ಸುದ್ದಿವಿಜಯ, ಜಗಳೂರು: ಮುಖ್ಯಮಂತ್ರಿ ಹಾಗೂ ವಿತ್ತಸಚಿವರಾಗಿರುವ ಸಿದ್ದರಾಮಯ್ಯ ಮಂಡಿಸಲಿರುವ ಆಯವ್ಯಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಎಸ್‍ಸಿ, ಎಸ್‍ಟಿ, ಬಿಸಿ ಮತ್ತು ಅಲ್ಪಸಂಖ್ಯಾತ ಶಾಲೆಗಳ ನಿರ್ವಹಣೆಗೆ ವಸತಿ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಲು ಆಯವ್ಯಯದಲ್ಲಿ ಘೋಷಿಸಲು ಸಿಎಂಗೆ ಮನವಿ ಮಾಡಿ ಎಂದು ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಜಿಲ್ಲಾ ವಸತಿ ಶಾಲೆಗಳ ನೌಕರರ ಸಂಘದ ಅಧ್ಯಕ್ಷ ಎನ್.ಬಿ.ರೇವಣಸಿದ್ದಪ್ಪ ಸೇರಿದಂತೆ ಪದಾಧಿಕಾರಿಗಳು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ, ಪ್ರಸ್ತುತ ಕ್ರೈಸ್‍ನಿಂದ ಎಸ್‍ಸಿ, ಎಸ್‍ಟಿ ಮತ್ತು ಬಿಸಿ ವರ್ಗಗಳ 833 ವಸತಿ ಶಾಲೆ/ಕಾಲೇಜುಗಳಿವೆ. ಈ ಶಾಲೆಗಳಲ್ಲಿ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.
ಅನುದಾನ ಬಿಡುಗಡೆ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವುದರಿಂದ ಸರಕಾರದ ಯೋಜನೆಗಳು ಸಮರ್ಪಕ ಮತ್ತು ಸಕಾಲದಲ್ಲಿ ಬಳಕೆಯಾಗದೆ ವಸತಿ ಶಾಲೆಯ ವಿದ್ಯಾರ್ಥಿಗಳು ಹಲವಾರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂಬ ಕಾರಣದಿಂದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯು 58 ಶಾಲೆಗಳನ್ನು 2015ರಲ್ಲಿ ಇಲಾಖೆಗೆ ಹಿಂಪಡೆದಿದೆ. ಪ್ರಸ್ತುತ ಆ ಇಲಾಖೆ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಅವರನ್ನು ಜಿಲ್ಲಾ ವಸತಿ ಶಾಲೆಗಳ ನೌಕರರ ಸಂಘದದಿಂದ ಭೇಟಿ ಮಾಡಿ ವಸತಿ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಲು ಮನವಿ ಮಾಡಿದರು.
2017ರಲ್ಲಿ ಶಾಸನ ಮಂಡಳಿಯ ಜೆ.ಆರ್.ಲೋಬೋ ನೇತೃತ್ವದ ಸದನ ಸಮಿತಿ ಕವಶಿಸ ಸಂಘವು ಕಟ್ಟಡ ನಿರ್ಮಾಣ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿವೆ ಎಂದು ವರದಿ ನೀಡಿತ್ತು.
ವಸತಿ ಶಿಕ್ಷಣ ಇಲಾಖೆ ನಿರ್ದೇಶನಾಲಯದಿಂದ 2 ಲಕ್ಷ ವಿದ್ಯಾರ್ಥಿಗಳಿಗೆ ಮತ್ತು 19 ಸಾವಿರ ಶಿಕ್ಷಕ ಹಾಗೂ ನೌಕರರಿಗೆ ಸಕಾಲಕ್ಕೆ ಸೌಲಭ್ಯಗಳು ದೊರೆಯುತ್ತಿರುವುದರಿಂದ ಸರಕಾರದ ಕೀರ್ತಿ ಹೆಚ್ಚಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿದ್ದಾರೆ.
ಎಸ್‍ಎಸ್‍ಎಲ್‍ಸಿ ಮತ್ತು ಪಿಯು ಪರೀಕ್ಷೆಗಳಲ್ಲಿ ಹೆಚ್ಚು ಪರಿಣಾಮಕಾರಿ ಫಲಿತಾಂಶ ಬರುತ್ತಿದೆ. ಈ ಕಾರಣದಿಂದ ವಸತಿ ಶಾಲೆಗಳ ನಿರ್ವಹಣೆಗಾಗಿ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ವಸತಿ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಲು ಆಯವ್ಯಯದಲ್ಲಿ ಘೋಷಣೆ ಮಾಡಲು ಮುಖ್ಯಮಂತ್ರಿಗಳನ್ನು ಮನವಿ ಮಾಡಿ ಎಂದು ಒತ್ತಾಯಿಸಿದರು.
ಈ ವೇಳೆ ಸಂಘದ ಗೌರವಾಧ್ಯಕ್ಷ ಕೆ.ಆರ್.ಶಿವಕುಮಾರ್, ಖಜಾಂಚಿ ಜಿ.ನಂದಿನಿ, ಪ್ರಧಾನ ಕಾರ್ಯದರ್ಶಿ ಎಸ್.ಆರ್.ಮುರಳೀಧರ್, ಸಂಘಟನಾ ಕಾರ್ಯದರ್ಶಿ ಕಲೀಮುಲ್ಲಾ, ಸಹಕಾರ್ಯದರ್ಶಿ ಎಚ್.ಆರ್.ನಾಗರಾಜ್, ತಾಲೂಕು ಕಾರ್ಯದರ್ಶಿ ಆರ್.ಬಿ.ರಂಗನಾಥ್, ಡಿ.ಪ್ರಭುಕುಮಾರ್, ಟಿ.ಮಂಜುನಾಥ್, ಪ್ರವೀಣ್ ಗಾಮನಗಟ್ಟಿ, ಸಿ.ಎಂ.ಬಸವರಾಜು ಸೇರಿದಂತೆ ಅನೇಕರು ಇದ್ದರು.
ಸಿಎಂ/ಸಚಿವರ ಗಮನಕ್ಕೆ ತರಲು ಸಿದ್ಧ
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಿ.ದೇವೇಂದ್ರಪ್ಪ, ಮುಖ್ಯಮಂತ್ರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ನಿಮ್ಮ ಬೇಡಿಕೆಗಳ ಬಗ್ಗೆ ಅವರ ಗಮನಕ್ಕೆ ತರಲಾಗುವುದು.
ವಸತಿ ಶಾಲೆಗಳಿಗೆ ನಿರ್ದೇಶನಾಲಯ ಮಾಡುವ ಕುರಿತು ಸಂಬಂಧಪಟ್ಟ ಸಚಿವರ ಬಳಿಯೂ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.