ಸುದ್ದಿವಿಜಯ, ಜಗಳೂರು: ಪ್ರಸ್ತುತ ಗ್ರಾಮೀಣ ಜನರ ಬವಣೆ, ತಲ್ಲಣ ಮತ್ತು ಸಂಸ್ಕೃತಿಯನ್ನು ವಿದ್ಯಾವಂತ ಯುವಕರು ಅರಿಯಬೇಕು. ಆಗ ಮಾತ್ರ ಹಳ್ಳಿಗಳ ಸುಧಾರಣೆ ಸಾಧ್ಯ ಎಂದು ಸಾಹಿತಿ, ಲೀಡ್ ಬ್ಯಾಂಕ್‍ನ ನಿವೃತ್ತ ಮ್ಯಾನೇಜರ್ ಎನ್.ಟಿ.ಎರ್ರಿಸ್ವಾಮಿ ಹೇಳಿದರು.
ತಾಲೂಕಿನ ತಮಲೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ದಂಡಿನ ರಾಜಪ್ಪ ಪರಿವಾರ ಪ್ರತಿಷ್ಠಾನ ಟ್ರಸ್ಟ್ ನಿಂದ ಗಿರಿಜಾ ಭವನದಲ್ಲಿ ದಂಡಿನ ರಾಜಪ್ಪ ಸಂಸ್ಮರಣೆ ಅಂಗವಾಗಿ ತಮಲೇಹಳ್ಳಿ ಗ್ರಾಮದವರಾದ ರಾಯಚೂರು ಅಪರ ಪೊಲೀಸ್ ಅಧೀಕ್ಷಕ ಡಾ.ದಂಡಿನ ಶಿವಕುಮಾರ್ ಏರ್ಪಡಿಸಿದ್ದ ಶಿವನಾಯಕ ದೊರೆ ಬರೆದಿರುವ ಬಲ್ಲಾಳ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು.
ನಾವೆಲ್ಲ ಹಳ್ಳಿಗಳ ಸಂಸ್ಕೃತ ಹಿನ್ನೆಲೆಯುಳ್ಳವರು. ಕೃಷಿಯ ಸಂಕೇತವಾದ ಎತ್ತುಗಳು ನಮ್ಮ ಸಂಸ್ಕೃತಿ. ರವಿಂದ್ರನಾಥ್ ಟ್ಯಾಗೂರ್ ಹೇಳಿದಂತೆ ನಾಲ್ಕು ಗೋಡೆಗಳ ಮಧ್ಯೆ ಇರುವ ದೇವರು ದೇವರಲ್ಲ.
ಋಷಿ ಮುನಿಗಳ ಜಪ ತಪಗಳು ದೇವರಲ್ಲ. ನೇಗಿಲ ಯೋಗಿಯ ಹೃದಯದ ಕುಟೀರದಲ್ಲಿ ಭಗವಂತ ನೆಲೆಸಿರುತ್ತಾನೆ.
ಹಳ್ಳಿಯ ಜನ ದೈವಾಂಶ ಸಂಭೂತರು. ಡಾ. ದಂಡಿನ ಶಿವಕುಮಾರ್ ಅವರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ತಮ್ಮ ಹಳ್ಳಿಯ ಬವಣೆ, ತಲ್ಲಣಗಳನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದಾರೆ.
ಜನರಿಗೆ ಸಹಕಾರಿಯಾಗಲು ವಿಶಿಷ್ಠವಾಗಿ ಪ್ರತಿವರ್ಷ ಕೃಷಿ ಸಂಬಂಧಿತ ಮತ್ತು ಸಾಹಿತ್ಯ ಚಟುವಟಿಕೆಗಳನ್ನು ನೆರವೇರಿಸುತ್ತಿರುವುದು ಅವರ ವ್ಯಕ್ತಿತ್ವದ ಸಂಕೇತವಾಗಿದೆ ಎಂದು ತಿಳಿಸಿದರು.
ದಲಿತ ಸಂವೇದನೆಯುಳ್ಳ ಶಿವನಾಯಕ ದೊರೆ ರಚಿಸಿದ ಬಲ್ಲಾಳ ಕಾದಂಬರಿ ನಿಜಕ್ಕೂ ನೈಜ ಘಟನೆ ಆಧಾರತಿ ಕಾದಂಬರಿಯಾಗಿದ್ದು ಹಳ್ಳಿಗಳ ಸಂಸ್ಕೃತಿ, ಸಂವೇದನೆಯನ್ನು ತಿಳಿಸುತ್ತದೆ ಎಂದರು.
ರಾಯಚೂರು ಅಪರ ಪೊಲೀಸ್ ಅಧೀಕ್ಷಕ ಡಾ. ದಂಡಿನ ಶಿವಕುಮಾರ್ ಪ್ರಾಸ್ತಾವಿಕ ಮಾತನಾಡಿ, ಪ್ರತಿವರ್ಷ ನಮ್ಮ ತಂದೆಯವರ ಸ್ಮರಣಾರ್ಥ ನಮ್ಮ ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮದ ಜನರಿಗೆ ಕೃಷಿ ಮತ್ತು ಸಾಹಿತ್ಯ ಚಟುವಟಿಕೆಗಳ ಮೂಲಕ ಸುಜ್ಞಾನ ಬಿತ್ತುವ ಕಾರ್ಯ ಮಾಡುತ್ತಿದ್ದೇವೆ.
ರೈತರಿಗೆ, ಮಕ್ಕಳಿಗೆ ವೈಜ್ಞಾನಿಕ ಕೃಷಿ ಪದ್ದತಿಗಳ ಬಗ್ಗೆ ತುಳಿಸಲಾಗುತ್ತಿದೆ.
ಅರೋಗ್ಯ ತಪಾಸಣೆ ಶಿಬಿರ, ಬೇಸಿಗೆ ಶಿಬಿರ, ಹೆಣ್ಣುಮಕ್ಕಳಿಗೆ ಕೌಶಲ ತರಬೇತಿ, ಉದ್ಯೋಗ ಮೇಳ ಆಯೋಜನೆ ಮಾಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಸುಧಾರಣೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಪುಸ್ತಕದ ಕುರಿತು ಸಂಶೋಧಕ ಡಾ. ಇಮಾಂ ಸಾಹೇಬ್ ಹಡಗಲಿ, ಮಾತು ಮನಸ್ಸು ಮುಟ್ಟಬೇಕು. ಅಕ್ಷರ ಅರಿವು ಮೂಡಿಸಬೇಕು.
ಈ ನಿಟ್ಟಿನಲ್ಲಿ ಬಲ್ಲಾಳ ಕಾದಂಬರಿಕಾರರು ಮಾಡಿದ್ದಾರೆ. ಮುಳ್ಳು ಜಾಲಿಯ ಗಿಡಗಳ ನಡೆವೆ ಬೆಳದ ಕಾದಂಬರಿಯೇ ಬಲ್ಲಾಳ ಕಾದಂಬರಿ.
ಮೊದಲು ಗೂಳಿ ಎಂದು ಹೆಸರಿಡಲಾಗಿತ್ತು. ಅದನ್ನು ಡಾ.ದಂಡಿನ ಶಿವಕುಮಾರ್, ಬಲ್ಲಾಳ ಎಂದು ಬದಲಿಸಿದರು.
ಗ್ರಾಮೀಣ ಸೊಗಡಿನ ಭಾಷೆಯ ಕೃತಿ ಇದು. ಗಂಗಾವತಿಯ ಹುಲಿ ಹೈದರ್ ಗ್ರಾಮದ ನೈಜ ಕಥೆಯಾಗಿದೆ. ಈ ಕಾದಂಬರಿಯ ಮೂಲ ಕೇರಿಯ ರಂಗನೇ ಬಲ್ಲಾಳನಾಗಿದ್ದಾನೆ.
ಕಾರ ಹುಣ್ಣಿಮೆಯ ರೋಚಕ ಕಥೆಯ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಪ್ರಾಣಿ ಪ್ರೀತಿ, ಜನಪದ ಹಬ್ಬಗಳು, ನಾಟಿ ವೈದ್ಯಪದ್ಧತಿಯ ಬಗ್ಗೆ ಕಾದಂಬರಿಯ ವಿಶೇಷ ಎಂದರು.
ಲೇಖಕ ದೇವನೂರು ಮಹಾದೇವರ ಅವರ ಸಂಬಂಧಿ, ಮೈಸೂರಿನ ಉಳಿಮೆ ಪ್ರತಿಷ್ಠಾನದ ಟಿಜಿಎಸ್ ಅವಿನಾಶ್ ಜಾಗತೀಕ ತಾಪಮಾನ ಬದಲಾವಣೆಯಿಂದ ಕೃಷಿ ಕ್ಷೇತ್ರದ ಮೇಲೆ ಆಗುತ್ತಿರುವ ಪರಿಣಾಮಗಳ ಕುರಿತು ರೈತರೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಗಾಣಗಟ್ಟೆ ಗ್ರಾಮದ ಪೂಜಾರ್ ಅಂಗಡಿ ಬೋರಯ್ಯ, ಪ್ರತಿಷ್ಠಾನದ ಅಧ್ಯಕ್ಷೆ ಗಿರಿಜಮ್ಮ, ವಿನಯ್, ಲೇಖಕ ಶಿವನಾಯಕ ದೊರೆ, ಚಾಮರಾಜನಗರದ ಡಾ.ರೇವಣ್ಣಸ್ವಾಮಿ ಸೇರಿದಂತೆ ಅನೇಕರು ಇದ್ದರು.