ಸುದ್ದಿವಿಜಯ, ಜಗಳೂರು: ‘ಇತಿಹಾಸ ಎಲ್ಲವನ್ನೂ ಹೇಳುತ್ತದೆ. ಭವಿಷ್ಯವನ್ನು ಕೂಡಾ’… ಎಂದು ಪ್ರಖ್ಯಾತ ಇತಿಹಾಸ ತಜ್ಞ ಲಾ-ಮಾರ್ಟಿನ್ ವ್ಯಾಖ್ಯಾನ ಸರ್ವ ಕಾಲಕ್ಕೂ ಸತ್ಯ.
ಇತಿಹಾಸ ಇದ್ದರಷ್ಟೇ ಭವಿಷ್ಯದ ದಾರಿ ಸುಗಮ. ಭಾರತದ ಇತಿಹಾಸವನ್ನು ಬಂಡೆಗಲ್ಲು ಶಾಸನ, ವೀರಗಲ್ಲು ಶಾಸನ ಹೀಗೆ ಅನೇಕ ಕುರುಹುಗಳಲ್ಲಿ ಕಾಣಬಹುದು.
ಜಗಳೂರು ತಾಲೂಕಿನ ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲು ಪತ್ತೆಯಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಹೌದು, ಜಗಳೂರು ಪಟ್ಟಣದಿಂದ ಸುಮಾರು 17 ಕಿ.ಮೀ ದೂರದಲ್ಲಿರುವ ಸೂರಗೊಂಡನಹಳ್ಳಿ ಮತ್ತು ಕಲ್ಲೇನಹಳ್ಳಿ ಗ್ರಾಮಗಳ ಮಧ್ಯ ಮಾಳಜ್ಜಿ ಕಲ್ಲು ಎಂದೇ ಕರೆಯಲಾಗುವ ಬೆಟ್ಟದ ತಪ್ಪಲಿನಲ್ಲಿ ಸುಮಾರು 10 ರಿಂದ 12 ಬೃಹತ್ ಶಿಲಾಯುಗದ ಕಲ್ಲುವೃತ್ತ ಸಮಾಧಿಗಳನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀ ಕೋಲ್ಲಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಕ್ತನಶಾಸ್ತ್ರದ ಉಪನ್ಯಾಸಕ ಡಾ.ಪಿ.ಬಿ.ಮಂಜಣ್ಣ ದೊಡ್ಡಬೊಮ್ಮನಹಳ್ಳಿ ಇವರು ಶೋಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾವ ಕಾಲದ ಸಮಾಧಿಗಳು?
ಬೃಹತ್ ಶಿಲಾಯುಗವು ನವಶಿಲಾಯುಗದ ನಂತರದ ಕಾಲಘಟ್ಟದ್ದಾಗಿವೆ. ಇವು ಕ್ರಿ.ಪೂ 1200 ರಿಂದ ಕ್ರಿಪೂ 200ರ ಕಾಲಘಟ್ಟದ ಸಮಾಧಿಗಳು ಎಂದು ತಿಳಿದು ಬಂದಿದೆ. ಆ ಕಾಲದ ಮಾನವರು ಮರಣದ ಬಳಿಕ ಮಾನವನ ದೇಹವನ್ನು ಸಂಸ್ಕಾರ ಮಾಡಿ ಅದರ ಸುತ್ತಲೂ ಕಲ್ಲು ವೃತ್ತಗಳನ್ನು ನೆಟ್ಟು ಹೋಗುವ ಸಂಪ್ರದಾಯವಿತ್ತು.
ಹೀಗಾಗಿ ಅವುಗಳನ್ನು ಕಲ್ಲುವೃತ್ತ ಸಮಾಧಿಗಳು ಎಂದು ಕರೆಯಲಾಗುತ್ತದೆ. ನೆಲಮಟ್ಟದಲ್ಲಿ ಕಲ್ಲುಗಳನ್ನು ವೃತ್ತಾಕಾರವಾಗಿ ಜೋಡಿಸುವ ಪದ್ಧತಿಯಿತ್ತೆಂದು ತಿಳಿದು ಬಂದಿದೆ. ಈ ಸಮಾಧಿಗಳ ವಿಶೇಷ ಒಂದು ಸಮಾಧಿಗೆ ಒಂದು ವೃತ್ತಾಕಾರ ಇರುವುದನ್ನು ಕಾಣಬಹುದಾಗಿದೆ.
ಚಿತ್ರದುರ್ಗ ಬ್ರಹ್ಮಗಿರಿ ಬೆಟ್ಟದ ಉತ್ಖನನವನ್ನು ಆಧರಿಸಿ ಸತ್ತ ವ್ಯಕ್ತಿ ಮತ್ತೆ ಹುಟ್ಟಿ ಬರುತ್ತಾನೆ. ಪುನರ್‍ಜನ್ಮದ ಕಲ್ಪನೆಯಿಂದ ಸಮಾಧಿ ಯೊಳಗೆ ಮೃತ ದೇಹವಿರಿಸಿ ಅವನು ನಿತ್ಯ ಉಪಯೋಗಿಸುತ್ತಿದ್ದ ವಸ್ತುಗಳಾದ ಮಡಕೆ-ಕುಡಿಕೆ, ಆಹಾರ ಪದಾರ್ಥಗಳು, ಕಬ್ಬಿಣದ ವಸ್ತುಗಳನ್ನು ಶವದ ಸುತ್ತಲೂ ಇಡುತ್ತಿದ್ದರು.
ಪ್ರಸ್ತುತ ಮಾಳಜ್ಜಿ ಕಲ್ಲು ಪ್ರದೇಶದಲ್ಲಿ 10 ರಿಂದ 12 ಸಮಾಧಿಗಳಲ್ಲಿ ವೃತ್ತಾಕಾರದ ಸಣ್ಣಪ್ರಮಾಣದ ಗುಂಡುಗಳನ್ನು ಜೋಡಿಸಲಾಗಿದೆ. ಇವುಗಳ ವ್ಯಾಸ 20/20 ಅಡಿಗಳಾಗಿವೆ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಮಡಿಕೆ ಕುಡಿಕೆಗಳ ಚೂರುಗಳು ದೊರೆತಿವೆ. ಈ ಜಾಗದಲ್ಲಿ ರೈತರು ಉಳಿಮೆ ಮಾಡುತ್ತಿದ್ದಾರೆ.
ಈ ಹಿಂದೆ ಜಗಳೂರು ತಾಲೂಕಿನ ಗುಹೇಶ್ವರ ಬೆಟ್ಟದ ತಪ್ಪಲಿನಲ್ಲಿ 2014ರಲ್ಲಿ ಇದೇ ಮಾದರಿಯ ಸುಮಾರು 25 ಸಮಾಧಿಗಳು ಪತ್ತೆಯಾಗಿದ್ದವು. ಜಗಳೂರು ಐತಿಹಾಸಿ ದೃಷ್ಟಿಯಿಂದ ಬೃಹತ್ ಶಿಲಾಯುಗದ ಪ್ರಮುಖ ತಾಣವಾಗಿದೆ.
ಇನ್ನು ಹೆಚ್ಚಿನ ಕ್ಷೇತ್ರ ಕಾರ್ಯ ಕೈಗೊಂಡರೆ ಬೆಟ್ಟದ ತಪ್ಪಲುಗಳಲ್ಲಿ, ಗುಹೆಗಳಲ್ಲಿ ಆ ಕಾಲಘಟ್ಟಕ್ಕೆ ಸೇರಿದ ಬಂಡೆಗಳ ಮೇಲೆ ವರ್ಣ ಚಿತ್ರಗಳು, ಗೀರು ಬಂಡೆ ಚಿತ್ರಗಳು ದೊರೆಯುವುದರಲ್ಲಿ ಸಂಶಯವಿಲ್ಲ. ಇಂತಹ ಐತಿಹಾಸಿಕ ಪ್ರದೇಶಗಳನ್ನು ಸಂರಕ್ಷಿಸಿ ಭವಿಷ್ಯದ ಪೀಳಿಗೆಗೆ ಉಳಿಸುವುದು ಆದ್ಯ ಕರ್ತವ್ಯ ಎನ್ನುತ್ತಾರೆ ಡಾ.ಪಿ.ಬಿ.ಮಂಜಣ್ಣ ದೊಡ್ಡಬೊಮ್ಮನಹಳ್ಳಿ.
ಒಟ್ಟಾರೆ ಜಗಳೂರು ಕ್ಷೇತ್ರದಲ್ಲಿ ಸಾಕಷ್ಟು ಐತಿಹಾಸಿಕ ಹಿನ್ನೆಲೆಯ ತಾಣಗಳು ಇರುವುದನ್ನು ಪತ್ತೆ ಹಚ್ಚು ಕಾರ್ಯ ನಿರಂತರವಾಗಿ ನಡೆದರೆ ಇತಿಹಾಸ ಭವಿಷ್ಯವನ್ನು ಹೇಳುವುದರಲ್ಲಿ ಸಂದೇಹವೇ ಇಲ್ಲ.
ಕಲ್ಲಿನ ಆಯುಧಗಳು ಪತ್ತೆ!
ಮಾಳಜ್ಜಿ ಕಲ್ಲು ಪ್ರದೇಶದಲ್ಲಿ ಶಿಲಾಯುಗ ಸಮಾಧಿಗಳು ಪತ್ತೆಯಾಗಿವೆ. ಇದೇ ರೀತಿ 2014ರಲ್ಲಿ ಗುಹೇಶ್ವರ ಬೆಟ್ಟದಲ್ಲಿಯೂ 25 ಸಮಾದಿಗಳನ್ನು ಮತ್ತೆ ಮಾಡಿದ್ದೆವು. ಪ್ರಸ್ತುತ ಮಾಳಜ್ಜಿ ಕಲ್ಲು ಬೆಟ್ಟದಲ್ಲಿ ನವಶಿಲಾಯುಗಕ್ಕೆ ಸೇರಿದ ಕಲ್ಲಿನ ಆಯುಧಗಳು ಪತ್ತೆಯಾಗಿವೆ. ಆಗಿನ ಜನರು ಅವುಗಳನ್ನು ಅಸ್ತ್ರವಾಗಿ ಉಪಯೋಗಿಸುತ್ತಿದ್ದರು ಎಂದು ಅವುಗಳ ವಿನ್ಯಾಸದಿಂದ ತಿಳಿಯಬಹುದಾಗಿದೆ. ಆಗಿನ ಕಾಲಕ್ಕೆ ಸೇರಿದ ಬಣ್ಣದ ಚಿತ್ರಗಳ ತುಣುಕುಗಳು ಪತ್ತೆಯಾಗಿವೆ. ಇನ್ನಷ್ಟು ಸಂಶೋಧನೆ ಕೈಗೊಂಡರೆ ಹೆಚ್ಚಿನ ಮಾಹಿತಿ ಲಭ್ಯವಾಗಬಹುದು.
-ಡಾ.ಪಿ.ಬಿ.ಮಂಜಣ್ಣ ದೊಡ್ಡಬೊಮ್ಮನಹಳ್ಳಿ. ಪ್ರಾಕ್ತನಶಾಸ್ತ್ರದ ಉಪನ್ಯಾಸಕ, ಸ.ಪ್ರ.ದ. ಕಾಲೇಜು ಗಂಗಾವತಿ.