ಸುದ್ದಿವಿಜಯ, ಜಗಳೂರು: ಮಕ್ಕಳೇ ದೇಶಕ್ಕೆ ಆಸ್ತಿ. ಮಗುವು ತನ್ನ ವ್ಯಕ್ತಿತ್ವದ ಪೂರ್ಣ ಮತ್ತು ಸಾಮರಸ್ಯದ ಬೆಳೆವಣಿಗೆಗಾಗಿ ಕುಟುಂಬದಲ್ಲಿ ಸಂತೋಷ, ಪ್ರೀತಿ, ತಿಳಿವಳಿಕೆಯ ವಾತಾವರಣದಲ್ಲಿ ಬೆಳೆದಾಗ ಮಾತ್ರ ನಾಯಕತ್ವದ ಗುಣಗಳು ಬೆಳೆಯುತ್ತವೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಪ್ರೇರಣಾ ಸಮಾಜ ಸೇವಾ ಸಂಸ್ಥೆ (ಚರ್ಚ್) ಸಭಾಂಗಣದಲ್ಲಿ ಮಂಗಳವಾರ ಡಾನ್‍ಬಾಸ್ಕೋ ಬಾಲಕಾರ್ಮಿಕರ ಮಿಷನ್ ದಾವಣಗೆರೆ, ಬ್ರೆಡ್ಸ್ ಸಂಸ್ಥೆ ಬೆಂಗಳೂರು, ಸಿಎಸ್ ಯೋಜನೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಕ್ಕಳ ಹಕ್ಕುಗಳ ಕ್ಲಬ್‍ನ ಸಮಾವೇಶ ಹಾಗೂ ಮಕ್ಕಳ ಹಕ್ಕುಗಳ ಕ್ಲಬ್ ಸದಸ್ಯರಿಗೆ ನಾಯಕತ್ವ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಾನ್‍ಬಾಸ್ಕೋ ಸಂಸ್ಥೆಯೂ ಬಡ ಮಕ್ಕಳ ಶಿಕ್ಷಣಕ್ಕಾಗಿ ತುಂಬ ಉತ್ತಮವಾದ ಕೆಲಸವನ್ನು ಮಾಡುತ್ತಿದೆ. ತಾಲೂಕಿನಲ್ಲಿ ಬಡ, ಅನಾಥ ಮಕ್ಕಳನ್ನು ಗುರುತಿಸಿದರೆ ಎಲ್ಲ ಮಕ್ಕಳಿಗೂ ಶಿಕ್ಷಣಕ್ಕೆ ಬೇಕಾದ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.ಸಮಾಜದಲ್ಲಿ ವೈಯಕ್ತಿಕವಾಗಿ ಜೀವನವನ್ನು ನಡೆಸಲು ಮಗುವನ್ನು ಸಂಪೂರ್ಣ ಸಿದ್ದಪಡಿಸಬೇಕು. ಮಕ್ಕಳಿಗೆ ದೈಹಿಕ ಶಿಕ್ಷಣ, ನಾಯಕತ್ವದ ಗುಣಗಳು, ಒಗ್ಗಟ್ಟು, ವೈಯಕ್ತಿಕ ಸ್ವಚ್ಛತೆ, ನೈತಿಕತೆ, ಮಕ್ಕಳ ಸಾಕ್ಷರತೆ, ಮಕ್ಕಳ ಹಕ್ಕುಗಳು ಹೀಗೆ ವಿವಿಧ ಅಂಶಗಳನ್ನೊಳಗೊಂಡ ಮಾಹಿತಿಯನ್ನು ಶಾಲಾ ಹಂತ ಹದಲ್ಲಿಯೇ ಕಲಿಸಬೇಕು.
ದೇಶದ ಒಳಿತು ಮತ್ತು ಅಭಿವೃದ್ದಿಗಾಗಿ ಮಕ್ಕಳನ್ನು ರಕ್ಷಿಸಿ ಅವರ ಅವಶ್ಯಕತೆಗಳನ್ನು ಪೂರೈಸಿ ಅಭಿವೃದ್ದಿಪಡಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಈ. ಹಾಲಮೂರ್ತಿ ಮಾತನಾಡಿ, ಹುಟ್ಟಿದ ಪ್ರತಿ ಮಗುವು ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಬೇಕು, ಶಿಕ್ಷಣ ಎನ್ನುವುದು ಕತ್ತಲೆಯಿಂದ ಬೆಳಕಿನ ಕಡೆಗೆ ನಡೆಸುವಂತದ್ದಾಗಿದೆ. ಪಾಲಕರು ಬಡತನದಲ್ಲಿದ್ದರು ಮಕ್ಕಳಿಗೆ ಶಿಕ್ಷಣವೆಂಬ ಶ್ರೀಮಂತಿಕೆಯನ್ನು ಕೊಡಬೇಕು. ಆಗ ಮಾತ್ರ ಸಮಾಜದಲ್ಲಿ ಅಜ್ಞಾನ ದೂರುವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಡಿ.ಡಿ ಹಾಲಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್‍ರೆಡ್ಡಿ, ಜ್ಲಾನ ತರಂಗಿಣಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪಿ.ಎಸ್ ಅರವಿಂದ್, ಪ್ರೇರಣಾ ಸಮಾಜ ಸೇವಾ ಸಂಸ್ಥೆ ಮುಖ್ಯಸ್ಥ ವಂದನೀಯ ಫಾದರ್ ಸಿಲ್ವೆಸ್ಟರ್, ಡಾನ್ ಬಾಸ್ಕೋ ಕಾರ್ಯಕರ್ತಬಿ.ಎಸ್ ಚಂದ್ರಪ್ರಕಾಶ್, ಪಿಎಸ್‍ಐ ಸಾಗರ್, ಪಲ್ಲಾಗಟ್ಟೆ ಶೇಖರಪ್ಪ, ಮಹಮದ್ ಗೌಸ್ ಸೇರಿದಂತೆ ಮತ್ತಿತರರಿದ್ದರು.