ಸುದ್ದಿವಿಜಯ,ಜಗಳೂರು: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ವಿ.ಅಶೋಕ್‍ಕುಮಾರ್ ನೇತೃತ್ವದ ತಂಡದ ಸದಸ್ಯರು ಶನಿವಾರ ಮಧ್ಯಾಹ್ನ ಜಗಳೂರು ತಾಲೂಕಿನ ದೊಣೆಹಳ್ಳಿ, ಮುಸ್ಟೂರು, ಉದ್ದಗಟ್ಟ, ಮೂಡಲ ಮಾಚಿಕೆರೆ, ಹಿರೇಮಲ್ಲನಹೊಳೆ, ಚಿಕ್ಕಮಲ್ಲನಹೊಳೆ ಗ್ರಾಮಕ್ಕೆ ಭೇಟಿ ನೀಡಿ ಬೆಳೆಗಳ ಪರಿಸ್ಥಿತಿ ಮತ್ತು ತೀವ್ರ ಬರದ ಸಮೀಕ್ಷೆ ನಡೆಸಿದರು.
ಕಾಳು ಕಟ್ಟದ ಮೆಕ್ಕೆಜೋಳ, ಒಣಗಿದ ಶೇಂಗಾ, ಬತ್ತಿದ ರಾಗಿ ಫಸಲು ವೀಕ್ಷಿಸಿದ ಅಧಿಕಾರಿಗಳಿಗೆ ಸಂಪೂರ್ಣ ಬೆಳೆ ನಷ್ಟದ ದರ್ಶನವಾಯಿತು. ರಾಜ್ಯದಲ್ಲಿ ಮುಂಗಾರು ಹಂಗಾಮಿನ ಕೊರತೆಯಿಂದ ಬರದ ಛಾಯೆ ದಾವಣಗೆರೆ ಜಿಲ್ಲೆಯಾದ್ಯಂತ ಸಂಪೂರ್ಣ ಆವರಿಸಿದ್ದು ಕಂಡ ಅಧಿಕಾರಿಗಳ ಮನ ಮಿಡಿಯಿತು.
ತಾಲೂಕಿನ ದೊಣೆಹಳ್ಳಿ ಗ್ರಾಮದ ಜಯಮ್ಮ ಮತ್ತು ತಿಪ್ಪೇರುದ್ರಪ್ಪ ರೈತರ ರಾಗಿ ಹೊಲಕ್ಕೆ ಭೇಟಿ ಕೊಡುತ್ತಿದ್ದಂತೆ ಒಣಗಿದ ಬೆಳೆಯ ಕಡ್ಡಿ ಹಿಡಿದು ‘ಈಸ್ ಟೋಟಲಿ ಲಾಸ್’ ಎಂದರು. ಆಗ ಮಹಿಳೆ ಜಯಮ್ಮ, ‘ನಾವು ಒಂದು ಎಕರೆಗೆ 50 ಸಾವಿರ ಬಂಡವಾಳ ಹಾಕಿದ್ದೇವೆ.
ಅದೇ ಗ್ರಾಮದ ಪರಮೇಶ್ವರಪ್ಪ ಮತ್ತು ಶಾಂತಮ್ಮ ಎಂಬುವರ ಹತ್ತಿ ಹೊಲಕ್ಕೆ ಭೇಟಿ ಕೊಟ್ಟಾಗ ಕಾಯಿ ಇಲ್ಲದೇ ಬಾಡಿರುವ ಹತ್ತಿ ಬೆಳೆ ತೋರಿಸಿದ ರೈತರು ನಷ್ಟದ ಬಗ್ಗೆ ಕೇಂದ್ರದ ಅಧಿಕಾರಿಗಳಿಗೆ ವಿವರಿಸಿದರು.
ಮೆಕ್ಕೆಕೋಳ ಸ್ಥಿತಿ ನೋಡಿ ಮರುಗಿದ ಅಧಿಕಾರಿಗಳು:
ಜಗಳೂರು ತಾಲೂಕಿನ ಉದ್ದಗಟ್ಟ ಕ್ರಾಸ್‍ನಲ್ಲಿರುವ ರೈತರಾದ ಅಜ್ಜಯ್ಯ ಬೆಳೆದ ಮೆಕ್ಕೆಜೋಳದ ಹೊಲಕ್ಕೆ ಭೇಟಿ ಕೊಟ್ಟ ಅಧಿಕಾರಿಗಳು ಫಾಲ್ಸ್ ಸೈನಿಕ ಹುಳು ದಾಳಿ ಮತ್ತು ಒಣಗಿರುವ ಮೆಕ್ಕೆಜೊಳದ ದಂಟು ವೀಕ್ಷಿಸಿ ರೈತರಿಂದ ಮಾಹಿತಿ ಪಡೆದರು. ನಂತರದ ಅಲ್ಲಿಂದ ಮೂಡಲ ಮಾಚಿಕೆಗೆ ಗ್ರಾಮದ ರೈತ ಬೋರಪ್ಪ ಎಂಬುವರ ಜಮೀನಿಗೆ ಭೇಟಿ ನೀಡಿ ಮಳೆಯಿಲ್ಲದೇ ಸೊರಗಿದ ಶೇಂಗಾ ಬೆಳೆಯನ್ನು ಕಿತ್ತು ಕಾಳು ಕಟ್ಟದೇ ಒಣಗಿದ ಫಸಲು ವೀಕ್ಷಿಸಿದರು.