ಸುದ್ದಿವಿಜಯ, ಜಗಳೂರು: ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕಸರತ್ತು ಪೂರ್ಣಗೊಂಡಿದ್ದು ಪಟ್ಟಿ ಇಂದು ಸಂಜೆ ಒಳಗೆ ಪ್ರಕಟವಾಗುವ ಸಾಧ್ಯತೆಯಿದ್ದು ಜಗಳೂರು ಕ್ಷೇತ್ರದ ಹಾಲಿ ಶಾಸಕ ಎಸ್.ವಿ.ರಾಮಚಂದ್ರ ಅವರಿಗೆ ಟಿಕೆಟ್ ಪಕ್ಕ ಎನ್ನುವುದು ಮೂಲಗಳಿಂದ ತಿಳಿದು ಬಂದಿದೆ.
ಚುನಾವಣೆ ಅಧಿಸೂಚನೆ ಪ್ರಕಟವಾಗುವ ಹೊತ್ತಿಗೆ ಬಿಜೆಪಿ ಪಟ್ಟಿ ಹೊರಬೀಳುವ ನಿರೀಕ್ಷೆಯಿದೆ. ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ 150 ರಿಂದ 180 ಅಭ್ಯರ್ಥಿಗಳ ಹೆಸರು ಪ್ರಕಟಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ನೇತೃತ್ವದ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ ಹೊಸದಲ್ಲಿಯಲ್ಲಿ ಭಾನುವಾರ ಸಂಜೆ ನಡೆಯಿತು.
2 ತಾಸು ನಡೆದ ಸಭೆಯಲ್ಲಿ ಸಂಭವ್ಯ ಅಭ್ಯರ್ಥಿಗಳ ಗೆಲುವಿನ ಸಾಮಥ್ರ್ಯ ಹಾಗೂ ನಿರೀಕ್ಷೆಯಲ್ಲಿ ಬಂದಿರುವ ಅಂಶಗಳ ಬಗ್ಗೆ ತಾಳೆ ಹಾಕಿ ನೋಡಲಾಯಿತು.
ಸಂಜೆ ಒಳಗೆ ಪಟ್ಟಿ ಬಿಡುಗಡೆ ಆಗಲಿದ್ದು ಮೊದಲನೇ ಪಟ್ಟಿಯಲ್ಲಿ ಶಾಸಕ ಎಸ್.ವಿ.ರಾಮಚಂದ್ರ ಅವರ ಹೆಸರು ಬಹಿರಂಗವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದು ಮೂಲಗಳ ಪ್ರಕಾರ ರಾಜ್ಯದಲ್ಲಿ ಸುಮಾರು 16 ರಿಂದ 18 ಜನ ಶಾಸಕರಿಗೆ ಬಿಜೆಪಿ ಟಿಕೆಟ್ ದೊರಕುವುದಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಜಗಳೂರಿನಲ್ಲಿ ಬಿಜೆಪಿ ಟಿಕೆಟ್‍ಗೆ ಫೈಟ್ ಇಲ್ಲ:
ಕೊಂಡು ಕುರಿ ನಾಡಿನಲ್ಲಿ ಸದ್ಯ ಎಸ್.ವಿ.ರಾಮಚಂದ್ರ ಬಿಟ್ಟರೆ ಪ್ರಬಲ ಟಿಕೆಟ್ ಆಕಾಂಕ್ಷಿ ಯಾರೂ ಇಲ್ಲ. ಹಾಗಾಗಿ ಟಿಕೆಟ್ ಎಸ್.ವಿ.ಆರ್ ಗೆ ಸಿಗುವ ಸಾಧ್ಯತೆ ದಟ್ಟವಾಗಿದೆ.
ಕಾಂಗ್ರೆಸ್‍ನಲ್ಲಿ ಟಿಕೆಟ್‍ಗೆ ಜಿದ್ದಾಜಿದ್ದಿ:
ಜಗಳೂರು ಕ್ಷೇತ್ರದ ಟಿಕೆಟ್‍ಗಾಗಿ ಮೂವರು ಪ್ರಬಲ ಆಕಾಂಕ್ಷಿಗಳಾಗಿದ್ದು ಘೋಷಿಸಿದ ಎರಡು ಪಟ್ಟಿಯಲ್ಲಿ ಜಗಳೂರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗದೇ ಇರುವುದು ಆಕಾಂಕ್ಷಿಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಅದರಲ್ಲೂ ಮಾಜಿ ಶಾಸಕ ಎಚ್.ಪಿ.ರಾಜೇಶ್, ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರು ಟಿಕೆಟ್‍ಗಾಗಿ ಪಟ್ಟು ಹಿಡಿದಿದ್ದಾರೆ.
ಜತೆಗೆ ಕೆಪಿಸಿಸಿ ರಾಜ್ಯ ಎಸ್‍ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ಅವರು ಪಕ್ಷಕ್ಕಾಗಿ ದುಡಿದಿರುವ ಕಾರಣ ಟಿಕೆಟ್ ಬೇಕೇ ಬೇಕು ಎಂದು ತಮ್ಮ ನೆಚ್ಚಿನ ನಾಯಕರಿಂದ ವರಿಷ್ಠರಿಗೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಪಕ್ಷದಿಂದ ತಿಪ್ಪೇಸ್ವಾಮಿ ಕಣಕ್ಕೆ:
ಜಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸೈನಿಕ ತಿಪ್ಪೇಸ್ವಾಮಿ ಅವರನ್ನು ಕಣಕ್ಕಿಳಿಸುವುದಾಗಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್ ಮೊನ್ನೆಯಷ್ಟೇ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಿಎಸ್‍ಎಫ್‍ನಲ್ಲಿ 21 ವರ್ಷಗಳ ಕಾಲ ದೇಶ ಸೇವೆಯಲ್ಲಿ ತೊಡಗಿಕೊಂಡು ನಿವೃತ್ತ ಯೋಧನಿಗೆ ರಾಜಕೀಯ ಸೇವೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇಂದು ಬಿಡುಗಡೆಯಾಗಲಿರುವ ಟಿಕೆಟ್ ಪಟ್ಟಿಯಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆಯೋ ಕಾದು ನೋಡಬೇಕು.
ಒಟ್ಟಿನಲ್ಲಿ ಟಿಕೆಟ್ ಸಿಕ್ಕ ನಂತರವೇ ಎರಡೂ ಪಕ್ಷಗಳಲ್ಲಿ ಜಿದ್ದಾಜಿದ್ದಿ ತಾರಕ್ಕೆ ಏರಲಿದೆ.