ಸುದ್ದಿವಿಜಯ, ಜಗಳೂರು: ಪಕ್ಷಕ್ಕೆ ನಾವು ಅನಿವಾರ್ಯ ಅಲ್ಲ, ನಮಗೆ ಪಕ್ಷ ಅನಿವಾರ್ಯ ಎಂಬುದನ್ನು ಕಾರ್ಯಕರ್ತರು, ಮುಖಂಡರು ಅರ್ಥಮಾಡಿಕೊಳ್ಳಬೇಕು ಎಂದು ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿದ್ದ ಮುಖಂಡರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖಂಡರಿಗೆ ಶಾಸಕ ಬಿ.ದೇವೇಂದ್ರಪ್ಪ ಮಾರ್ಮಿಕವಾಗಿ ನುಡಿದರು.
ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಸೋಮವಾರ ಜಿಪಂ ಮಾಜಿ ಸದಸ್ಯ ಎಸ್.ಕೆ.ರಾಮರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಚಿತ್ತಪ್ಪ, ಪ್ರಹ್ಲಾದ್‍ರೆಡ್ಡಿ, ರಂಗಪ್ಪ, ಸಂಜಯ್, ಹುಚ್ಚವ್ವನಹಳ್ಳಿ ನಾಗರಾಜ್ ಅವರನ್ನು ಕಾಂಗ್ರೆಸ್ ಸೇರ್ಪಡೆ ನಂತರ ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ನನ್ನ ವಿರುದ್ಧ ಹೋದವರು ಮತ್ತೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷ ತಾಯಿ ಇದ್ದಂತೆ ರಾಮರೆಡ್ಡಿ ಹಿರಿಯರು ಕಾಂಗ್ರೆಸ್ ಪಕ್ಷದಲ್ಲೇ ಅಧಿಕಾರ ಅನುಭವಿಸಿ ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿ ಪರ ನಿಂತಿದ್ದರು. ಆದರೂ ನನಗೇನು ನೋವಿಲ್ಲ, ನಷ್ಟವೂ ಆಗಿಲ್ಲ.
99 ಮೆಟ್ಟಿಲು ಹತ್ತಿದ ನಾಯಕರು ನೂರನೇ ಮುಟ್ಟಿಲು ಹತ್ತದೇ ಶೂನ್ಯಕ್ಕೆ ಬಿದ್ದರು. ಮಾಜಿ ಶಾಸಕರಾದ ಅಶ್ವಥ್‍ರೆಡ್ಡಿ ಸೇರಿದಂತೆ ಅನೇಕ ಮುಖಂಡರು, ನಾಯಕರು ಕಾಂಗ್ರೆಸ್ ಪಕ್ಷ ಕಟ್ಟಿದ್ದಾರೆ. ನಾವ್ಯಾರು ಪಕ್ಷಕ್ಕೆ ಅನಿವಾರ್ಯ ಅಲ್ಲ ಎಂಬುದನ್ನು ಅರ್ಥಿಮಾಡಿಕೊಳ್ಳಬೇಕು.
ಕಾಂಗ್ರೆಸ್ ಪಕ್ಷದ ಟಿಕೆಟ್‍ಗಾಗಿ ಸಾವಿರಾರು ಜನ ಅರ್ಜಿ ಹಾಕಿದ್ದರೂ ಆದರೆ 224 ಜನರಿಗೆ ಅಷ್ಟೇ ಟಿಕೆಟ್ ಕೊಡಲು ಸಾಧ್ಯ. ಹಾಗಂತ ಅವರೇನು ಪಕ್ಷ ಬಿಟ್ಟು ಹೋಗಿಲ್ಲ. ನನಗೆ ವರಿಷ್ಠರು ಟಿಕೆಟ್ ಕೊಟ್ಟರು. ಪಕ್ಷ ಬಿಟ್ಟು ಹೋದ ನಾಯಕರಿಂದ ನನಗೇನು ನಷ್ಟವಾಗಲಿಲ್ಲ. ಅವರಿಗೇ ನಷ್ಟವಾಗಿಯಿತು ಎಂದು ಹೇಳಿದರು.
ನನಗೆ ಟಿಕೆಟ್ ಸಿಕ್ಕ ತಕ್ಷಣ ‘ನೀವು ಎಚ್.ಪಿ.ರಾಜೇಶ್ ಮನೆಗೆ ಹೋಗಿ ಭೇಟಿ ಮಾಡಿ ಎಂದು ವರಿಷ್ಠರು ಸೂಚನೆ ನೀಡಿದ್ದರು’. ಅವರ ಆದೇಶದಂತೆ ರಾಜೇಶ್ ಅವರ ಮನೆಗೆ ಹೋಗಿ ಮನವೊಲಿಸುವ ಕೆಲಸ ಮಾಡಿದೆ. ಆದರೆ ಕೆಲವರು ರಾಜೇಶ್ ಅವರ ಬೆನ್ನಿಗೆ ನಿಂತು ಅವರನ್ನು ಹಾಳು ಮಾಡಿಬಿಟ್ಟರು ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಪ್ರವಾಹವಿದ್ದಂತೆ ಅದರ ವಿರುದ್ಧ ಹೋದರೆ ಕೊಚ್ಚಿಕೊಂಡು ಹೋಗುತ್ತೀರ ಎಂದು ಹೇಳಿದ್ದೆ. ಆದರೆ ಕೆಲವರು ಪ್ರವಾಹದ ವಿರುದ್ಧ ಹೋಗಿ ನೋವು ಅನುಭವಿಸುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ರೌಡಿ ಎಂದು ಅಪಪ್ರಚಾರ ಮಾಡಿ ನನ್ನ ಸ್ವಾಭಿಮಾನಕ್ಕೆ ಚ್ಯುತಿ ತರುವಂತಹ ಕೆಲಸ ಮಾಡಿದರು. ಅಹಿಂಸೆಯೇ ಧರ್ಮ ಎಂದು ನಂಬಿದವನು ನಾನು. ನಾನೆಂದು ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಿಲ್ಲ. ಪಕ್ಷಕ್ಕೆ ದ್ರೋಹ ಮಾಡಿಲ್ಲ ಎಂದು ರಾಜಕೀಯ ವಿರೋಧಿಗಳಿಗೆ ಚಾಟಿ ಬೀಸಿದರು.
ನಾವು ಎಷ್ಟು ವರ್ಷ ಬದುಕುತ್ತೇವೆ. ಪಕ್ಷ ಶಾಶ್ವತ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಪಕ್ಷ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಬರುವವರನ್ನು ನಾವು ಸ್ವಾಗತಿಸುತ್ತೇವೆ. ಪಕ್ಷದಲ್ಲೇ ಇದ್ದು ಬೆನ್ನಿಗೆ ಚೂರಿ ಹಾಕುವವರನ್ನು ನಾವು ಸಹಿಸುವುದಿಲ್ಲ ಎಂದು ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್, ಪಪಂ ಸದಸ್ಯ ರಮೇಶ್‍ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಪಲ್ಲಾಗಟ್ಟೆ ಶೇಖರಪ್ಪ, ಅನೂಪ್ ರೆಡ್ಡಿ, ವಾಲೀಬಾಲ್ ತಿಮ್ಮಾರೆಡ್ಡಿ, ಮಾಜಿ ಪಪಂ ಅಧ್ಯಕ್ಷ ಮಹಮದ್ ಇಕ್ಬಾಲ್, ಮೊಹಮದ್ ಅಲಿ, ಸಿ.ತಿಪ್ಪೇಸ್ವಾಮಿ, ಮಾಳಮ್ಮನಹಳ್ಳಿ ವೆಂಕಟೇಶ್ ಸೇರಿದಂತೆ ವಿವಿಧ ವಿಭಾಗಗಳ ಅಧ್ಯಕ್ಷರು ಮುಖಂಡರು ಇದ್ದರು.