ಸುದ್ದಿವಿಜಯ, ಜಗಳೂರು: ರೈತರಿಗೆ ತ್ರೀ ಫೇಸ್ ವಿದ್ಯುತ್ ನೀಡದ ಜಗಳೂರು ಬೆಸ್ಕಾಂ ಎಇಇ ಗಿರೀಶ್ ನಾಯ್ಕ್ ಮತ್ತು ವಿಭಾಗೀಯ ಅಧಿಕಾರಿಗಳ ವಿರುದ್ಧ ಪಲ್ಲಾಗಟ್ಟೆ, ಐನಹಳ್ಳಿ, ಗುಡ್ಡದನಿಂಗಣ್ಣನಹಳ್ಳಿ, ಮಿನಿಗರಹಳ್ಳಿ, ಕೊಡದಗುಡ್ಡ ಸೇರಿದಂತೆ ಸುತ್ತಮುತ್ತಲ ಗ್ರಾಮದ 500ಕ್ಕೂ ಹೆಚ್ಚು ರೈತರು ಸೋಮವಾರ ಶಾಖಾ ಕಚೇರಿಗೆ ಮುತ್ತಿಗೆಹಾಕಿ ಆಕೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ತೀವ್ರ ಮಳೆಗಾಲದಿಂದ ಈಗಾಲೇ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಬೇಕಿದ್ದ ಬೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಆಕ್ರೋಶ ಭುಗಿಲೆದ್ದಿತ್ತು. ಮಳೆಯಿಂದ ಕೆರೆಗಳು ತುಂಬಿವೆ. ಅಂತರ್ಜಲ ಮಟ್ಟ ಹೆಚ್ಚಾಗಿದೆ.
ಡ್ಯಾಂಗಳಲ್ಲೂ ನೀರಿನ ಸಮಸ್ಯೆಯಿಲ್ಲ. ಈ ಬಾರಿ ವಿಪರೀತ ಬಿಸಿಲಿನ ಝಳಕ್ಕೆ ಬಿತ್ತಿರುವ ಬೆಳೆಗಳೆಲ್ಲವೂ ಬತ್ತಿ ಹೋಗುತ್ತಿವೆ. ಸರಕಾರದ ನಿಯಮಾನುಸಾರ ಕನಿಷ್ಠ ಏಳು ಗಂಟೆ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಕೇಳಿದರೆ ಶಾಸಕ ಎಸ್.ವಿ.ರಾಮಚಂದ್ರ ಅವರ ಹುಟ್ಟು ಹಬ್ಬವಿದೆ. ಹೊನಲು ಬೆಳಕಿನ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗಳಿವೆ. ವಿದ್ಯುತ್ ಕೊಡಲು ಸಾಧ್ಯವಿಲ್ಲ ಎಂದು ಗಿರೀಶ್ ನಾಯ್ಕ್ ಹಾರಿಕೆ ಉತ್ತರ ನೀಡುತ್ತಾರೆ.

ವೋಲ್ಟೇಜ್ ಸಮಸ್ಯೆಯಿಂದ ಮೋಟಾರ್‍ಗಳು ರನ್ ಆಗುತ್ತಿಲ್ಲ. ಕಳೆದ ಒಂದು ವಾರದಿಂದ ಸರಿಯಾಗಿ ವಿದ್ಯುತ್ ಪೂರೈಕೆ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪದೇ ಪದೇ ವಿದ್ಯುತ್ ಕಡಿತಗೊಳಿಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕಡಿತಗೊಳಿಸಿದ ವಿದ್ಯುತ್ ಅವಧಿಯನ್ನು ಸೇರಿಸಿ ಪವರ್ ಕೊಡಿ ಎಂದು ಕೇಳಿದ ರೈತರಿಗೆ ಎಇಇ ಗಿರೀಶ್ ನಾಯ್ಕ್ ಅವಾಶ್ಯ ಶಬ್ದಗಳಿಂದ ನಿಂದಿಸಿದ್ದಾರೆ. ‘ನನಗೆ ಸಂಬಳ ಕೊಡುವುದು ಸರಕಾರ ನೀವಲ್ಲ’ ಎಂದು ರೈತ ವಿರೋಧಿ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ರೈತರಾದ ನೀಲಕಂಠಪ್ಪ, ಜ್ಞಾನೇಶ್, ವೀರೇಶ್, ಮಲ್ಲಣ್ಣ ,ಮಲ್ಲಾಪುರ ವೀರೇಶ್, ಪ್ರದೀಪ್, ನಾಗಪ್ಪ ಸೇರಿದಂತೆ ನೂರಾರು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿಗಳ ನೆಪವೊಡ್ಡಿ ವಿದ್ಯುತ್ ಕಡಿತ:
ಸರಿಯಾಗಿ ಒಂದು ವಾರದಿಂದ ವಿದ್ಯುತ್ ಪೂರೈಕೆಯಾಗಿಲ್ಲ. ಕಾಮಗಾರಿಗಳ ನೆಪವೊಡ್ಡಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಬಿಸಿಲಿನಿಂದ ಮೆಕ್ಕೆಜೋಳ, ಶೇಂಗ, ರಾಗಿ, ತರಕಾರಿ ಬೆಳೆಗಳು ಒಣಗುತ್ತಿವೆ. ಬೆಸ್ಕಾಂ ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿಯಿಲ್ಲ.
-ನೀಲಕಂಠಪ್ಪ, ಸೂರಡ್ಡಿಹಳ್ಳಿ ರೈತ
ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ
ಎಇಇ ಗಿರೀಶ್ ನಾಯ್ಕ್ ಅವರು ರೈತರಿಗೆ ಸರಿಯಾಗಿ ಮಾಹಿತಿ ನೀಡುವಲ್ಲಿ ಮತ್ತು ಕರ್ತವ್ಯ ನಿರ್ವಹಿಸುವಲ್ಲಿ ಅವರು ವಿಫಲವಾಗಿದ್ದಾರೆ. ರೈತರಿಗೆ ಸರಿಯಾದ ರೀತಿಯಲ್ಲಿ ಮನವೊಲಿಸಿದ್ದರೆ ರೈತರಿಂದ ಪ್ರತಿಭಟನೆ ಮಾಡುತ್ತಿರಲಿಲ್ಲ. ಪಲ್ಲಾಗಟ್ಟೆ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ನಾನೇ ನೇರವಾಗಿ ಮಾತನಾಡಿದ್ದೇನೆ ಇನ್ನು ಮುಂದೆ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದೇವೆ.
-ಎಸ್.ಕೆ.ಪಾಟೀಲ್, ಎಕ್ಸಿಕಿಟೀವ್ ಎಂಜಿನಿಯರ್ ಬೆಸ್ಕಾಂ ದಾವಣಗೆರೆ.
220 ಕೆವಿ ಪವರ್ ಸ್ಟೇಷನ್ ಅಗತ್ಯವಿದೆ
ತಾಲೂಕಿಗೆ ಪ್ರತಿನಿತ್ಯ 98 ಮೆವ್ಯಾಟ್ ವಿದ್ಯುತ್ ಬೇಡಿಕೆಯಿದೆ. ಆದರೆ 42 ಮೆವ್ಯಾ ವಿದ್ಯುತ್ ಪೂರೈಕೆಯಾಗುತ್ತಿದೆ. ತಕ್ಷಣವೇ 220 ಕೆವಿ ಪವರ್ ಸ್ಟೇಷನ್ ನಿರ್ಮಾಣದ ಅಗತ್ಯವಿದೆ. ನೀಲಗುಂದ ಪವರ್ ಬ್ಯಾಂಕ್ ಅಧಿಕ ಲೋಡ್ ಆಗಿರುವುದರಿಂದ ತಡೆಯುತ್ತಿಲ್ಲ. ಇಟಗಿ ಸ್ಟೇಷನ್ ನಿಂದಲೂ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ತುರುವನೂರು ಸ್ಟೇಷನ್ ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿದೆ. ಇದರಿಂದ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ರೈತರು ಅದನ್ನೆಲ್ಲಾ ಕೇಳದೇ ಏಕಾ ಏಕಿ ಪ್ರತಿಭಟನೆ ಮಾಡಿದರೆ ಹೇಗೆ?
-ಗಿರೀಶ್ ನಾಯ್ಕ್, ಬೆಸ್ಕಾಂ ಎಇಇ, ವಿ.ಆಂಜನೇಯ, ಶಾಖಾಧಿಕಾರಿ ಪಲ್ಲಾಗಟ್ಟೆ.