ಸುದ್ದಿವಿಜಯ, ಜಗಳೂರು: ಅನೇಕರು ಕಾಂಗ್ರೆಸ್ ಪಕ್ಷವೇ ನಮ್ಮ ತಾಯಿ ಎಂದು ಹೇಳಿಕೊಂಡು ಓಡಾಡುತ್ತಿದ್ದವರು.
ಚುನಾವಣೆ ಸಮಯದಲ್ಲಿ ನಡು ರಸ್ತೆಯಲ್ಲೇ ತಾಯಿಯನ್ನು ಬಿಟ್ಟು ಹೋದರು.
ಬಿಟ್ಟು ಹೋದವರು ಪುನಃ ಪಕ್ಷಕ್ಕೆ ಬಂದಿದ್ದೀರಿ ಯಾವುದೇ ಫಲಾಪೇಕ್ಷೆ ಇಲ್ಲದೇ ಪಕ್ಷಕ್ಕಾಗಿ ದುಡಿಯಿರಿ ಎಂದು ಶಾಸಕ ಬಿ.ದೇವೇಂದ್ರಪ್ಪ ಮಾರ್ಮಿಕವಾಗಿ ನುಡಿದರು.
ಪಟ್ಟಣದ ಶಾಸಕ ಜನ ಸಂಪರ್ಕ ಕಚೇರಿಯಲ್ಲಿ ಸೋಮವಾರ ಹೊಸ ವರ್ಷದ ಹಿನ್ನೆಲೆಯಲ್ಲಿ ಕಾರ್ಯಕರ್ತರೊಂದಿಗೆ ಕೇಕ್ ಕತ್ತರಿಸಿದ ನಂತರ ಪಕ್ಷ ಬಿಟ್ಟು ಹೋದವರನ್ನು ಪುನಃ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಎಚ್ಚರಿಸಿದರು.
ಕಾಂಗ್ರೆಸ್ ಪಕ್ಷ ಎಂದೂ ಬಂಜೆಯಲ್ಲ. 2023ನೇ ವರ್ಷ ಕಾಂಗ್ರೆಸ್ ಪಕ್ಷಕ್ಕೆ ಅತ್ಯುತ್ತಮವಾದ ವರ್ಷ. 2024ನೇ ವರ್ಷವೂ ಕಾಂಗ್ರೆಸ್‍ಗೆ ಒಳ್ಳೆಯದೇ ಆಗಲಿದೆ.
ಮುಂಬರುವ ಲೋಕಸಭಾ, ಜಿಪಂ, ತಾಪಂ ಚುನಾವಣೆಯಲ್ಲಿ ಕಾರ್ಯಕರ್ತರು ಒಗ್ಗಟ್ಟಿನಿಂದ ದುಡಿಯಬೇಕು ಎಂದು ಕರೆ ನೀಡಿದರು. ಜಗಳೂರು ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ವಿವಿಧ ಗ್ರಾಮಗಳ ಮುಖಂಡರು ಪುನಃ ಸೇರ್ಪಡೆಯಾದರು.
ಪಕ್ಷ ಬಿಟ್ಟು ಹೋದವರು ತಾವು ಮಾಡಿಕೊಂಡ ತಪ್ಪಿಗೆ ತಾವೇ ಪ್ರಾಯಶ್ಚಿತ್ತ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಂದವರನ್ನು ಸ್ವಾಗತಿಸುತ್ತೇವೆ. ನೀವು ಆತ್ಮಾವಲೋಕನ ಮಾಡಿಕೊಳ್ಳಿ. ಆತ್ಮಶುದ್ದಿ ಮಾಡಿಕೊಳ್ಳಿ. ನಮ್ಮ ಜೊತೆಗೆ ಇದ್ದು ನಮಗೆ ಮೋಸ ಮಾಡಿ ಹೋಗಿದ್ದು ನ್ಯಾಯವೇ? ಎಂದು ಪ್ರಶ್ನಿಸಿದರು.
ತತ್ವ ಸಿದ್ಧಾಂತಗಳನ್ನು ನಂಬಿ ಮತ್ತೆ ಪಕ್ಷಕ್ಕೆ ಬಂದಿದ್ದೀರಿ. ಫಲಾಪೇಕ್ಷೆಯಿಲ್ಲದೇ ಕಾಂಗ್ರೆಸ್‍ಗೆ ದುಡಿಯಿರಿ. ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲೇ ಬರ ಇದೆ ಅನ್ನಿಸುತ್ತಿಲ್ಲ.
ಮುಂದಿನ ಮಾರ್ಚ್‍ನಲ್ಲಿ ಸಿದ್ದರಾಮಯ್ಯನವರು ಆಯವ್ಯಯ ಮಂಡಿಸಲಿದ್ದು ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ಕ್ಷೇತ್ರದಲ್ಲಿ ಆಗಲಿವೆ.
ನೀವು ನಮ್ಮನ್ನು ಕೈ ಬಿಟ್ಟಿರಬಹುದು ಆದರೆ ನಾವು ನಿಮ್ಮನ್ನು ಕೈ ಬಿಡುವುದಿಲ್ಲ ಎಂದು ಭರವಸೆ ನೀಡಿದರು.ಕೆಪಿಸಿಸಿ ರಾಜ್ಯ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಪ್ರಧಾನಿ ವರ್ಷಕ್ಕೆ ಮೂರು ಬಾರಿ ಎರಡು ಸಾವಿರ ಹಣ ರೈತರ ಅಕೌಂಟ್‍ಗಳಿಗೆ ಹಾಕುತ್ತಾರೆ. ಆದರೆ ನಮ್ಮ ಸರಕಾರ ಪ್ರತಿ ತಿಂಗಳು ಮಹಿಳೆಯರ ಅಕೌಂಟ್‍ಗೆ 2000 ಸಾವಿರ ರೂ ಹಾಕುತ್ತಿದ್ದೇವೆ.
ಶ್ರೀರಾಮನ ಹೆಸರಿನಲ್ಲಿ ಅಕ್ಷತೆ ಮನೆ ಮನೆಗೆ ತಲುಪಿಸಿ ಬಿಟ್ಟಿ ಪ್ರಚಾರವನ್ನು ಬಿಜೆಪಿ ಪಡೆಯುತ್ತಿದೆ. ಆದರೆ ನಮ್ಮ ಗ್ಯಾರಂಟಿಗಳು ಬರ ಮಾಸುವಂತೆ ಮಾಡಿವೆ. ಅವುಗಳನ್ನು ಮುಂದಿಟ್ಟು ಮುಂದಿನ ಚುನಾವಣೆಯಲ್ಲಿ ಮತ ಕೇಳೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕೆಪಿಸಿಸಿ ಎಸ್‍ಟಿ ಘಟಕದ ನೂತನ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್ ಮಾತನಾಡಿ, ಅಣ್ಣ ತಮ್ಮಂದಿರಂತೆ ಇದ್ದವರು ನಾವು ನೀವೆಲ್ಲ. ಕಾರಣಾಂತರಗಳಿಂದ ಹೊರ ಹೋಗಿದ್ದವರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಸಂತೋಷ. ಬರುವ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.
ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್‍ಪಟೇಲ್ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷ ಗೆದ್ದಿಲ್ಲ. ಈ ಬಾರಿ ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಕರೆ ನೀಡಿದರು.
ವಿಧಾನಸಭಾ ಕ್ಷೇತ್ರದ ಮಾಗಡಿ, ಪಲ್ಲಾಗಟ್ಟೆ, ಬಗ್ಗೆನಹಳ್ಳಿ, ವೆಂಕಟೇಶ್‍ಪುರ ಸೇರಿದಂತೆ ಅನೇಕ ಗ್ರಾಮಗಳ ಮುಖಂಡರು ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಈ ವೇಳೆ ಎಸ್.ಕೆ.ರಾಮರೆಡ್ಡಿ, ಪಪಂ ಸದಸ್ಯ ರಮೇಶ್ ರೆಡ್ಡಿ, ವಾಲೀಬಾಲ್ ತಿಮ್ಮಾರೆಡ್ಡಿ, ವಕೀಲ ಪ್ರಕಾಶ್, ಅರಿಶಿಣಗುಂಡಿ ಮಂಜುನಾಥ್, ಬಿ.ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಸಿ.ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.