ಸುದ್ದಿವಿಜಯ, ಜಗಳೂರು: ಬೆಸ್ಕಾಂ ಇಲಾಖೆ ಅಕ್ರಮ ಸಕ್ರಮ ಯೋಜನೆಯ ಕಳಪೆ ಕಾಮಗಾರಿ ಮಳೆಗಾಲದದಲ್ಲಿ ಅನಾವರಣಗೊಂದಿದೆ. ಭಾನುವಾರ ಸಂಜೆ ಸುರಿದ ಭಾರಿ ಗಾಳಿ, ಮಳೆಗೆ ಇಬ್ಬರು ರೈತರ ಟಿಸಿ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ.
ಅಕ್ರಮ ಸಕ್ರಮದ ಅಡಿ ರೈತರು ಆರ್ ಆರ್ ನಂಬರ್ ಪಡೆದು ಒಂದೆರಡು ವರ್ಷಗಳು ಕಾಯ್ದು ವರ್ಕ್ ಆರ್ಡ್‍ರ್ ಬಂದ ನಂತರ ಸಾಲ ಸೂಲ ಮಾಡಿ ಟಿಸಿ, ವಿದ್ಯುತ್ ಕಂಬ ಅಳವಡಿಸಿಕೊಂಡು ಬೆಳೆ ಬೆಳೆಯುವ ಕನಸು ಕಂಡ ರೈತರಿಗೆ ನಿರಾಸೆ ಮೂಡಿದೆ.
ತಾಲೂಕಿನ ಬಿದರಕೆರೆ ಬೆಸ್ಕಾಂ ವಿಭಾಗದ ಅಡಿ ಬರುವ ನಿಬಗೂರು ಗ್ರಾಮದ ಕವಿತಮ್ಮ ಮತ್ತು ಗೌರಮ್ಮನಹಳ್ಳಿ ಗ್ರಾಮದ ಮಹಾಂತೇಶ್ ಅವರ ಹೊಲಗಳಲ್ಲಿ ಅಳವಡಿಸಲಾಗಿದ್ದ 2 ಟಿಸಿ, 7 ವಿದ್ಯುತ್ ಕಂಬಗಳು ಧರೆಗುರುಳಿದ್ದು ಬೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮಾಡಿರುವ ಎಡವಟ್ಟಿನಿಂದ ರೈತರು ಪರಿತಪಿಸುವಂತಾಗಿದೆ.
ಅಕ್ರಮ ಸಕ್ರಮ ಅಡಿ ಅರ್ಜಿಹಾಕಿ ಫಲಾನುಭವಿಗಳಾದ ಇಬ್ಬರು ರೈತರಿಗೆ ಟಿಸಿ ಅವಳಡಿಕೆಗೆ ಎರಡು ವಿದ್ಯುತ್ ಕಂಬಗಳನ್ನು ಹಾಕಬೇಕಿತ್ತು. ಆದರೆ ಸಿಂಗಲ್ ಪೋಲ್ ನೆಟ್ಟು, ಟಿಸಿ ಕೂರಿಸಿ ಕೈತೊಳೆದು ಕೊಂಡಿರುವ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಳೆ, ಗಾಳಿಗೆ ಸಿಲುಕಿ ಟಿಸಿ, ವಿದ್ಯುತ್ ಕಂಬಗಳು ಧರೆಗುರುಳಿದ್ದು ರೈತರು ಪರಿತಪಿಸುವಂತಾಗಿದೆ.
ಮತ್ತೆ ಟಿಸಿ ಅಳವಡಿಕೆಗೆ ರೈತರು ಬೆಸ್ಕಾಂ ಎಇಇ, ಎಸ್‍ಒ, ಲೈನ್‍ಮನ್‍ಗಳಿಗಾಗಿ ಅಲೆಯುವ ಜೊತೆಗೆ ಟಿಸಿ ಅಳವಡಿಕೆ ಕಂಬಗಳ ಮರುಸ್ಥಾಪನೆಗೆ ಒಬ್ಬೊಬ್ಬ ರೈತರು ಅಂದಾಜು 20 ಸಾವಿರ ರೂ ಖರ್ಚು ಮಾಡಬೇಕಾಗಿದೆ. ಅಧಿಕಾರಿಗಳು, ಗುತ್ತಿಗೆದಾರರು ಮಾಡುವ ಎಡವಟ್ಟಿನಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಟಿಸಿ ಅಳವಡಿಸುವಾಗಲೇ ಡಬಲ್ ಕಂಬಗಳನ್ನು ಅಳವಡಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ರೈತರಾದ ಕವಿತಮ್ಮ ಮತ್ತು ಮಹಾಂತೇಶ್ ನೋವು ತೋಡಿಕೊಂಡಿದ್ದಾರೆ.
ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ.
ಗಂಗಾಕಲ್ಯಾಣ ಯೋಜನೆ ಅಡಿ ಟಿಸಿ ಕೂರಿಸಲು ಎರಡು ವಿದ್ಯುತ್ ಕಂಬಗಳಿಗೆ ಅವಕಾಶವಿದೆ. ಆದರೆ ಅಕ್ರಮ ಸಕ್ರಮ ಅಡಿ ಬರುವ ವಿದ್ಯುತ್ ಕಂಬಗಳ ಅಳವಡಿಕೆಗೆ ಸಿಂಗಲ್ ಪೋಲ್ ಹಾಕಲು ಅವಕಾಶವಿದೆ. ಡಿಟೇಲ್ ವರ್ಕ್ ಅವಾರ್ಡ್‍ನಲ್ಲಿ ಇದ್ದಂತೆ ಗುತ್ತಿಗೆದಾರರು ಕಾಮಗಾರಿ ಮಾಡಿದ್ದಾರೆ. ಗಾಳಿ ಮಳೆಗೆ ಈ ಟಿಸಿಗಳು ಬಿದ್ದು ಹೋಗಿದ್ದು ರೈತರಿಗೆ ಸಮಸ್ಯೆಯಾಗದಂತೆ ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ.
-ರಾಮಚಂದ್ರಪ್ಪ, ಎಇಇ, ಬೆಸ್ಕಾಂ, ಜಗಳೂರು