ಸುದ್ದಿವಿಜಯ, ಜಗಳೂರು: ಜಗಜ್ಯೋತಿ ಬಸವಣ್ಣ, ಭಕ್ತಿ ಭಂಡಾರಿ, ವಿಶ್ವಗುರು. ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲು ಬಯಸಿದ, ಜನರಲ್ಲಿ ಜ್ಞಾನದ ದೀವಿಗೆ ಹಚ್ಚಿದ ಮಹಾನ್ ಮಾನವತಾವಾದಿ ಎಂದು ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಂಗವಾಗಿ ಆಯೋಜಿಸಲಾಗಿದ್ದ ಬಸವಣ್ಣನವರ ಜಯಂತಿ ಅಂಗವಾಗಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕರ್ನಾಟಕದ ಪಾಲಿಗೆ 12ನೇ ಎಂಬುದು ಬಹಳ ಮಹತ್ವದ್ದು. ಸಮಾಜದಲ್ಲಿ ಬಹುದೊಡ್ಡ ಬದಲಾವಣೆಯ ಹೊಸ ಚಿಂತನೆ ರೂಪುಗೊಂಡ ಕಾಲವದು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ವಿಶಿಷ್ಟವಾದ ಕಾಲಘಟ್ಟವಿದು.
ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದ ಈ ಕಾಲದಲ್ಲಿ ವಚನಕಾರರು ತಮ್ಮ ಸರಳ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸಿದ್ದರು ಎಂದರು.
ವೀರಶೈವ ಲಿಂಗಾಯ ಸಭಾದ ತಾಲೂಕು ಅಧ್ಯಕ್ಷ ಶಿವನಗೌಡ್ರು ಮಾತನಾಡಿ, ಜಾತಿಯ ಹಂಗಿಲ್ಲದೆ ಎಲ್ಲಾ ವರ್ಗದ ವಚನಕಾರರು ವಚನಗಳ ಮೂಲಕ ತಮ್ಮ ಹೊಸ ಚಿಂತನೆಗಳನ್ನು ಕಟ್ಟಿಕೊಡುತ್ತಿದ್ದರು. ಈ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಬಸವಣ್ಣ ಮಾಡುತ್ತಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಡಿಪಿಒ ಬೀರೇಂದ್ರಕುಮಾರ್, ಮುಖಂಡರಾದ ಎಂ.ಎಸ್.ಪಾಟೀಲ್, ಮೊಬೈಲ್ ಮಂಜುನಾಥ್ ಸಿಬ್ಬಂದಿಗಳಾದ ಕಾಂತರಾಜು ಸೇರಿದಂತೆ ಅನೇಕರು ಇದ್ದರು.