suddivijayanews29/06/2024
ಸುದ್ದಿವಿಜಯ, ಜಗಳೂರು: ಒಂದು ಸಾವಿರಕ್ಕಿಂತ ಅಧಿಕ ಬಾಕಿ ಇರುವ ವಿದ್ಯುತ್ ಮೀಟರ್ ಗಳ ಕಂದಾಯ ವಸೂಲಾತಿಗೆ ತಾಲೂಕು ಬೆಸ್ಕಾಂ ಎಇಇ ಸುಧಾಮಣಿ ಆದೇಶಿಸಿದ್ದಾರೆ.
ಚಿತ್ರದುರ್ಗ ಬೆಸ್ಕಾಂ ಮುಖ್ಯ ಎಂಜಿನಿಯರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ದಾವಣಗೆರೆ ವಿಭಾಗದಲ್ಲಿ ನಡೆದ ಕಂದಾಯ ವಸೂಲಾತಿ ಪರಿಶೀಲನಾ ಸಭೆಯಲ್ಲಿ ಬಾಕಿ ಇರುವ ಗೃಹ ಬಳಕೆ ವಿದ್ಯುತ್ ಕಂದಾಯ ವಸೂಲಾತಿಗೆ ತುರ್ತು ಕ್ರಮಕ್ಕೆ ಸೂಚನೆ ನೀಡಿರುವುದರಿಂದ ಬೆಸ್ಕಾಂ ಸಿಬ್ಬಂದಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಆಯಾ ಗ್ರಾಮಗಳಿಗೆ ಭೇಟಿ ನೀಡಿ ವಿದ್ಯುತ್ ಬಿಲ್ ವಸೂಲಾತಿಗೆ ಮುಂದಾಗಿದ್ದಾರೆ.

ಕುಟೀರ ಜ್ಯೋತಿ ಮತ್ತು ಭಾಗ್ಯ ಜ್ಯೋತಿ ಯೋಜನೆಗಳನ್ನು ಹೊರತು ಪಡಿಸಿ ಗೃಹ ಬಳಕೆಯ ವಿದ್ಯುತ್(ಸರಕಾರದ ಉಚಿತ ವಿದ್ಯುತ್ ಬಳಕೆ ಮೀರಿ) ಬಿಲ್ ಬಾಕಿ ಉಳಿಸಿಕೊಂಡಿರುವ ಮನೆಗಳಿಗೆ (bescom home bill balance power cut) ಭೇಟಿ ನೀಡಿ ವಿದ್ಯುತ್ ಕತ್ತರಿಗೆ ಇಲಾಖೆ ಸಿಬ್ಬಂದಿ ಮುಂದಾಗಿದೆ.

ತಾಲೂಕಿನಲ್ಲಿ 6.6 ಕೋಟಿ ವಿದ್ಯುತ್ ಬಿಲ್ ಬಾಕಿ ಇದ್ದು ಮೇ ಅಂತ್ಯಕ್ಕೆ 1.78 ಕೋಟಿ ಡಿಮ್ಯಾಂಡ್ ಇದ್ದು 1.66 ಕೋಟಿ ಕಲೆಕ್ಷನ್ ಆಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರು ವಿದ್ಯುತ್ ಬಿಲ್ ಪಾವತಿಸದಿದ್ದಲ್ಲಿ ಮೀಟರ್ ಕಿತ್ತು ವಿದ್ಯುತ್ ಕಡಿತಗೊಳಿಸಲು ಸೂಚನೆ ನೀಡಿರುವ ಹಿನ್ನೆಲೆ ಕಾರ್ಯಪ್ರವೃತ್ತರಾಗಿರುವ ಬೆಸ್ಕಾಂ ಲೈನ್ ಮನ್ ಮತ್ತು ಸಿಬ್ಬಂದಿ ಬಾಕಿ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಪ್ರತಿ ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಬಳಕೆದಾರರ ಮಾಹಿತಿ ಪಡೆದು ಸ್ಥಳದಲ್ಲೇ ವಿದ್ಯುತ್ ಬಿಲ್ ಪಾವತಿಸಿದರೆ ಕಡಿತಗೊಳಿಸದೇ ಸಂಪರ್ಕ ಮುಂದುವರೆಸುತ್ತಿದ್ದಾರೆ.
ಒಂದು ವೇಳೆ ವಿದ್ಯುತ್ ಬಿಲ್ ಪಾವತಿಸದ ಗ್ರಾಹಕರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ. ಶೀಘ್ರವೇ ಇನ್ನೆರಡು ದಿನಗಳಲ್ಲಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಬಿಲ್ ಪಾವತಿಸಬೇಕು ಎಂದು ಎಇಇ ಸುಧಾಮಣಿ ಮನವಿ ಮಾಡಿದ್ದಾರೆ.