ಸುದ್ದಿವಿಜಯ, ಜಗಳೂರು: ಕೃಷಿ ಇಲಾಖೆಯಿಂದ ವಿತರಣೆ ಮಾಡುತ್ತಿರುವ ಶೇಂಗಾ ಬಿತ್ತನೆ ಬೀಜ ಕಳಪೆಯಾಗಿದೆ ಎಂದು ಆಪಾಧಿಸಿ ತಾಲೂಕಿನ ರೈತರು ಪ್ರತಿಭಟನೆ ನಡೆಸಿದರು.
ಇಲ್ಲಿನ ಎಪಿಎಂಸಿ ಆವರಣದಲ್ಲಿರುವ ಬೀಜ ವಿತರಣಾ ಕೇಂದ್ರದ ಬಳಿ ಬೆಳಗ್ಗೆಯಿಂದಲೇ ಜಮಾಯಿಸಿದ್ದ ಕಸಬಾ ಹೋಬಳಿಯ ನೂರಾರು ರೈತರು, ನಾ ಮುಂದು ತಾ ಮುಂದು ಎಂದು ಶೇಂಗಾ ಬೀಜ ಖರೀದಿಸಿದರು.
ಚೀಲ ತೆರೆದು ನೋಡಿದರೆ ಸೀರಲು ಬೀಜ ಮತ್ತು ಹುಳುಕು ಕಂಡಿದ್ದು, ಬಿತ್ತನೆಗೆ ಬರುವುದಿಲ್ಲವೆಂದು ಶೇಂಗಾ ಕಾಯಿ ವಾಪಸ್ಸು ಪಡೆಯುವಂತೆ ರೈತರು ಪಟ್ಟು ಹಿಡಿದಿದ್ದಾರೆ. ಆದರೆ ಕೃಷಿ ಇಲಾಖೆ ಸಿಬ್ಬಂದಿಗಳು ಇದಕ್ಕೆ ಒಪ್ಪದ ಹಿನ್ನೆಲೆ ರೈತರು ಮತ್ತು ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಶೇಂಗಾ ಬಿತ್ತನೆಗೆ ಸಕಾಲವಾಗಿದೆ, ಈಗ ಅಲ್ಪಸ್ವಲ್ಪ ಮಳೆ ಬೀಳುತ್ತಿರುವುದರಿಂದ ಬಿತ್ತನೆ ಬೀಜ ಸಿದ್ದತೆ ಮಾಡಿಕೊಳ್ಳಬೇಕು, ಕೃಷಿ ಇಲಾಖೆಯಿಂದ ಸಹಾಯದನದಲ್ಲಿ ನೀಡುವ ಶೇಂಗಾ ಕಾಯಿ ಖರೀದಿಸಿದರೆ ಬೀಜ ಸರಿ ಇಲ್ಲ, ಇಂತಹ ಬೀಜಗಳನ್ನು ಬಿತ್ತಿದರೆ ಒಂದು ಸಸಿ ಕೂಡ ಹುಟ್ಟುವುದಿಲ್ಲ, ಸರ್ಕಾರದಿಂದ ರೈತರಿಗೆ ವಿತರಣೆ ಮಾಡುವ ಬಿತ್ತನೆ ಬೀಜಗಳು ಕಳಪೆಯಾದರೆ ಬಡವರ ಗತಿ ಏನು ಎಂದು ರೈತರು ಆಕ್ರೋಶವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸಿ.ಎಂ ಹೊಳೆ ಚಿರಂಜೀವಿ ಮಾತನಾಡಿ, ಶೇಂಗಾ ಬೆಳೆಯುವ ರೈತರಿಗೆ ಕಳಪೆ ಬಿತ್ತನೆ ಬೀಜ ನೀಡುವ ಮೂಲಕ ಕೃಷಿ ಇಲಾಖೆ ತುಂಬ ಅನ್ಯಾಯ ಮಾಡುತ್ತಿದೆ. ಮಳಿಗೆಯಲ್ಲಿ ದಾಸ್ತಾನು ಮಾಡಿರುವ ಶೇಂಗಾಕಾಯಿ ಗುಣಮಟ್ಟವಿಲ್ಲ, ಎಲ್ಲಾ ಕಳಪೆಯಾಗಿವೆ, ಕೃಷಿ ಅಧಿಕಾರಿಗಳು ಕೂಡಲೇ ಶೇಂಗಾಕಾಯಿಯನ್ನು ವಾಸಪಸ್ಸು ಕಳಿಸಿ ಬೇರೆ ಶೇಂಗಾ ಕಾಯಿ ಖರೀದಿಸಿ ವಿತರಣೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದಾರೆ, ಬಿತ್ತನೆ ಬೀಜಗಳು ಕಳಪೆಯಾಗಿದೆ, ರಸ ಗೊಬ್ಬರವನ್ನು ದುಬಾರಿ ಬೆಲೆ ಮಾರಾಟ ಮಾಡುತ್ತಿದ್ದಾರೆ. ಆದರೆ ಕೃಷಿಕರು ಮಾತ್ರ ಸಾಲ ಸೂಲ ಮಾಡಿ ಜಮೀನಿಗೆ ಬೀಜ, ಗೊಬ್ಬರು ತಂದು ಹಾಕಿದ್ದಾರೆ.ಪ್ರತಿ ವರ್ಷ ರೈತರು ಒಂದಲ್ಲಾ ಒಂದು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ, ಆದರೆ ತಾಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತುಕೊಂಡಿದೆ, ಕ್ಷೇತ್ರದ ಶಾಸಕರು, ಸಂಸದರು ಇತ್ತ ಗಮನಹರಿಸುತ್ತಿಲ್ಲ ಎಂದು ದೂರಿದರು.
ಶೇಂಗಾ ಬಿತ್ತನೆಗೆ ಗುಣಮಟ್ಟದ ಬೀಜ ಕೊಡದೇ ಕಾಲಹರಣ ಮಾಡಿ, ಬಿತ್ತನೆಗೆ ವಂಚಿತರಾದರೆ ಇದಕ್ಕೆ ನೇರ ಹೊಣೆ ತಾಲೂಕು ಆಡಳಿತವೇ ಹೋರಬೇಕಾಗುತ್ತದೆ. ಒಂದೆರಡು ದಿನಗಳಲ್ಲಿ ಬೀಜ ವಿತರಣೆ ಮಾಡದೇ ಹೋದಲ್ಲಿ ತಾಲೂಕು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತರ ಸಮಸ್ಯೆ ಆಲಿಸಿದ ಅಧಿಕಾರಿ:
ಸ್ಥಳಕ್ಕಾಗಮಿಸಿದ ಕೃಷಿ ಸಹಾಯಕ ನಿರ್ದೇಶಕ ಶೇಂಗಾಕಾಯಿ ಪರಿಶೀಲನೆ ಮಾಡಿದರು. ಮುತ್ತಿಗೆ ಹಾಕಿದ ರೈತರು ಅಧಿಕಾರಿಗಳ ಮೇಲೆ ರೇಗಾಡಿದರು. ಬಿತ್ತನೆ ಬೀಜ ಸರಿಯಿಲ್ಲ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ವಾಸಸ್ಸು ಕಳಿಸಲಾಗುವುದು, ಒಂದೆರಡು ದಿನ ಕಾಲವಕಾಶ ಕೊಡಿ ಬೇರೆ ಶೇಂಗಾ ಕಾಯಿ ತರಿಸಿ ಕೊಡಲಾಗುವುದು, ನಾನು ರೈತ ಕುಟುಂಬದಿಂದ ಬಂದವನು, ತಮ್ಮ ಕಷ್ಟ ಏನೆಂಬುವುದು ಅರ್ಥವಾಗಿದೆ, ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ, ಎಲ್ಲರು ಸಹಕರಿಸಿ ಎಂದು ಎಡಿಎ ಮಿಥುನ್ ಕೀಮಾವತ್ ಮನವೋಲಿಸಿದರು. ಇದಕ್ಕೆ ರೈತರು ಅಧಿಕಾರಿಯ ಮಾತಿಗೆ ಕಿವಿಗೊಟ್ಟು ಕಾಲವಕಾಶ ನೀಡಿದರು.