suddivijayanew15/06/2024
ಸುದ್ದಿವಿಜಯ, ಜಗಳೂರು: ಜಮೀನಿಗೆ ಹೋಗಿದ್ದ ರೈತನ ಮೇಲೆ ನಾಲ್ಕು ಕರಡಿಗಳು ದಾಳಿ ಮಾಡಿ ಹಿಗ್ಗಾ ಮುಗ್ಗಾ ಕಡಿದು ಗಂಭೀರ ಗಾಯಗೊಳಿಸಿರುವ ಘಟನೆ ಜಗಳೂರು ತಾಲೂಕಿನ ಬೈರನಾಯಕನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ಜಮೀನಿಗೆ ತೆರಳಿದ್ದ ರೈತ ಹನುಮಂತಪ್ಪ(47)ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾ ಏಕಿ ನುಗ್ಗಿದ ಕರಡಿ ಮತ್ತು ಮೂರು ಮರಿಗಳು ತಲೆ, ಭುಜಕ್ಕೆ ಕಚ್ಚಿ ಗಾಯಮಾಡಿವೆ.
ಏಕ ಕಾಲದಲ್ಲಿ ಮೇಲೆ ಎಗರಿ ಮನಸ್ಸಿಗೆ ಬಂದಂತೆ ಕಡಿದಿವೆ. ರೈತ ಎಷ್ಟೆ ಕಿರುಚಾಡಿದರು ಯಾರಿಗೂ ಕೇಳಿಸಿಲ್ಲ. ಕಡಿದು ಬಿಟ್ಟು ಹೋದ ಮೇಲೆ ಪಕ್ಕದ ಜಮೀನಿನ ರೈತರು ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಮಲಗಿರುವುದು ಕಂಡು ತಕ್ಷಣ ಜಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ ವೈದ್ಯರು ಪ್ರಥಮ ಚಿಕಿತ್ಸೆ ಕೊಟ್ಟ ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಆಸ್ಪತ್ರೆಗೆ ಅರಣ್ಯಾಧಿಕಾರಿಗಳುವ ಭೇಟಿ ನೀಡಿ ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ನಂತರ ಮಾತನಾಡಿದ ತಾಲೂಕು ಅರಣ್ಯಾಧಿಕಾರಿ ಶ್ರೀನಿವಾಸ್, ತಾಲೂಕಿನಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಹಾಗಾಗಿ ಕರಡಿ, ಹಂದಿಗಳು ಜಮೀನುಗಳತ್ತ ಮುಖ ಮಾಡುತ್ತಿದ್ದು ರೈತರು ಸಂಜೆ ಬೇಗನೆ ಮನೆ ಸೇರಬೇಕು.ಒಬ್ಬೊಬ್ಬರೇ ಹೊಲದಲ್ಲಿ ಕೆಲಸ ಮಾಡದೇ ಗುಂಪಾಗಿ ಕೆಲಸ ಮಾಡಿ ಮನೆಗೆ ಹಿಂದಿರುಗಬೇಕು ಎಂದು ತಾಲೂಕು ಅರಣ್ಯಾಧಿಕಾರಿ ಶ್ರೀನಿವಾಸ್ ರೈತರಿಗೆ ಮನವಿ ಮಾಡಿದ್ದಾರೆ.