ಜಗಳೂರು: ಕೇಂದ್ರ ವನ್ಯಜೀವಿ ತಜ್ಞರ ತಂಡದಿಂದ ರಂಗಯ್ಯನದುರ್ಗ ಅರಣ್ಯ ವೀಕ್ಷಣೆ, ಸ್ಥಳೀಯರ ಜತೆ ಸಂವಾದ

Suddivijaya
Suddivijaya October 28, 2023
Updated 2023/10/28 at 3:14 PM

ಸುದ್ದಿವಿಜಯ, ಜಗಳೂರು: ರಂಗಯ್ಯನದುರ್ಗ ವನ್ಯಜೀವಿ ಕಾಡಂಚಿನ ಗ್ರಾಮಗಳ ಜನರಿಗೆ ಸ್ಮಶಾನ ಬೇಕು.. ರಸ್ತೆ, ನೀರು ಮೂಲಸೌಕರ್ಯಗಳು ಕಲ್ಪಿಸಿಕೊಡಿ.. ಹಂದಿಗಳ ಕಾಟದಿಂದ ಬೆಳೆಗಳು ನಾಶವಾಗುತ್ತಿವೆ ಪರಿಹಾರ ಮೊತ್ತ ಹೆಚ್ಚಿಸಿ.. ಕಾಡಂಚಿನ ಜನರಿಗೆ ಭದ್ರತೆ ಮತ್ತು ಅಭಿವೃದ್ಧಿ ಕೆಲಸಗಳಾಗಬೇಕು ಎಂದು ಕಾಡಂಚಿನ ಜನರು ಹತ್ತು ಹಲವು ಬೇಡಿಕೆಗಳನ್ನು ಕೇಂದ್ರ ವನ್ಯಜೀವಿ ತಜ್ಞರ ತಂಡದ ಮುಂದಿಟ್ಟರು…

ತಾಲೂಕಿನ ರಂಗಯ್ಯನದುರ್ಗ ವನ್ಯ ಜೀವಿ ವಲಯ ಪ್ರದೇಶ ಎಂದು ಘೋಷಣೆ(2013-2023) ಮಾಡಿ ಹತ್ತು ವರ್ಷ ಕಳೆದ ಹಿನ್ನೆಲೆ ಕೇಂದ್ರದ ಅರಣ್ಯಾಧಿಕಾರಿಗಳ ತಂಡ ಶನಿವಾರ ರಂಗಯ್ಯನದುರ್ಗ ವನ್ಯಜೀವಿ ವಲಯಕ್ಕೆ ಭೇಟಿ ನೀಡಿ ಅರಣ್ಯ ವ್ಯಾಪ್ತಿಯ ಗ್ರಾಮಗಳ ಜನರ ಜೊತೆ ಸಂವಾದ ನಡೆಸಿದರು.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸದಸ್ಯ ಮತ್ತು ದೆಹಲಿಯ ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಷನ್ ಸಿಂಗ್ ಬೋನಾಲ್, ಪುಣೆಯ ರಿಮೋಟ್ ಫೆನ್ಸಿಂಗ್ ತಜ್ಞ ಮನೀಷ್ ಕಾಳೆ ಮತ್ತು ವ್ಯನ್ಯ ಜೀವಿ ಸಂರಕ್ಷಣಾ ಸಂಸ್ಥೆಯ ವಿಜ್ಞಾನಿ ಅನುಕೂಲ್ ಅವರ ತಂಡ ಭೇಟಿ ನೀಡಿ ಸ್ಥಳೀಯ ಜನರೊಂದಿಗೆ ಸಂವಾದ ನಡೆಸಿದರು.ಜಗಳೂರು ತಾಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶಕ್ಕೆ ಕೇಂದ್ರ ಅರಣ್ಯಾ ಸಂಕರ್ಷಣಾ ತಜ್ಞರ ತಂಡ ಭೇಟಿ ನೀಡಿ ಚರ್ಚಿಸಿದರು.ಜಗಳೂರು ತಾಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶಕ್ಕೆ ಕೇಂದ್ರ ಅರಣ್ಯಾ ಸಂಕರ್ಷಣಾ ತಜ್ಞರ ತಂಡ ಭೇಟಿ ನೀಡಿ ಚರ್ಚಿಸಿದರು.

ಸಮಸ್ಯೆಗಳನ್ನು ಗಂಭೀರವಾಗಿ ಆಲಿಸಿದ ಬಿಷನ್ ಸಿಂಗ್ ಬೋನಾಲ್, ಈ ಪ್ರದೇಶಕ್ಕೆ ಇಕೋ ಡೆವಲಪ್ಮೆಂಟ್ ಕಮಿಟಿ ನಿರ್ಮಾಣವಾಗಬೇಕು. ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು.

ಸ್ಥಳೀಯರು ಮತ್ತು ಅರಣ್ಯಾಧಿಕಾರಿಗಳ ಮಧ್ಯೆ ಸಂಘರ್ಷಗಳು ನಿಲ್ಲಬೇಕಾದರೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಅರಣ್ಯದಲ್ಲಿ ಆರು ಕಡೆ ಕಳ್ಳಬೇಟೆ ತಡೆ ಶಿಬಿರಗಳು ಇವೆ. ಅದರಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಹದ್ದಿನ ಕಣ್ಣಿಟ್ಟು ಕಾಯಬೇಕು.

ಕಾಲ ಬದಲಾಗಿದೆ. ಕೇವಲ ಹತ್ತು ವರ್ಷಗಳಲ್ಲಿ ಇಷ್ಟೊಂದು ಮಟ್ಟಕ್ಕೆ ಅರಣ್ಯ ಅಭಿವೃದ್ಧಿಯಾಗಿದೆ. ಬದಲಾಗುತ್ತಿರುವಾಗ ಪರಿಸರಕ್ಕೆ ಮೂಲಸೌಕರ್ಯ ವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು. ಪ್ರಕೃತಿ ಒಂದು ಭಾಗ ಮನಷ್ಯ ಎಂಬುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು.ಅತ್ಯಾಧುನಿಕ ತಡೆಬೇಲಿ ಹಾಕುವ ಮೂಲಕ ಮಾನವನ ಹಸ್ತಕ್ಷೇಪವನ್ನು ತಡೆಯಬೇಕಿದೆ. ಕೇವಲ ಸಿಬ್ಬಂದಿಗಳಿಂದ ಸಾಧ್ಯವಿಲ್ಲ. ಪ್ರತಿಯೊಬ್ಬ ಮನುಷ್ಯನಲ್ಲಿ ಕಾಡು ನನ್ನದು ಎಂಬ ಪ್ರಜ್ಞೆ ಮೂಡಿದಾಗ ಮಾತ್ರ ವನ್ಯಜೀವಿಗಳ ರಕ್ಷಣೆ ಮತ್ತು ಕಾಡಿನ ಉಳಿವು ಸಾಧ್ಯವಾಗುತ್ತದೆ.

ವನಮೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕಾಡಿನ ಮಹತ್ವವನ್ನು ಜನರಿಗೆ ತಿಳಿಸಬೇಕು ಸಂಘರ್ಷಗಳು ನಿಲ್ಲಬೇಕಾದರೆ ಪ್ರಾಕೃತೀಕ ಪ್ರಜ್ಞೆ ಜನರಲ್ಲಿ ಮೂಡಿಸುವ ಅಗತ್ಯವಿದೆ. ಇಲ್ಲಿನ ಸಮಸ್ಯೆಗಳು ಮತ್ತು ಬೇಡಿಕೆಗಳ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಸ್ಥಳೀಯರಿಗೆ ಭರವಸೆ ನೀಡಿದರು.

ಜಿಲ್ಲಾ ಅರಣ್ಯಾಧಿಕಾರಿ ಶಶಿಧರ್ ಮಾತನಾಡಿ, 2013 ರಂಗಯ್ಯನದುರ್ಗ ಅರಣ್ಯ ವನ್ಯಜೀವಿ ಸಂರಕ್ಷಣಾ ಅರಣ್ಯ ಪ್ರದೇಶವಾಯಿತು. ಕಳೆದ ಹತ್ತು ವರ್ಷಗಳಲ್ಲಿ ಏನೇನು ಅಭಿವೃದ್ಧಿಯಾಗಿದೆ ಎಂದು ಅವಲೋಕನ ಮಾಡಲು ಅಧಿಕಾರಿಗಳ ತಂಡ ಬಂದಿದೆ.

ಕಳೆದ 10 ವರ್ಷಗಳಲ್ಲಿ ಆಗಿರುವ ಬದಲಾವಣೆ ಏನು ಎಂಬುದನ್ನು ಅವಲೋಕಿಸಿ ನಮಗೆ ಮಾರ್ಗದರ್ಶನ ನೀಡಿ, ಅರಣ್ಯ ಅಭಿವೃದ್ಧಿಗೆ ಬೇಕಿರುವ ಸವಲತ್ತುಗಳ ಬಗ್ಗೆ ವರದಿಯನ್ನು ಇಲಾಖೆಗೆ ಸಲ್ಲಿಸಲಿದ್ದಾರೆ ಎಂದರು.

ವನ್ಯಜೀವಿ ಪ್ರದೇಶದಲ್ಲಿ ಸ್ಮಶಾನಕ್ಕೆ ಅವಕಾಶವಿಲ್ಲ. ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಮತ್ತು ತಹಶೀಲ್ದಾರ್ ಜೊತೆ ಮಾತನಾಡುತ್ತೇವೆ. ಘನ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ ಅರಣ್ಯ ಪ್ರದೇಶದಲ್ಲಿ ಮಾಡುವಂತಿಲ್ಲ.

ಸೂಕ್ಷ್ಮ ಸಂವೇದನೆಯ ಕೊಂಡುಕುರಿಗಳಿಗೆ ಮತ್ತು ವನ್ಯ ಜೀವಿಗಳಿಗೆ ಮಳೆ ಕೊರತೆಯಿಂದ ನೀರಿನ ಬವಣೆ ಎದುರಾಗಬಹುದು. ಅಲ್ಲಲ್ಲಿ ಐದು ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳಿಗೆ ನೀರು ಬಿಡುವ ಕೆಲಸ ಮಾಡುತ್ತಿದ್ದೇವೆ. ಕಾಡು ಬೆಳೆಯ ಬೇಕಾದರೆ ಕಾಡಂಚಿನ ಜನರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಎಸಿಎಫ್ ಭಾಗ್ಯ ಲಕ್ಷ್ಮಿ, RFO ಮಹೇಶ್‍ನಾಯ್ಕ್, ಗ್ರಾಪಂ ಸದಸ್ಯ ಸತೀಶ್ ನಾಯ್ಕ್, ಶಿಲಾವತಿ, ಅರಣ್ಯಾಧಿಕಾರಿಗಳಾದ ಸತೀಶ್, ದಿನೇಶ್, ಸಂತೋಷ್, ಪ್ರವೀಣ್ ಸೇರಿದಂತೆ ಅನೇಕರು ಇದ್ದರು.

ಸಂಪ್ರದಾಯದಂತೆ ಆರತಿ ಬೆಳಗಿ ಸ್ವಾಗತ

ಕೇಂದ್ರ ಅರಣ್ಯ ತಜ್ಞರ ತಂಡ ರಂಗಯ್ಯನದುರ್ಗ ಅರಣ್ಯ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಂತೆ ವೆಂಕಟೇಶಪುರ ತಾಂಡದ ಮಹಿಳೆಯರು ತಮ್ಮ ಸಂಪ್ರದಾಯದಂತೆ ಆರತಿ ಬೆಳಗಿ, ಲಂಬಾಣಿ ಜಾನಪದ ಗೀತೆಗಳನ್ನು ಹಾಡುವ ಮೂಲಕ ಅಧಿಕಾರಿಗಳನ್ನು ಸ್ವಾಗತಿಸಿದರು. ಇದಕ್ಕೂ ಮೊದಲ ಕೆಳಗೋಟೆ ಬಳಿಯ ಕಳ್ಳಬೇಟೆ ತಡೆ ಶಿಬಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ಸ್ಥಳೀಯರ ಬೇಡಿಕೆಗಳು
ಕಾಡಂಚಿನ 10 ಗ್ರಾಮಗಳಿಗೆ ಊರಿಗೊಂದು ಸ್ಮಶಾನ
ಶುದ್ಧ ಕುಡಿಯುವ ನೀರಿನ ಪೂರೈಕೆ
ಅರಣ್ಯದಲ್ಲಿ ನರೇಗಾ ಕಾಮಗಾರಿ ಅವಕಾಶ ಕೊಡಿ
ರಸ್ತೆ, ಮೂಲ ಸೌಕರ್ಯಗಳ ಅಭಿವೃದ್ಧಿ
ಎಸ್‍ಇಪಿ, ಟಿಎಸ್‍ಪಿ ಯೋಜನೆ ಹೆಚ್ಚಿಸಿ
ಮನೆ ಮನೆಗೆ ಸೋಲಾರ್ ದೀಪ ಬೇಕು
ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಾಗ
ಕಾಡು ಪ್ರಾಣಿಗಳ ರಕ್ಷಣೆಗೆ ಭದ್ರ ತಡೆ ಬೇಲಿ
ಕಾಡಂಚಿನ ಜನರಿಗೆ ಮನೆ ನಿರ್ಮಾಣಕ್ಕೆ ಮರಳು
ಅಧಿಕಾರಿಗಳು, ಸ್ಥಳಿಯ ಮಧ್ಯೆ ಸಂಘರ್ಷ ತಡೆ
ಕಾಡುಪ್ರಾಣಿಗಳಿಂದ ಪ್ರಾಣ ಹಾನಿಗೆ ಪರಿಹಾರ ಹೆಚ್ಚಿಸಿ

Share this Article
Leave a comment

Leave a Reply

Your email address will not be published. Required fields are marked *

error: Content is protected !!