ಜಗಳೂರು: ವಸತಿ ಶಾಲೆಗಳ ಹೊರಗುತ್ತಿಗೆ ನೌಕರರ ಪ್ರತಿಭಟನೆ

Suddivijaya
Suddivijaya August 16, 2023
Updated 2023/08/16 at 12:12 PM

ಸುದ್ದಿವಿಜಯ, ಜಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಸತಿ ಶಾಲೆಗಳ ಹೊರಗುತ್ತಿಗೆ ನೌಕರರು ಪಟ್ಟಣದ ಪ್ರವಾಸಿ ಮಂದಿರದಿಂದ ತಾಪಂ ಕಚೇರಿಯವರೆಗೆ ದಸಂಸಾ ಮತ್ತು ಎಐಯುಟಿಯುಸಿ ನೇತೃತ್ವದಲ್ಲಿ ಜಾಥಾ ನಡೆಸಿ ತಾಪಂ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.

ಈ ವೇಳೆ ಡಿಎಸ್‍ಎಸ್ ಸಂಚಾಲಕ ಬಿ.ಸತೀಶ್ ಮಾತನಾಡಿ, ಸರಕಾರದ ವಿವಿಧ ಇಲಾಖೆಯಲ್ಲಿ ಅಡುಗೆ ಸಿಬ್ಬಂದಿ, ಅಡುಗೆ ಸಹಾಯಕರು, ಸ್ವಚ್ಛತಾ ಸಿಬ್ಬಂದಿ ಹಾಗೂ ಕಾವಲುಗಾರರು ಹೊರಗುತ್ತಿಗೆ ನೇಮಕಾತಿ ಮೂಲಕ 10ರಿಂದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾರ್ಯನಿರ್ವಹಿಸುತ್ತಿರುವ ವಿಧವೆಯರು ಮತ್ತು ಒಂಟಿ ಮಹಿಳೆಯರು ಹೆಚ್ಚಾಗಿದ್ದಾರೆ. ಇವರಿಗೆ ಇಲಾಖೆಗಳಿಂದ ನೀಡುವ ಅತ್ಯಲ್ಪ ಕನಿಷ್ಠ ವೇತನವು ಸಕಾಲಕ್ಕೆ ದೊರೆಯುತ್ತಿಲ್ಲ. ಎರಡು ಮೂರು ತಿಂಗಳಾದರೂ ವೇತನ ಬಂದಿಲ್ಲ.

ಕಾರ್ಮಿಕರಿಗೆ ಶಾಸನಬದ್ಧ ಸೌಲಭ್ಯಗಳಾದ ವೇತನ ಚೀಟಿ, ಇಎಸ್‍ಐ, ಪಿಎಫ್‍ಗಳ ಬಗ್ಗೆ ಮಾಹಿತಿಗಳನ್ನು ನೀಡುತ್ತಿಲ್ಲ. ಕಾರ್ಮಿಕ ನಿಯಮಗಳನ್ನು ಮೀರಿ ಎಂಟು ಗಂಟೆಗಿಂತ ಹೆಚ್ಚು ದುಡಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ದುಡಿಮೆಗೆ ಹೆಚ್ಚುವರಿ ವೇತನ (ಓಟಿ)ನೀಡುತ್ತಿಲ್ಲ.

ಅಲ್ಲದೆ ಹಲವಾರು ವರ್ಷಗಳಿಂದ ಕೆಲಸ ಮಾಡಿದಂತಹ ಕಾರ್ಮಿಕರನ್ನು ಯಾವ ಕಾರಣವಿಲ್ಲದೆ ಏಕಾಏಕಿ ಕೆಲಸದಿಂದ ತೆಗೆದುಹಾಕಿ ಆ ಜಾಗಕ್ಕೆ ತಮಗೆ ಬೇಕಾದವರನ್ನು ಸೇರಿಸಿಕೊಳ್ಳಲಾಗುತ್ತಿದೆ. ಕಾರ್ಮಿಕರಿಗೆ ಏಜೆನ್ಸಿಗಳಿಂದ ನೀಡುತ್ತಿರುವ ವೇತನವನ್ನು ನೇರವಾಗಿ ಸರ್ಕಾರವೇ ನೀಡಬೇಕು ಮತ್ತು ವಾರದ ರಜೆ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ  ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ನಿಂಗರಾಜು, ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ತಾಲೂಕ ಅಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ಪರಸಪ್ಪ, ಶೇಖರಪ್ಪ, ಮೂರ್ತಿ, ರೇಖಾ, ಸರೋಜಮ್ಮ, ಸುನಿತಾ, ಹಾಗೂ ದಸಂಸ ಪದಾಧಿಕಾರಿಗಳಾದ ಕ್ಯಾಸನಹಳ್ಳಿ ಹನುಮಂತಪ್ಪ, ಸಾಗಲಗಟ್ಟೆ ತಿಮ್ಮಣ್ಣ, ಎಚ್.ಎಂ.ಹೊಳೆ ಉಮೇಶ್, ಎಸ್.ಶಿವಕುಮಾರ್, ರಾಜನಹಟ್ಟಿ ಚೌಡಪ್ಪ, ಸಣ್ಣ ನಾಗಪ್ಪ, ಎಚ್.ಎಂ.ಹೊಳೆ ಮಂಜು ಮತ್ತು ಅನೇಕ ಹಾಸ್ಟೆಲ್ ಹೊರಗುತ್ತಿಗೆ ನೌಕರರರು ಉಪಸ್ಥಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!