ಸುದ್ದಿವಿಜಯ, ದಾವಣಗೆರೆ: ಗೋ ಹತ್ಯೆನಿಷೇಧ ಕಾನೂನು ಜಾರಿ ಬಗ್ಗೆ ಚರ್ಚೆ ಬೆನ್ನೇಲೆ ಹಸುವೊಂದು ಚಿರತೆಯಿಂದ ತನ್ನ ಮಾಲೀಕನ ರಕ್ಷಣೆ ಮಾಡಿದ್ದು, ಚಿರತೆ ಬಾಯಿಗೆ ಆಹಾರವಾಗಬೇಕಿದ್ದ ಗೋಪಾಲಕ ಅದೃಷ್ಟವಶಾತ್ ಬದುಕಿದ್ದಾನೆ. ಚನ್ನಗಿರಿ ತಾಲೂಕು ಉಬ್ರಾಣಿ ಹೋಬಳಿ ಕೂಡಂಕರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮದ ರೈತ ಕಂಹಾಲಪ್ಪ(48) ಬದುಕಿ ಬಂದ ಅದೃಷ್ಟವಂತ. ಈತ ಹಸು ಮೇಯಿಸಲು ಹೋದಾಗ ಘಟನೆ ನಡೆದಿದೆ. ಎಂದಿನಂತೆ ಕಂಪಾಲಪ್ಪ ಅವರ ತೋಟದಲ್ಲಿ ಹಸು ಮೇಯಲು ಬಿಟ್ಟು, ತೋಟದ ಕೆಲಸದಲ್ಲಿ ತಲ್ಲೀನರಾಗಿದ್ದರು. ಹೀಗಿರುವಾಗ ಕೋಳಿ ಮಾಂಸ ತ್ಯಾಜ್ಯ ವಾಸನೆ ಹಿಡಿದು ಚಿರತೆಯೊಂದು ಉಬ್ರಾಣಿ ಅರಣ್ಯಪ್ರದೇಶಕ್ಕೆ ಬಂದಿದ್ದು, ಕಂಪಾಲಪ್ಪ ಮೇಲೆ ದಾಳಿ ಮಾಡಿದೆ.
ಈ ಸಂದರ್ಭದಲ್ಲಿ ತನ್ನ ಗೋ ಪಾಲಕ ರಕ್ಷಣೆಗೆ ಹೋದ ಗೌರಿ(ಹಸು) ಚಿರತೆಗೆ ತನ್ನ ಕೊಂಬಿನಿಂದ ತಿವಿದಿದೆ. ಅಷ್ಟರಲ್ಲೇ ಬಡಿಗೆ ಎತ್ತಿಕೊಂಡ ಕರಿಹಾಲಪ್ಪ ಕೂಗಿದ್ದಾರೆ. ನಂತರ ಚಿರತೆ ಕಾಡಿನತ್ತ ಓಡಿ ಹೋಗಿದೆ.
ಚಿರತೆ ದಾಳಿ ವೇಳೆ ಒಂದಿಷ್ಟು ಹೆದರದೆ ತನ್ನ ಮಾಲೀಕನ ಪ್ರಾಣ ರಕ್ಷಣೆಗೆ ಮುಂದಾದ ಹಸು ಗೌರಿ ಸುತ್ತ ಮುತ್ತಲಿನ ಗ್ರಾಮಗಳು, ಉಬ್ರಾಣಿ ಹೋಬಳಿಯಲ್ಲಿ ಮನೆ ಮಾತಾಗಿದೆ. ನಮ್ಮ ಮನೆ ಸುತ್ತ ಕಳೆದೊಂದು ತಿಂಗಳಿನಿಂದ ಚಿರತೆ ಓಡಾಡುವುದು ಗೊತ್ತಿತ್ತು. ಸಾಕು ನಾಯಿಯನ್ನು ಕಣ್ಣ ಮುಂದೆಯೇ ಚಿರತೆ ಕಚ್ಚಿಕೊಂಡು ಹೋಗಿದೆ. ಮನುಷ್ಯರಿಗೆ ಎಂದಿಗೂ ತೊಂದರೆ ಕೊಟ್ಟಿರಲಿಲ್ಲ. ಆದರೆ, ನನ್ನ ಎದುರಿಗೆ ಮೊನ್ನೆ ಚಿರತೆ ಬಂದು ನಿಂತು, ದಾಳಿ ಮಾಡಿದಾಗ ಪ್ರಾಣವೇ ಹೋದಂತಾಗಿತ್ತು.
ಆಗ ನಮ್ಮ ಗೌರಿ (ಹಸು) ನನ್ನ ಜೀವ ಉಳಿಸಿದೆ ಎನ್ನುತ್ತಾರೆ ಕರಿಹಾಲಪ್ಪ ಚಿರತೆ ದಾಳಿಯಿಂದ ಬಚವಾದ ರೈತ ಊರಿನಲ್ಲಿ 2 ಕೋಳಿ ಫಾರಂ ಗಳಿದ್ದು, ಅಲ್ಲಿ ಸತ್ತ ಕೋಳಿಗಳನ್ನು ಅವುಗಳ ಮಾಲೀಕರು ಊರಂಚಿನಲ್ಲಿಬಿಸಾಕುತ್ತಿದ್ದಾರೆ.
ಕೋಳಿ ಮಾಂಸದ ವಾಸನೆ ಅರಸಿ ಬಂದ ಚಿರತೆಗೆ ಕೋಳಿಗಳ ಜೊತೆಗೆ ನಾಯಿ ಮಾಂಸದ ರುಚಿಯೂ ಹತ್ತಿದೆ. ಈಗ 2 ನಾಯಿ ಬಲಿಯಾಗಿದ್ದು, ಒಂದು ಬಚಾವಾಗಿತ್ತು. ಈಗ ಕರಿಹಾಲಪ್ಪನವರ ಮೇಲೆ ದಾಳಿ ಮಾಡಿದ್ದು, ಮುಂದೆ ಜನ ಭಯದಿಂದಲೇ ದಿನ ಕಳೆಯುವಂತಾಗಿದೆ.
ಉಬ್ರಾಣಿ ಅರಣ್ಯ ಪ್ರದೇಶದ ಕಾಂಡಿಚಿನಲ್ಲಿ ವಾಸಿಸುವ ಅನೇಕರಿಗೆ ಪ್ರಾಣ ಭೀತಿ ಇದ್ದು, ಆಗಾಗ ಕಾಡಾನೆ, ಕರಡಿ, ಚಿರತೆ ದಾಳಿ ನಡೆಯುತ್ತಲೇ ಇರುತ್ತದೆ. ಈ ಚಿರತೆ ಕಳೆದೊಂದು ವಾರದಲ್ಲಿ ಕೂಡಕಿಕೆರೆ ಗ್ರಾಮದಲ್ಲಿ 3 ನಾಯಿಗಳ ಮೇಲೆ ದಾಳಿ ನಡೆಸಿದೆ. ಈ ಪೈಕಿ 1 ನಾಯಿ ಚಿರತೆಗೆ ಆಹಾರವಾದರೆ, ಇನ್ನೊಂದು ನಾಯಿ ಜೋರಾಗಿ ಬೊಗುಳುವ ಮೂಲಕ ಚಿರತೆಗೆ ಸೆಡ್ಡು ಒಡೆದಿದೆ.
ಈ ಭಾಗದಲ್ಲಿ ಸುಮಾರು 10 ಕುಟುಂಬಗಳು ವಾಸವಾಗಿದ್ದು, ಕೃಷಿಯೇ ಜೀವನಕ್ಕೆ ಆಧಾರ. ಆದರೆ ಕರೆಂಟ್ ಅಭಾವ ಕಾರಣ ಇಲ್ಲಿನ ರೈತರು ತೋಟ, ಹೊಲಗಳಿಗೆ ನೀರು ಹಾಯಿಸಲು ರಾತ್ರಿ ತೋಟಕ್ಕೆ ಹೋಗುತ್ತಿದ್ದು, ಚಿರತೆ ದಾಳಿ ಭೀತಿ ಎದುರಾಗಿದೆ. ಇನ್ನು ಚಿರತೆ ದಾಳಿಯಿಂದ ಕಂಪಾಲಪ್ಪರ ಬೆನ್ನು, ಕುತ್ತಿಗೆ, ಕಿಬೊಟ್ಟೆ ಹಿಂಭಾಗದಲ್ಲಿ ಪರಚು ಗಾಯಗಳಾಗಿದೆ.
ಈ ವಿಷಯವನ್ನು ತಕ್ಷಣ ಮನೆಯವರಿಗೆ ಕಂಪಾಲಪ್ಪ ಮುಟ್ಟಿಸಿದ್ದಾರೆ. ಕೂಡಲೇ ಮನೆಯವರು, ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಅವರನ್ನು ಸರಕಾರಿ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಆರ್‍ಎಫ್‍ಒ ಸತೀಶ್ ತನ್ನ ಸಿಬ್ಬಂದಿಯೊಂದಿಗೆ ಚಿರತೆ ದಾಳಿ ಪ್ರದೇಶಕ್ಕೆ ತೆರಳಿ ಪರಿಶೀಲಿಸಿ ಅರಣ್ಯ ಪ್ರದೇಶದ ಆಯಕಟ್ಟಿನ ಜಾಗದಲ್ಲಿ ಚಿರತೆ ನೆರೆಹಿಡಿಯಲು ಬೋನ್ ಇಟ್ಟಿದ್ದಾರೆ. ಒಟ್ಟಿನಲ್ಲಿ ಗೌರಿ ತನ್ನ ಮಾಲೀಕನ ಪ್ರಾಣ ಉಳಿಸಿ ಎಲ್ಲರ ನಾಲಿಗೆಯಲ್ಲಿ ಸೈ ಎನಿಸಿಕೊಂಡಿದ್ದಾಳೆ.