ಜಗಳೂರು: ಚರಗ ವೇಳೆ ಬೇರೆಯವರು ಎಂಟ್ರಿ ಕೊಟ್ರಾ?, ಹಲ್ಲೆ ನಡೆಸಿರೋ ಯಾರು? ಸಿಸಿ ಟಿವಿ ಇದಕ್ಕೆ ಉತ್ತರ ನೀಡುತ್ತಾ?

Suddivijaya
Suddivijaya April 27, 2023
Updated 2023/04/27 at 1:03 PM

ಸುದ್ದಿವಿಜಯ, ಜಗಳೂರು: ಪಟ್ಟಣದ ದೊಡ್ಡ ಮಾರಿಕಾಂಬಾ ದೇವಿ ಜಾತ್ರೆ ನಿಮಿತ್ತ ಬುಧವಾರ ಬೆಳಗಿನ ಜಾವ ಚರಗ ಚೆಲ್ಲುವ ವೇಳೆ ನಡೆದ ಘಟನೆ ಸಂಬಂಧ ಈಗ ಆರೋಪ, ಪ್ರತ್ಯಾರೋಪ ಗಳು ನಡೆಯುತ್ತಿದ್ದು, ಘಟಾನವಳಿಗಳ ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಎಸ್ಪಿ ಡಾ.ಕೆ.ಅರುಣ್ ತೆಗೆದುಕೊಂಡಿದ್ದಾರೆ. ಘಟನೆ ಹೆಚ್ಚು ವೈರಲ್ ಆಗುತ್ತಿದ್ದಂತೆ ಎಸ್ಪಿ ಸ್ಥಳಕ್ಕೆ ಎಎಸ್ಪಿ ಅರ್.ಬಿ.ಬಸರಗಿಯವರನ್ನು ಸ್ಥಳಕ್ಕೆ ಕಳಿಸಿದ್ದಾರೆ. ಅಲ್ಲದೇ ಶಾಂತಿ ಸಭೆ ನಡೆಸಿದ್ದಾರೆ.

ಚರಗ ಚೆಲ್ಲುವ ಕಾರ್ಯಕ್ರಮದ ವೇಳೆ ಪಟ್ಟಣದಲ್ಲಿ ಹಾದು ಹೋಗುತ್ತಿದ್ದ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕು, ಬಸವಪಟ್ಟಣದ ಹೋಬಳಿ ರಾಮಲಿಂಗೇಶ್ವರ ಮಠದ
ರಾಮಲಿಂಗೇಶ್ವರ ಸ್ವಾಮೀಜಿ (79)ಸೇರಿದಂತೆ ಮೂವರ ಕಾರುಗಳನ್ನು ಜಖಂಗೊಳಿಸಿದ್ದು, ಈ ಸಂಬಂಧ 16 ಜನರನ್ನು ಪೊಲೀಸರು ಬಂಧಿಸಿದ್ದು, ಘಟನೆ ನಡೆದ ಬಗ್ಗೆ ಸರಿಯಾದ ದಾಖಲೆ ಸಿಗಬೇಕಾಗಿದೆ. ನೋಡೋದಕ್ಕೆ ಜಗಳೂರು ಕ್ಷೇತ್ರ ದೊಡ್ಡ ಊರು ಆದರೆ ಪ್ರಮುಖ ರಸ್ತೆಗಳಲ್ಲಿ ಸಿಸಿ ಟಿವಿ ಇಲ್ಲ. ಈ ಭಾಗದಿಂದ ಆಂಧ್ರ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಇತರೆಡೆ ಸಾಕಷ್ಟು ಜನರು ಹೋಗುತ್ತಾರೆ. ಆದರೆ ಇಲ್ಲಿ ನಡೆಯುವ ಅಪರಾಧ ಚಟುವಟಿಕೆಗಳ ತಿಳಿಯಲು ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಿಲ್ಲ.

ಸದ್ಯ ಸ್ವಾಮೀಜಿ ಕಾರನ್ನು ತಡೆದ ಕಿಡಿಗೇಡಿಗಳು ದೊಣ್ಣೆಗಳಿಂದ ಹೊಡೆದು ಕಾರನ್ನು ಜಖಂಗೊಳಿಸಿ, ರೂ. 23,000 ದೋಚಿದ್ದಾರೆ. ಇದೇ ವೇಳೆ ವಕೀಲೆ ಮೋನಿಕಾ ಹಾಗೂ ಬಾಲಾಜಿ ಎಲೆಕ್ಟ್ರಿಕಲ್ಸ್‍ನ ಮದನಲಾಲ್ ಅವರ ಕಾರನ್ನು ಜಖಂಗೊಳಿಸಲಾಗಿದೆ ಎಂದು ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ದೂರಿನ ಸಂಬಂಧ 16 ಜನರನ್ನು ಬಂಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಗ್ರಾಮಸ್ಥರು ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ನಮ್ಮ ಮಕ್ಕಳು ತಪ್ಪು ಮಾಡಿಲ್ಲ, ಚರಗ ಚೆಲ್ಲುತ್ತಿದ್ದಾಗ ಯಾರೋ ಕಿಡಿಗೇಡಿಗಳು ಇದೇ ಸಮಯವನ್ನು ಬಳಸಿಕೊಂಡಿದ್ದಾರೆ. ಆದ್ರೆ ಪೊಲೀಸರು ಅಮಾಯಕರನ್ನು ಬಂಧಿಸಿದ್ದಾರೆ ಎಂಬುದು ಪೊಲೀಸರು ವಿರುದ್ಧ ಹರಿಹಾಯ್ದಿದ್ದಾರೆ.

ಸಂಬಂಧಿಕರನ್ನು ಬಂಧಿಸಿದ ಬಳಿಕ ಪೊಲೀಸರು ಹಲವರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ. ನಮಗೆ ಮನ ಬಂದಂತೆ ಹೊಡೆದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ ಎಸ್ಪಿ ನಮ್ಮ ಸಿಬ್ಬಂದಿಗಳು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಘಟನೆ ವಿವರ:

ರಾಮಲಿಂಗೇಶ್ವರ ಸ್ವಾಮೀಜಿ ದಾವಣಗೆರೆಯಿಂದ ಬಳ್ಳಾರಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಪಟ್ಟಣದ ದೊಡ್ಡ ಮಾರಿಕಾಂಬಾ ದೇವಿ ಜಾತ್ರೆ ನಡೆಯುತ್ತಿದ್ದು, ನಸುಕಿನಲ್ಲಿ ಚರಗ ಚೆಲ್ಲುವ ಕಾರ್ಯಕ್ರಮ ಇತ್ತು. ಪಟ್ಟಣದ ಸುತ್ತ ಕಾವಲು ಹಾಕಲಾಗಿತ್ತು. ಸ್ವಾಮೀಜಿ ಅವರ ಕಾರು ಬರುತ್ತಿದ್ದಂತೆ ಅವರನ್ನು ತಡೆದ 25 ಜನರ ಗುಂಪು ದೊಣ್ಣೆಗಳಿಂದ ಹೊಡೆದು, ಕಾರಿನ ಗಾಜುಗಳನ್ನು ಪುಡಿಗೊಳಿಸಿತು. ಈ ಬಗ್ಗೆ ಸ್ವಾಮೀಜಿ ನೀಡಿದ ದೂರಿನ ಆಧಾರದ ಮೇಲೆ ಪಟ್ಟಣದ 25 ಆರೋಪಿಗಳ ವಿರುದ್ಧ ದೂರು ದಾಖಲಾಗಿದ್ದು, 16 ಜನರನ್ನು ಬಂಧಿಸಲಾಗಿದೆ ಎಂದು ಸಿಪಿಐ ಶ್ರೀನಿವಾಸ್ ತಿಳಿಸಿದ್ದಾರೆ.

ವಕೀಲರ ಕಾರಿನ ಮೇಲೆ ದಾಳಿ:

ಹಬ್ಬಕ್ಕಾಗಿ ಗ್ರಾಮಕ್ಕೆ ಬಂದಿದ್ದ ಸಿದ್ದರಾಮೇಶ್ವರ ಬಡಾವಣೆಯ ವಕೀಲೆ ಮೋನಿಕಾ ಅವರು ಹೊಟ್ಟೆನೋವು ಕಾಣಿಸಿಕೊಂಡಿದ್ದ ಅಣ್ಣನ ಮಗಳಿಗೆ ಚಿಕಿತ್ಸೆ ಕೊಡಿಸಲು ಕಾರಿನಲ್ಲಿ ಹೊರಟಾಗ ದೊಣ್ಣೆಗಳನ್ನು ಹಿಡಿದ ಗುಂಪು ದಾಳಿ ನಡೆಸಿ ಕಾರಿನ ಗಾಜುಗಳನ್ನು ಪುಡಿಗೊಳಿಸಿದೆ. ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ ಎಂದು ಬೇಡಿಕೊಂಡರೂ ಬಿಡದೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಮಗುವಿನ ಮೈಮೇಲೆ ಗಾಜಿನ ಚೂರುಗಳು ಚುಚ್ಚಿಕೊಂಡು ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ ಇದರಲ್ಲಿ ಯಾರ ಮಾತು ಸತ್ಯ ಎಂದು ಪೊಲೀಸರು ತನಿಖೆ ಮಾಡಬೇಕಾಗಿದೆ.

ಬಂಧಿತರ ಮನೆಯಲ್ಲಿ ಸೂತಕದ ಛಾಯೆ?
ಹಬ್ಬದ ಸಂಭ್ರಮದಲ್ಲಿದ್ದ ಬಂಧಿತ ಯುವಕರ ಮನೆಯಲ್ಲಿ ಸೂತಕ ಆವರಿಸಿದಂತಾಗಿದೆ. ಘಟನೆ ನಡೆಯುತ್ತಿದ್ದಂತೆ ಹಬ್ಬದ ವಾತಾವರಣವೆಲ್ಲ ಮಾಸಿ ಹೋಗಿದ್ದು, ಮಕ್ಕಳನ್ನು ಬಿಟ್ಟು ಬಿಡಿ ಎಂದು ಪೋಷಕರು ಸಂಬಂಧಿಕರು ಗೋಳು ತೋಡಿಕೊಂಡಿದ್ದಾರೆ. ತಪ್ಪು ಯಾರೇ ಮಾಡಿದ್ದರೂ ಸರಿ ಅವರಿಗೆ ಶಿಕ್ಷೆಯಾಗಲಿ. ಆದರೆ ಅಮಾಯಕರನ್ನು ಬಂಧಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!