇಕರು ಇದ್ದರು.