ಸುದ್ದಿವಿಜಯ, ಜಗಳೂರು: ತಾಲೂಕಿನ ಕಿಲಾ ಕಣ್ವಕುಪ್ಪೆ ಗ್ರಾಮದ ಮಾರಮ್ಮನ ದೇವಸ್ಥಾನಕ್ಕೆ ಶನಿವಾರ ಮತ್ತು ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕರಡಿಯೊಂದು ದಾಂಗುಡಿಯಿಟ್ಟಿದ್ದು ಗ್ರಾಮಸ್ಥರಲ್ಲಿ ಆಂತಕ ಸೃಷ್ಟಿಸಿದೆ.
ಕಿಲಾಕಣ್ವಕುಪ್ಪೆ ಗ್ರಾಮ ರಂಗಯ್ಯನದುರ್ಗ ವನ್ಯಜೀವಿ ಕಾಡಂಚಿನ ಗ್ರಾಮವಾಗಿದ್ದು ಕರಡಿಗಳು ಈ ಹಿಂದೆ ಎಂದೂ ಗ್ರಾಮಕ್ಕೆ ಪ್ರವೇಶಿಸಿರಲಿಲ್ಲ. ಆದರೆ ಕಳೆದ ರಾತ್ರಿ ಊರ ಮಧ್ಯದ ಮಾರಮ್ಮನ ದೇವಸ್ಥಾನ ಪ್ರವೇಶಿಸಿ ಅಲ್ಲಿರುವ ವಸ್ತುಗಳನ್ನು ಕಿತ್ತು ಚಲ್ಲಾಪಿಲ್ಲಿ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೀಗಾಗಿ ಮಕ್ಕಳನ್ನು ಹೊರಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ವೃದ್ಧರು, ಯುವಕರು ಸಹ ಹೊಲಗಳಿಗೆ ಹೋಗದೇ ಭಯಗೊಂಡು ಮನೆಯಲ್ಲೇ ಇರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮುಜುರಾಯಿ ಇಲಾಖೆಗೆ ಸೇರಿದೆ ದೇವಸ್ಥಾನ:
ಇತಿಹಾಸ ಪ್ರಸಿದ್ಧ ಮಾರಮ್ಮನ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ. ನಿತ್ಯ ನೂರಾರು ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಕೆಲವರು ದೇವಸ್ಥಾನದಲ್ಲೇ ಉಳಿದು ಹರಕೆ ತೀರಿಸುತ್ತಾರೆ. ಕಳೆದ ಶನಿವಾರ ಮಳೆ ಬರಲಿ ಎಂದು ಗ್ರಾಮಸ್ಥರು ಮಾರಮ್ಮ ದೇವಿಗೆ ಪೂಜೆ ನೆರವೇರಿಸಿದ್ದರು.
ಇಂತಹ ಪವಾಡ ಇರುವ ದೇವಿಯ ದೇವಸ್ಥಾನಕ್ಕೆ ಭಕ್ತರ ದಂಡು ನಿತ್ಯಬರುತ್ತದೆ. ಆದರೆ ಈಗ ಕರಡಿ ದೇವಸ್ಥಾನ ಪ್ರವೇಶಿಸಿದ್ದು ಗ್ರಾಮಸ್ಥರಲ್ಲಿ ಆಂತಕ ಮನೆ ಮಾಡಿದೆ ಎಂದು ದೇವಸ್ಥಾನ ಸಮಿತಿ ಸದಸ್ಯರು ಆತಂಕೈ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಆರ್‍ಎಫ್‍ಓ ನಿರ್ಲಕ್ಷ್ಯ?
ಕರಡಿ ಗ್ರಾಮ ಪ್ರವೇಶಿಸಿ ಆತಂಕ ಸೃಷ್ಟಿಸಿದೆ ಎಂದು ಗ್ರಾಮಸ್ಥರು ರಂಗಯ್ಯನದುರ್ಗ ಅರಣ್ಯಾಧಿಕಾರಿ ಮಹೇಶ್‍ನಾಯ್ಕ್ ಅವರಿಗೆ ತಿಳಿಸಿದರೂ ಸ್ಥಳಕ್ಕೆ ಬಾರದೇ ಮೈಮರೆತಿದ್ದಾರೆ. ತಮ್ಮ ಮೊಬೈಲ್ ಸ್ವಿಚ್‍ಆಫ್ ಮಾಡಿಕೊಂಡಿದ್ದಾರೆ.
ಮುಂದೆ ಕರಡಿದಾಳಿಯಿಂದ ಗ್ರಾಮಸ್ಥರಿಗೆ ತೊಂದರೆಯಾದರೆ ಅದಕ್ಕೆ ಅರಣ್ಯಾಧಿಕಾರಿಗಳೇ ಹೊಣೆ ಎಂದು ಗ್ರಾಮದ ಅನೇಕರು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಕರಡಿಯನ್ನು ಹಿಡಿದು ಬೇರೆಕಡೆ ಸ್ಥಳಾಂತಿರಿಸಬೇಕು ಎಂದು ಆಗ್ರಹಿಸಿದ್ದಾರೆ.