ಸುದ್ದಿವಿಜಯ, ಜಗಳೂರು: ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿ ಮರಳಿ ಗೂಡಿಗೆ ಬಂದಿರುವ ಕಾರ್ಯಕರ್ತರು ಕಳೆದ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಮಾಡಬೇಡಿ. ನೀವು ಆತ್ಮಾವಲೋಕನ ಮಾಡಿಕೊಳ್ಳುವುದಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಪಕ್ಷದಲ್ಲೇ ಇದ್ದ ಕಾರ್ಯಕರ್ತರು ಪಕ್ಷ ಬಿಟ್ಟು ಹೊರ ಹೋಗಿದ್ದು ನಮಗೆಲ್ಲ ನೋವಾಯಿತು.
ಈಗಾಗಲೇ ವಿಧಾನಸಭೆ ಚುನಾವಣೆ ಮುಗಿದು ಹೋಗಿದೆ. ವೋಟ್ ಯಾರು ಹಾಕಿದ್ದೀರಿ ಎಂದು ನಾನು ಹುಡುಕಲು ಹೋಗಲ್ಲ. ನಿಮ್ಮೆಲ್ಲರ ಆಶೀರ್ವಾದಿಂದ ನಾನು ಶಾಸಕನಾಗಿದ್ದೇನೆ. ನನ್ನ ಐದು ವರ್ಷದ ಆಡಳಿತದಲ್ಲಿ ರಾಜ ನೀತಿ, ರಾಜ ಧರ್ಮ ಅನುಸರಿಸಿ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇನೆ ಎಂದರು.
ಚುನಾವಣೆ ವೇಳೆ ಯಾದವ, ವಾಲ್ಮೀಕಿ, ಕುರುಬ ಮತ್ತು ಮುಸ್ಲಿಂ ಸಮುದಾಯಗಳ ಬೆಂಬಲ ಹೆಚ್ಚಿನ ಮಟ್ಟದಲ್ಲಿ ನನಗೆ ಸಿಕ್ಕಿತ್ತು. ಮುಂದಿನ ಲೋಕಸಭೆ ಮತ್ತು ಜಿಪಂ, ತಾಪಂ ಚುನಾವಣೆಗಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷವನ್ನು ಬಲ ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.ಜಗಳೂರು ಪಟ್ಟಣದಲ್ಲಿ ವಿವಿಧ ಗ್ರಾಮಗಳ ಯಾದವ ಸಮುದಾಯದ 150ಕ್ಕೂ ಹೆಚ್ಚು ಮುಖಂಡರು ಶಾಸಕ ಬಿ.ದೇವೇಂದ್ರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ನಾನು ಶ್ರೀರಾಮನ ವಿರೋಧಿಯಲ್ಲ:
ನಾನು ಶ್ರೀರಾಮನ ವಿರೋಧಿ ಅಲ್ಲ. ರಾಮನ ಬಗ್ಗೆ ಸಾಕಷ್ಟು ಓದಿದ್ದೇನೆ. ಆದರೆ ರಾಮನ ಹೆಸರಿನಲ್ಲಿ ಕೋಟಿ ಕೋಟಿ ಹಣ ವೆಚ್ಚ ಮಾಡುವ ಆ ಪಕ್ಷದಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ.
ಸಂವಿಧಾನದ ಆಶಯಗಳನ್ನು ಬದಿಗೊತ್ತಿ ರಾಮ ರಾಜ್ಯದ ಕನಸು ಎನ್ನುವವರು ಮಾಡುವ ಕೆಲಸವನ್ನು ನಾನು ವಿರೋಧಿಸುತ್ತೇನೆ. ನಮ್ಮ ನಮ್ಮ ದೇವರುಗಳಾದ ದುರುಗಮ್ಮ, ಚೌಡಮ್ಮ, ಮಾರಮ್ಮರೂ ದೇವರೇ ಅಲ್ಲವೇ.
ಸಿಎಂ ಸಿದ್ದರಾಮಯ್ಯ ಹೇಳಿದಂತೆ ನಮ್ಮ ನಮ್ಮ ದೇವರುಗಳನ್ನು ಪೂಜಿಸೋಣ. ನಮಗೆ ಇಷ್ಟವಾಗುವ ಉಡುಗೆ, ತೊಡುಗೆಗಳನ್ನು ಬಳಸೋಣ. ವಿವಿಧತೆಯಲ್ಲಿ ಏಕತೆಯೇ ನಿಜವಾದ ಅಂಬೇಡ್ಕರ್ ಪ್ರತಿಪಾದಿಸಿದ ಮಂತ್ರವಾಗಿದ್ದು ಎಲ್ಲರನ್ನೂ ಗೌರವಿಸುವುದೇ ಸಂವಿಧಾನ ಎಂದರು.ಪ್ರಸ್ತುತ ವರ್ಷ ಮೇ ತಿಂಗಳ ಒಳಗಾಗಿ 57 ಕೆರೆ ತುಂಬಿಸುವ ಯೋಜನೆ ಪೂರ್ಣಗೊಳಿಸಲು ಬದ್ಧವಾಗಿದ್ದೇನೆ. ಈಗಾಗಲೇ ಎಂಜಿನಿಯರ್ ಸಭೆ ಕರೆದು ಚರ್ಚಿಸಿದ್ದೇನೆ. ಬರುವ ಮಳೆಗಾಲದ ಒಳಗೆ 57 ಕೆರೆಗಳಿಗೆ ನೀರು ತುಂಬಿಸಲು ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಕೆಪಿಸಿಸಿ ಎಸ್‍ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್ ಮಾತನಾಡಿ, ಬಿಜೆಪಿ ನಾಯಕರು ಸಾಮಾನ್ಯ ಜನರ ಕೈಗೆ ಸಿಗುವುದೇ ಕಷ್ಟ. ಆದರೆ ಕಾಂಗ್ರೆಸ್ ಮುಖಂಡರು ಜನ ಸಾಮಾನ್ಯರ ಕೈಗೆ ಸುಲಭವಾಗಿ ಸಿಗುತ್ತಾರೆ. ಕೆ.ಪಿ.ಪಾಲಯ್ಯ ಸೇರಿದಂತೆ ಎಲ್ಲ ನಾಯಕರು ಜನರ ಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂದರು.
ಯಾವದ ಸಮುದಾಯದ ಮುಖಂಡ ಚಿತ್ತಪ್ಪ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಿಟ್ಟು ಬೇರೆ ನಿರ್ಧಾರ ತೆಗೆದುಕೊಂಡಿದ್ದು ತಪ್ಪಾಯ್ತು. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನನ್ನನ್ನು ಪಕ್ಷ ತಾಪಂ ಸದಸ್ಯನನ್ನಾಗಿ ಮಾಡಿತ್ತು.
ನಮ್ಮ ತಪ್ಪು ನಿರ್ಧಾರಗಳಿಂದ ನಮಗೆ ನೋವಾಗಿದೆ. ತಪ್ಪಿನ ಅರಿವಾಗಿ ಕಾಂಗ್ರೆಸ್ ಸೇರುತ್ತೇವೆ ಎಂದಿದ್ದಕ್ಕೆ ಶಾಸಕರು ಸಮ್ಮತಿ ನೀಡಿದರು. ಇನ್ನಾದರೂ ನಾವೆಲ್ಲ ನಿಯತ್ತಿನಿಂದ ಪಕ್ಷಕ್ಕಾಗಿ ದುಡಿಯೋಣ. ಬಹಳ ಜನ ಯುವಕರು, ಮುಖಂಡರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಸೇರಲಿದ್ದಾರೆ ಎಂದರು.
ಇದೇ ವೇಳೆ ಹನುಮಂತಾಪುರ ಗೊಲ್ಲರಹಟ್ಟಿ, ಅಣಬೂರು ಗೊಲ್ಲರಹಟ್ಟಿ, ತೋರಣಗಟ್ಟೆ, ಚಿಕ್ಕಮ್ಮನಹಟ್ಟಿ ಸೇರಿದಂತೆ ಅವಿವಿಧ ಗೊಲ್ಲರಹಟ್ಟಿ ಗ್ರಾಮಗಳ 150ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ರಾಜ್ಯ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಮುಖಂಡರಾದ ಸಿ.ತಿಪ್ಪೇಸ್ವಾಮಿ, ಬಿ.ಮಹೇಶ್ವರಪ್ಪ, ಷಂಷೀರ್ ಅಹಮದ್, ಓಮಣ್ಣ, ಅನೂಪ್ ರೆಡ್ಡಿ, ಜೀವಣ್ಣ, ಮಾಳಮ್ಮನಹಳ್ಳಿ ವೆಂಕಟೇಶ್, ಜೆ.ಕೆ.ರೇವಣಸಿದ್ದಪ್ಪ. ಹಟ್ಟಿ ತಿಪ್ಪೇಸ್ವಾಮಿ, ಮಾರುತಿ, ನಾಗೇಂದ್ರರೆಡ್ಡಿ, ಗೌಡ್ರು ರಂಗಪ್ಪ ಸೇರಿದಂತೆ ಅನೇಕರು ಇದ್ದರು.