ಸುದ್ದಿವಿಜಯ, ಜಗಳೂರು:ತಾಲೂಕಿನ ಅಣಬೂರು ಗ್ರಾಪಂನಲ್ಲಿ ಕಂಪ್ಯೂಟರ್ ಆಪರೇಟರ್ ಸರಿಯಾಗಿ ಕೆಲಸಕ್ಕೆ ಬಾರದ ಹಿನ್ನಲೆ ನರೇಗಾ ಕೂಲಿ ಕೆಲಸ, ಇ-ಸ್ವತ್ತು ಸೇರಿದಂತೆ ಇತರೆ ಸೌಲಭ್ಯಗಳನ್ನು ಪಡೆಯಲು ಜನರು ಅಲೆದಾಡುತ್ತಿದ್ದು ಅಭಿವೃದ್ದಿಗೆ ಹಿನ್ನಡೆಯಾಗಿದೆ ಎಂದು ಗ್ರಾ.ಪಂ ಅಧ್ಯಕ್ಷೆ ಕವಿತಾ ರೇಣುಕೇಶ್ ಆರೋಪಿಸಿದರು.
ಪಟ್ಟಣದ ಪ್ರೆಸ್‍ಕ್ಲಬ್‍ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,13 ಹಳ್ಳಿಗಳಿಂದ ಕೂಡಿದ ಗ್ರಾಮ ಪಂಚಾಯಿತಿಯಲ್ಲಿ 22 ಸದಸ್ಯರನ್ನೊಳಗೊಂಡಿದ್ದು, ನಿತ್ಯ ನೂರಾರು ಜನರು ಕಚೇರಿಗೆ ಬಂದು ಹೋಗುತ್ತಾರೆ. ಆದರೆ ಕಳೆದ ಮೂರ್ನಾಲ್ಕು ತಿಂಗಳಿಂದಲೂ ಕಂಪ್ಯೂಟರ್ ನಿರ್ವಾಹಕ ನಿಂಗಪ್ಪ ಗೈರು ಹಾಜರಾತಿ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದರು.

ನರೇಗಾ ಯೋಜನೆಯಡಿ ಕೂಲಿ ಮಾಡಲು ಸಾವಿರಾರು ಮಹಿಳೆಯರು, ಪುರುಷರು ಕೆಲಸ ಬರುತ್ತಾರೆ. ಆದರೆ ಎನ್‍ಎಂಆರ್, ಎಂಐಎಸ್ ಮಾಡಲು ಕಂಪ್ಯೂಟರ್ ಆಪರೇಟರ್ ಅವಶ್ಯಕ ಅವರಿಲ್ಲದೇ ಕೂಲಿಕಾರರಿಗೆ ಹಣ ತುಂಬಲು ಸಾಧ್ಯವಾಗಿಲ್ಲ. ಜನರು ಪಂಚಾಯಿತಿಗೆ ಬಂದು ಪ್ರತಿಭಟನೆ ಮಾಡುತ್ತಾರೆ. ಇದರಿಂದ ಕಿರಿಕಿರಿಯುಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಂಪ್ಯೂಟರ್ ಅಪರೇಟರ್‍ಗೆ ವೇತನ ಕೊಟ್ಟಿಲ್ಲವೆಂಬ ಕಾರಣ ಕೆಲಸಕ್ಕೆ ಬರುತ್ತಿಲ್ಲ. ಆದರೆ ಪಿಡಿಒ ಕೇಳಿದರೆ ಅವರ ಹೊರಗುತ್ತಿಗೆ ಆಧಾರದ ಮೇಲೆ ಬಂದಿದ್ದಾರೆ. ಟೆಂಡರ್ದಾರರು ಹಣ ತುಂಬಬೇಕು. ನಾವು ಕೊಡಲು ಬರುವುದಿಲ್ಲವೆಂದು ತಿಳಿಸಿದ್ದಾರೆ.
ಈ ಬಗ್ಗೆ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರ ಗಮನಕ್ಕೂ ತಾರಲಾಗಿದ್ದು ಸರಿಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಪಂಚಾಯಿತಿಗೆ ಕಂಪ್ಯೂಟರ್ ಆಪರೇಟರ್ ನೇಮಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ರೇಣುಕೇಶ್ ಇದ್ದರು.