ಸುದ್ದಿವಿಜಯ,ಜಗಳೂರು:ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಚರಂಡಿ ಹೂಳು ತೆಗೆಯುವ ಸಂದರ್ಭದಲ್ಲಿ ವಿಷ ಗಾಳಿ ಸೇವನೆಯಿಂದ ಮೃತಪಟ್ಟಿದ್ದ ಮೈಲಪ್ಪ ಮತ್ತು ಸತ್ಯಪ್ಪ ಇವರ ಕುಟುಂಬಗಳಿಗೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ವತಿಯಿಂದ ತಲಾ 1ಲಕ್ಷ ರೂ ಪರಿಹಾರ ಹಣದ ಚೆಕ್‌ಅನ್ನು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಭಾನುವಾರ ವಿತರಿಸಿದರು.
ಮೃತರ ಇಬ್ಬರು ಕುಟುಂಬಗಳಿಗೆ ಅಧಿಕಾರಿಗಳ ಜೊತೆ ಭೇಟಿ ನೀಡಿದ ಶಾಸಕರು ಮೈಲಪ್ಪ ಮತ್ತು ಸತ್ಯಪ್ಪ ಅವರ ಭಾವ ಚಿತ್ರಗಳಿಗೆ ಕೈ ಮುಗಿದು ಕೆಳಗೆ ಕುಳಿತುಕೊಂಡು ಮೃತರ ಪತ್ನಿ, ಮಕ್ಕಳ ಜೊತೆ ಮಾತನಾಡಿ ಧೈರ್ಯ ತುಂಬಿದರು.
ಯಾರ ಕುಟುಂಬದಲ್ಲಿ ಇಂತಹ ಅವಘಡಗಳು ಸಂಭವಿಸಬಾರದು. ಮನೆಗೆ ಆದಾಯ ತರುವ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬಗಳು ಅರ್ಥಿಕವಾಗಿ ಸಂಕಷ್ಟ ಎದುರಿಸಿ ಜೀವನ ನಿರ್ವಹಿಸುವುದು ತುಂಬ ಕಷ್ಟವಾಗುತ್ತದೆ.
ಏನೇ ಸಮಸ್ಯೆಗಳಿದ್ದರೂ ನನ್ನೊಂದಿಗೆ ಹಂಚಿಕೊಳ್ಳಿ ಸಾಧ್ಯವಾದಷ್ಟು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ನಂತರ ಪತ್ರಕರ್ತರ ಜೊತೆ ಮಾತನಾಡಿ, ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಕೂಲಿಕಾರ್ಮಿಕರು ಗ್ರಾಮ ಸ್ವಚ್ಛತೆ ವೇಳೆ ಮೃತ ಪಟ್ಟಿರುವುದು ನೋವಿನ ಸಂಗತಿ.
ಅವರನ್ನು ನಂಬಿಕೊಂಡ ಕುಟುಂಬ ಬೀದಿಗೆ ಬರಬಾರದು ಎಂದು ಗ್ರಾಮ ಪಂಚಾಯಿತಿಯಿಂದ ತಲಾ 6 ಲಕ್ಷ ರೂಗಳನ್ನು ಪರಿಹಾರ ನೀಡಿದೆ.
ಇದೀಗ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದಿಂದ ತಲಾ ಒಂದೊಂದು ಲಕ್ಷ ರೂಗಳನ್ನು ನೀಡಲಾಗಿದೆ. ಹಣವನ್ನು ಒಳ್ಳೆಯದಕ್ಕೆ ಉಪಯೋಗಿಸಿಕೊಳ್ಳಬೇಕು.
ಸರಕಾರದ ಸೌಲತ್ತುಗಳನ್ನು ಎರಡು ಕುಟುಂಬಗಳಿಗೆ ಮೊದಲ ಅದ್ಯತೆ ಮೇರೆಗೆ ನೀಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮತ್ತು ಸಿಬ್ಬಂದಿಗಳು ಚರಂಡಿ ಸ್ವಚ್ಛತೆ ಸೇರಿದಂತೆ ಅಭಿವೃದ್ದಿ ಕೆಲಸದ ವಿಚಾರದಲ್ಲಿ ಮುಂಜಾಗರುಕತೆ ವಹಿಸಬೇಕು.
ಇಂತಹ ಘಟನೆಗಳು ಮುಂದೆ ಮರುಕಳಿಸದಂತೆ ನಿಗಾವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಪೂರ್ವಭಾವಿ ಸಭೆ ಮುಂದೂಡಿಕೆ:
57 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ವಿಳಂಬ ಹಿನ್ನೆಲೆ ಜುಲ 19ರಂದು ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯನ್ನು ಮುಂದೂಡಲಾಗಿದೆ.
ಅಂದು ಸಿರಿಗರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ವಿದೇಶಿ ಪ್ರಯಾಣದಲ್ಲಿದ್ದಾರೆ. ಸಂಸದ ಜಿ.ಎಂ ಸಿದ್ದೇಶ್ವರ್ ಅವರಿಗೂ ದೆಹಲಿಯ ಹೈಕಮಾಂಡ್ ಬುಲಾವ್ ನೀಡಿರುವುದರಿಂದ ಅವರನ್ನು ಬಿಟ್ಟು ಸಭೆ ನಡೆಸುವುದು ಸಮಂಜಸವಲ್ಲ.
ಹಾಗಾಗಿ ಮುಂದಿನ ದಿನಗಳಲ್ಲಿ ಸಮಯ ನಿಗದಿಪಡಿಸಿ ಸಭೆ ಹಮ್ಮಿಕೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.
ಸಮಾಜ ಕಲ್ಯಾಣಾಧಿಕಾರಿ ಬಿ.ಮಹೇಶ್ವರಪ್ಪ ಮಾತನಾಡಿ, ಗ್ರಾ.ಪಂ ಯಿಂದ ತಲಾ ಆರು ಲಕ್ಷ ರೂ ಪರಿಹಾರ ನೀಡಲಾಗಿದೆ. ಮಕ್ಕಳಿಗೆ ಉದ್ಯೋಗ ಸೃಷ್ಠಿ ಮಾಡಲು ಸಾಧ್ಯವಾಗಿಲ್ಲ.ಆದಷ್ಟು ಬೇಗ ಮನೆಯನ್ನು ಮಂಜೂರು ಮಾಡಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮದ ಡಿಎಂ ರಮೇಶ್, ತಹಸೀಲ್ದಾರ್ ಸಂತೋಷ್ ಕುಮಾರ್, ತಾ.ಪಂ ಇಒ ಚಂದ್ರಶೇಖರ್, ಸಿಪಿಐ ಸೋಮಶೇಖರ್ ಕೆಂಚರೆಡ್ಡಿ.
ಗ್ರಾ.ಪಂ ಅಧ್ಯಕ್ಷ ಎಸ್. ಜ್ಯೋತಿರ್ಲಿಂಗಪ್ಪ, ಮುಖಂಡರಾದ ಪ್ರಕಾಶ್, ಮಹಾಲಿಂಗಸ್ವಾಮಿ, ಪ್ರಸನ್ನಕುಮಾರ್, ಜಿ.ಎಸ್ ಕೊಟ್ರೇಶ್ ಸೇರಿದಂತೆ ಮತ್ತಿತರಿದ್ದರು.