ಸುದ್ದಿವಿಜಯ, ಜಗಳೂರು: ಬಚ್ಚಲು ಮನೆಯಲ್ಲಿ ನೀರು ತುಂಬಿದ್ದ ಬಕೆಟ್‍ನಲ್ಲಿ ಮುಳುಗಿ ಮಗು ಸಾವನ್ನಪ್ಪಿರುವ ಘಟನೆ ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ.
ಮೃತ ಮಗು ಅದೇ ಗ್ರಾಮದ ಮಂಜುನಾಥ ಮತ್ತು ಟಿ.ತಾರ ಅವರ ದ್ವಿತಿಯ ಪುತ್ರಿ ಅನುಸಾವ್ಯ (1 ವರ್ಷ) ಎಂದು ತಿಳಿದು ಬಂದಿದೆ. ಕೂಲಿ ಕೆಲಸಕ್ಕೆ ಹೋಗಿದ್ದ ಮೃತ ಮಗುವಿನ ತಂದೆ ಮಂಜುನಾಥ್ ಸಂಜೆ ವಾಪಾಸ್ ಬಂದು ಸ್ನಾನದ ಮನೆಗೆ ಹೋಗಿ ಸ್ನಾನ ಮುಗಿಸಿ ಬಾಗಿಲು ಹಾಕದೇ ಬಂದಿದ್ದಾರೆ. ಆಟವಾಡುತ್ತಾ ಸ್ನಾನದ ಕೊಠಡಿಗೆ ಹೋದ ಮಗು ನೀರು ತುಂಬಿದ ಬಕೆಟ್‍ನಲ್ಲಿ ಬಿದ್ದಿದೆ.

ಇತ್ತ ಮಗು ಕಾಣದೇ ಇದ್ದಾಗ ಅಕ್ಕ ಪಕ್ಕದವರ ಮನೆಯವರನ್ನೂ ವಿಚಾರಿಸಿದಾಗ ಮಗು ಪತ್ತೆಯಾಗಿಲ್ಲ. ಮನೆಯಲ್ಲ ಹುಡುಕಿದರೂ ಮಗುವಿನ ಸದ್ದು ಕೇಳದಿದ್ದಾಗ ಬಚ್ಚಲು ಮನೆಯಲ್ಲಿ ಪೋಷಕರು ಪರೀಕ್ಷಿಸಿದ್ದಾರೆ. ಮಗು ಬಕೆಟ್‍ನಲ್ಲಿ ಬಿದ್ದು ನೀರು ಕುಡಿದು ಒದ್ದಾಡುತ್ತಿದ್ದಿದ್ದನ್ನು ಗಮನಿಸಿ ತಕ್ಷಣವೇ ಜಗಳೂರು ಆಸ್ಪತ್ರೆಗೆ ಸೇರಿಸಲು ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಮಗು ಮೃತಪಟ್ಟಿದೆ.
ಮಗು ಮೃತಪಟ್ಟಿದೆ ಎಂದು ಜಗಳೂರು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಸಂಬಂಧ ಮೃತ ಮಗುವಿನ ತಂದೆ ಮಂಜುನಾಥ್ ಜಗಳೂರು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.