suddivijayanews17/06/2024
ಸುದ್ದಿವಿಜಯ, ಜಗಳೂರು: ತಾಲೂಕಿನಲ್ಲಿ ಮುಸ್ಲಿಂ ಸಮುದಾಯವಿರುವ ಗ್ರಾಮಗಳಲ್ಲಿ ಸ್ಮಶಾನ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಬಿ. ದೇವೇಂದ್ರಪ್ಪ ಭರವಸೆ ನೀಡಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಸೋಮವಾರ ಬಕ್ರೀದ್ ಹಬ್ಬದ ಹಿನ್ನೆಲೆ ತಾಲೂಕು ಮುಸ್ಲಿಂ ಸಮುದಾಯದಿಂದ ಹಮ್ಮಿಕೊಂಡಿದ್ದ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು.
ತಾಲೂಕಿನದ್ಯಂತ 40 ಹೆಚ್ಚು ಮುಸ್ಲಿಂ ಗ್ರಾಮಗಳಲ್ಲಿ ಸ್ಮಶಾನ ಕೊರತೆ ಇದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿ ಅಗತ್ಯವಿರುವ ಕಡೆ ಸ್ಮಶಾನಕ್ಕೆ ಬೇಕಾಗುವ ಜಾಗ, ಅಭಿವೃದ್ದಿ ಅನುದಾನ ನೀಡಲಾಗುವುದು ಭರವಸೆ ನೀಡಿದರು.
ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ದೈವ ಸೃಷ್ಟಿಯಾಗಿದೆ. ಇಲ್ಲಿ ಜಾತಿ, ಧರ್ಮ ಭೇದ ಭಾವವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಧರ್ಮ, ಧರ್ಮಗಳ ನಡುವೆ ವೈಶಮ್ಯಗಳು ಹೆಚ್ಚಾಗುತ್ತಿವೆ. ಆದ್ದರಿಂದ ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲರು ಸಮಾನತೆಯಿಂದ ಬದುಕಬೇಕು ಎಂದರು.
ಸಿದ್ದಿಹಳ್ಳಿ ಗ್ರಾಮದಲ್ಲಿ ಮೊದಲ ಬಾರಿಗೆ ಮುಸಿಂ ಸಮುದಾಯದ ಕಬರ್‍ಸ್ತಾನಕ್ಕೆ 20 ಗುಂಟೆ ಜಮೀನು ಮಂಜೂರು ಮಾಡಲಾಗಿದೆ. ಶೀಘ್ರವೇ ಸಮುದಾಯಕ್ಕೆ ಹಸ್ತಾಂತರಿಸಲಾಗುವುದು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ಗ್ರಾಮಗಳಲ್ಲೂ ಜಾಗ ನೀಡಲಾಗುವುದು ಎಂದು ಭರವಸೆ ನೀಡಿದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ, ಇಮಾಂ ಸಾಹೇಬರು ಮುಸ್ಲಿಂ ಸಮುದಾಯದವರಾಗಿದ್ದರೂ ಕೂಡ ಎಲ್ಲ ಸಮುದಾಯದೊಂದಿಗೆ ಬೆರತು ಸಹೋದರತೆ ಮೆರದಿದ್ದರು.
ಅವರ ಅವದಿಯಲ್ಲಿ ಮಾಡಿದ ಕೆರೆ ನಿರ್ಮಾಣ ಇಂದಿಗೂ ಜೀವಂತವಾಗಿದೆ. ಇಲ್ಲಿ ನೂರಾರು ವರ್ಷಗಳಿಂದಲೂ ಹಿಂದು-ಮುಸ್ಲಿಂ ಸಮುದಾಯ ಸಹೋದರರು. ಅಳಿಯ- ಮಾವಂದಿರಾಗಿ ಜೀವನ ಸಾಗುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಪ.ಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಅಹಮದ್, ಇಮಾಂ ಅಲಿ, ಖಲಂದರ್, ಕೆಪಿಸಿಸಿ ಎಸ್ಸಿ ಘಟಕದ ತಾಲೂಕಾಧ್ಯಕ್ಷ ಬಿ. ಮಹೇಶ್ವರಪ್ಪ, ಜಿಲ್ಲಾ ಕಾರ್ಯದರ್ಶಿ ಶೇಖರಪ್ಪ ಪಲ್ಲಾಗಟ್ಟೆ ಸೇರಿದಂತೆ ಮತ್ತಿತರರಿದ್ದರು.