ಸುದ್ದಿವಿಜಯ, ಜಗಳೂರು: ತೀವ್ರ ಮಳೆಯ ಕೊರತೆ ಹಿನ್ನೆಲೆ ಬರ ಮುಕ್ತ ಮಾಡುವ ಸಂಪ್ರಾದಾಯ ಆಚರಣೆ ಮಾಡುವುದು ಗ್ರಾಮೀಣ ಪ್ರದೇಶದಲ್ಲಿ ಪ್ರತಿ ವರ್ಷ ಹೋಳಿಗೆ( ಅಜ್ಜೀ ಅಮ್ಮ) ಅಮ್ಮ ಆಚರಿಸುವುದು ವಾಡಿಕೆ.
ಹೀಗಾಗಿ ಜಗಳೂರು ಪಟ್ಟಣ, ಕೆಳಗೋಟೆ, ಕಲ್ಲೇದೇವರಪುರ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಂಗಳವಾರ ಗ್ರಾಮ ದೇವತೆ ಹೆಸರಲ್ಲಿ ಹೋಳಿಗೆ ಅಮ್ಮ ಹಬ್ಬದ ಮೂಲಕ ಪೂಜೆ ಸಲ್ಲಿಸಲಾಯಿತು.
ಇಡೀ ಗ್ರಾಮದವರೆಲ್ಲಾ ಒಂದೆಡೆ ಸೇರಿ ಮನೆಯಲ್ಲಿ ಪ್ರಸಾದಕ್ಕಾಗಿ ಮಾಡಿದ ಹೋಳಿಗೆ, ಬಾಳೆ ಹಣ್ಣು, ತೆಂಗಿನ ಕಾಯಿ, ಊದು ಬತ್ತಿ, ಬೇವಿನ ಸೊಪ್ಪು, ಮಣ್ಣಿನ ಕುಡಿಕೆ, ಬಳೆ, ಅರಿಶಿನ, ಕುಂಕುಮವನ್ನು ಒಂದು ಮೊರದಲ್ಲಿಟ್ಟುಕೊಂಡು ಮೂಡಣ ದಿಕ್ಕಿಗೆ ಕಾಲ್ನೆಡಿಗೆಯಲ್ಲೇ ತೆಗೆದುಕೊಂಡು ಹೋಗುವಾಗ ಉಧೋ, ಉಧೋ ಎಂದು ಕೂಗುತ್ತಾ ಬೇವಿನ ಮರದಡಿಯಲ್ಲಿಟ್ಟು ಪೂಜಿಸಿ ಬರುವುದು ಈ ಹಬ್ಬದ ಸಂಪ್ರಾದಯವಾಗಿದೆ.
ಹಾಗಾಗಿ ಪ್ರತಿ ವರ್ಷ ಆಷಾಢ ಮಾಸದಲ್ಲಿ ಹೋಳಿಗೆ ಅಮ್ಮ ಹಬ್ಬವನ್ನು ಆಚರಿಸಿ ಊರಿಗೆ ಅಂಟಿಕೊಂಡಿರುವ ರೋಗ ರುಜಿನೆಗಳು ಬಿಟ್ಟು ಹೋಗಿ, ಸಮೃದ್ದ ಮಳೆ, ಬೆಳೆಯಾಗಲಿ ಎಂದು ತಮ್ಮ ತಮ್ಮ ಗ್ರಾಮದಲ್ಲಿರುವ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರು ದೇವರಲ್ಲಿ ಪ್ರಾರ್ಥಿಸಿಕೊಂಡ ದೃಶ್ಯ ಗ್ರಾಮೀಣ ಭಾಗದಲ್ಲಿ ಕಂಡು ಬಂತು.