ಸುದ್ದಿವಿಜಯ, ಜಗಳೂರು: ಹಿಂದುಳಿದ ಜಗಳೂರು ತಾಲೂಕು ಎಂಬ ಅಣೆಪಟ್ಟಿ ಕಳಚಬೇಕು ಎಂದಾದರೆ ಮೊದಲು ರೈತರು ವೈಜ್ಞಾನಿಕವಾಗಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಮಾರುಕಟ್ಟೆಯಲ್ಲಿ ಮೌಲ್ಯವರ್ಧನೆ ಸೃಷ್ಟಿಸಿಕೊಂಡರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಕೆವಿಕೆ ಮುಖ್ಯಸ್ಥ ಡಾ.ಟಿ.ಎನ್.ದೇವರಾಜ್ ಹೇಳಿದರು.
ತಾಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ಸೋಮವಾರ ಈರುಳ್ಳಿ ಕ್ಷೇತ್ರೋತ್ಸವ ಮತ್ತು ರೈತರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಅನೇಕ ರೈತರಿಗೆ ಬೆಳೆಯುವುದು ಗೊತ್ತು ಆದರೆ ಮಾರಾಟ ಮಾಡಲು ತುದಿಗಾಲಲ್ಲಿ ನಿಲ್ಲುತ್ತಾರೆ. ಆದರೆ ಮಾರುಕಟ್ಟೆಯ ಬಗ್ಗೆ, ದರಗಳ ಬಗ್ಗೆ ಅವಲೋಕ ಮಾಡುವುದಿಲ್ಲ ಹೀಗಾಗಿ ಆರ್ಥಿಕ ನಷ್ಟ ಅನುಭವಿಸುತ್ತಾರೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಟಿ.ತೋಟಯ್ಯ ಮಾತನಾಡಿ, ಉತ್ಕೃಷ್ಟ ವಾದ ಮಣ್ಣು ಇಲ್ಲಿದೆ. ಈರುಳ್ಳಿ ಬೆಳೆಯಲು ಪೂರಕವಾದ ವಾತಾವರಣ ಈ ಭಾಗದಲ್ಲಿದೆ. ಆಹಾರ ಉತ್ಪಾದನೆ ಜೀವ ಇರುವವರೆಗೂ ಬೇಕು. ಬ್ರಾಂಡ್ ಮಾಡಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಮಾತ್ರ ಲಾಭವಾಗುತ್ತದೆ ಎಂದು ರೈತರಿಗೆ ಸಲಹೆ ನೀಡಿದರು.
ಕೆವಿಕೆ ತೋಟಗಾರಿಕಾ ತಜ್ಞ ಎಂ.ಜಿ.ಬಸವನಗೌಡ ಮಾತನಾಡಿ, ವೈವಿಧ್ಯಮಯ ಭೂ ಪ್ರದೇಶಕ್ಕೆ ಹೆಸರಾಗಿರುವ ಜಗಳೂರು ತಾಲೂಕಿನಲ್ಲಿ ಮಣ್ಣಿನ ಗುಣಮಟ್ಟಕ್ಕೆ ಹೊಂದಿಕೊಳ್ಳುವ ಈರುಳ್ಳಿ ತಳಿ ಎಂದರೆ ಅದು ಭೀಮಾ ಸೂಪರ್ ಈರುಳ್ಳಿ ಬೀಜಗಳಾಗಿದ್ದು, ಬಿತ್ತನೆ ಮಾಡಿದ ರೈತರಿಗೆ ಭೀಮಬಲ ತರಲಿದೆ . ಬಾಗಲಕೋಟೆ ವಿವಿಯಿಂದ ವಿಶೇಷವಾಗಿ ತಯಾರಿಸಲಾಗಿರುವ ಬೀಜವಾಗಿದ್ದು ಭೀಮಾ ಸೂಪರ್ ತಳಿಯ ಈರುಳ್ಳಿ ಇಲ್ಲಿನ ವಾತಾವರಣಕ್ಕೆ ಪೂರಕವಾಗಿದೆ.ಹೆಚ್ಚು ಮಳೆಯಾದರೂ ಸರಿ, ಕಡಿಮೆ ಪ್ರಮಾಣದ ಮಳೆ ಬಂದರೂ ಈ ತಳಿಯ ಈರುಳ್ಳಿ ರೈತರಿಗೆ ಅದ್ಭುತವಾದ ಇಳುವರಿ ತಂದುಕೊಡುವಲ್ಲಿ ಪರಿಮಾಣಾತ್ಮಕ ಕೆಲಸ ಮಾಡುತ್ತಿದೆ. ರೈತರು ಇದೇ ತಳಿಯ ಈರುಳ್ಳಿಯ ಬೀಜಗಳನ್ನು ಬಿತ್ತನೆ ಮಾಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ, ಎಫ್‍ಪಿಒ ನಿರ್ದೇಶಕ ಕಲ್ಲೇದೇವರಪುರ ಕೃಷ್ಣ ಮೂರ್ತಿ ಮತ್ತು ಭೀಮಾ ಸೂಪರ್ ಈರುಳ್ಳಿ ಬಿತ್ತನೆ ಮಾಡಿದ ರೈತರು ಸಂವಾದದಲ್ಲಿ ಭಾಗವಹಿಸಿದ್ದರು.