ಸುದ್ದಿವಿಜಯ, ಜಗಳೂರು: ವಿಧಾನಸಭಾ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಹೊರವಲಯದ ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಹೆಲಿಪ್ಯಾಡ್‍ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಅವರು 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ.
ಈ ಮೂಲಕ ಸ್ವತಂತ್ರವಾಗಿ ನಮ್ಮ ಪಕ್ಷ ಅಧಿಕಾರ ಹಿಡಿಯಲಿದೆ. ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ರಂತಹ ನಾಯಕರ ವರ್ಚಸ್ಸು ಹೊಂದಿರುವ ಪಕ್ಷವಾಗಿದೆ. ಅಭಿವೃದ್ಧಿ ಆದಾರಿತ ಚುನಾವಣೆಯಾಗಿದ್ದು ಮತದಾರರಿಗೆ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತೇವೆ.
ಈ ಭಾಗದಲ್ಲಿ ನಮ್ಮ ಸರಕಾರ ಅಪ್ಪರ್ ಭದ್ರಾ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು 57 ಕೆರೆ ತುಂಬಿಸುವ ಮಹತ್ವಾಕಾಂಕ್ಷಿಯ ಯೋಜನೆಗಳನ್ನು ನೀಡುವ ಮೂಲಕ 3500 ಕೋಟಿ ಹಣ ಕ್ಷೇತ್ರಕ್ಕೆ ನೀಡಲಾಗಿದೆ. ನಾನು 70 ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ. ರಾಜ್ಯಾದ್ಯಂತ ಸುತ್ತಿ ಬಿಜೆಪಿ ಅಧಿಕಾರಕ್ಕೆ ತರುವುದು ನನ್ನ ಗುರಿ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸರಕಾರ ಬಂದ ನಂತರ ಅನುದಾನ ತರುವಲ್ಲಿ ಶಾಸಕ ರಾಮಚಂದ್ರ ಇಡೀ ಜಿಲ್ಲೆಯಲ್ಲೇ ಮುಂಚೂಣೆಯಲ್ಲಿದ್ದಾರೆ. ಈ ಬಾರಿ ಅವರು 5ನೇ ಚುನಾವಣೆ ಎದುರಿಸುತ್ತಿದ್ದಾರೆ. ಅನುಭವಿ ರಾಜಕಾರಣಿಯಾಗಿರು ಅವರಿಗೆ ಜನರ ಶ್ರೀರಕ್ಷೆ ನೀಡಿ ಹೆಚ್ಚಿನ ಮತಗಳಿಂದ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ರೋಡ್ ಶೋ 10 ಸಾವಿರಕ್ಕೂ ಹೆಚ್ಚು ಜನ ಭಾಗಿ
ಪಟ್ಟಣದ ಮಹಾತ್ಮಾಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಸ್.ವಿ.ರಾಮಚಂದ್ರ ಸೇರಿದಂತೆ ಅನೇಕರು ರೋಡ್ ಶೋ ನಡೆಸಿದರು. ಅಂದಾಜು 10 ಸಾವಿರಕ್ಕೂ ಹೆಚ್ಚು ಜನ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಿ.ಎಸ್.ಯಡಿಯೂರಪ್ಪ ಅವರು ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕ್ಷೇತ್ರದ ಉಸ್ತುವಾರಿ ಆರುಂಡಿ ನಾಗರಾಜ್, ಬಿಜೆಪಿ ಉಪಾಧ್ಯಕ್ಷ ಡಿ.ವಿ.ನಾಗಪ್ಪ, ಮಂಡಲ್ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್ ಸೇರಿದಂತೆ ಅನೇಕರು ಇದ್ದರು.