ಅವಕಾಶ ಕೊಡಿ ಜವಾನನಾಗಿ ಸಮಾಜ ಸೇವೆಗೆ ಸಿದ್ಧ: ಬಿ.ದೇವೇಂದ್ರಪ್ಪ

Suddivijaya
Suddivijaya April 17, 2023
Updated 2023/04/17 at 11:51 AM

Suddivijaya/Kannada news/ 17-4-2023

ಸುದ್ದಿವಿಜಯ, ಜಗಳೂರು: ನಾನೊಂದು ದೊಡ್ಡ ಕಾಲೇಜಿನಲ್ಲಿ ಜವಾನನಾಗಿ ನನ್ನ ಕರ್ತವ್ಯದ ಮೂಲಕ ಜೀವನ ನಡೆಸಿದೆ. ನನ್ನ ಬದ್ಧತೆಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟಿದೆ. ನೀವೆಲ್ಲ ಆಶೀರ್ವಾದ ಮಾಡಿ. ಈ ಸಮಾಜದ ಕೊಳೆ ತೆಗೆಯಲು ಮತ್ತೊಮ್ಮೆ ಜವಾನನಾಗಿ ಕಸ ಗುಡಿಸಲು ನಾನು ಸಿದ್ಧನಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಕಾರ್ಯಕರ್ತರಿಗೆ ಮನವಿ ಮಾಡಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ನಿಮ್ಮೆಲ್ಲರ ಆಶಯದಂತೆ ನನ್ನನ್ನು ಕಾಂಗ್ರೆಸ್ ವರಿಷ್ಠರು ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಏ.20 ರಂದು ಗುರುವಾರ ಬೃಹತ್ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಲು ನಿರ್ಧಾರ ಮಾಡಿದ್ದೇನೆ.

ಈ ರಾಜ್ಯದಲ್ಲಿ ಐದು ವರ್ಷಗಳ ಆಳ್ವಿಕೆ ಮಾಡಿದ ಬಿಜೆಪಿ ರೈತರಿಗೆ ಅನ್ಯಾಯ ಮಾಡಿತು. ಸಾಮಾಜಿಕ ನ್ಯಾಯದ ಪರಿಕಲ್ಪನೆ, ತತ್ವ ಸಿದ್ದಾಂತಗಳೊಂದಿಗೆ ಸುಧೀರ್ಘ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಈ ರಾಜ್ಯದ ಜನತೆಗೆ ಪ್ರಣಾಳಿಕೆಯಲ್ಲಿ ಮೂರು ಗ್ಯಾರಂಡಿ ಯೋಜನೆಗಳನ್ನು ಜಾರಿಗೆ ತಂದಿದೆ.

ಗೃಹ ಜ್ಯೋತಿ ಯೋಜನೆ ಅಡಿ 200 ಯುನಿಟ್ ಉಚಿತ ವಿದ್ಯುತ್, ಕುಟುಂಬದ ಹಿರಿಯ ಮಹಿಳೆಗೆ ಪ್ರತಿ ತಿಂಗಳು 2000 ರೂ ಹಣ ನೀಡುವ ಗೃಹ ಲಕ್ಷ್ಮ, ನಿರುದ್ಯೋಗಿ ಯುವಕರಿಗೆ 1500 ಪ್ರತಿ ತಿಂಗಳು ಹಣ ನೀಡುವ ನಮ್ಮ ಪಕ್ಷದ ಯೋಜನೆಗಳು ಜನರಿಗೆ ಮುಟ್ಟುವಂತ ಯೋಜನಗಳಾಗಿವೆ.

ಕಳೆದ 5 ವರ್ಷಗಳಲ್ಲಿ ಈರುಳ್ಳಿ ಬೆಳೆದ ರೈತ ಕಣ್ಣೀಕರು ಹಾಕುತ್ತಿದ್ದಾನೆ. ಬೆಲೆಯಿಲ್ಲದೇ ಪರಿತಪಿಸುವಂತಾಗಿದೆ. ವನವಾಸ ಅನುಭವಿಸಿದ ಜನ ಸಮಾನ್ಯರು ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಅಜ್ಞಾತವಾಸ ಅನುಭವಿಸಬೇಕಾಗುತ್ತದೆ.

ಅಂಬೇಡ್ಕರ್ ರಚಿತ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ ಪಕ್ಷ ಏನಾದರೂ ಇದ್ದರೆ ಅದು ಬಿಜೆಪಿ ಪಕ್ಷ ಎಂದು ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಎಸ್‍ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ನಾನು ಸಹ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಟಿಕೆಟ್ ಅರ್ಜಿ ಹಾಕಿದ ಎಲ್ಲರಿಗೂ ಟಿಕೆಟ್ ಕೊಡಲು ಸಾಧ್ಯವಿಲ್ಲ. 25 ವರ್ಷಗಳಿಂದ ಪಕ್ಷದಲ್ಲೇ ಇದ್ದೇನೆ. ಜಿಪಂ ಸದಸ್ಯನಾಗಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದೇನೆ.

ಈ ಬಾರಿ ನಾನೇ ಚುನಾವಣೆಗೆ ನಿಂತಿದ್ದೇನೆ ಎಂದು ನಂಬಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ. ಕಾಂಗ್ರೆಸ್‍ನಲ್ಲೇ ಇದ್ದ ಎಚ್.ಪಿ.ರಾಜೇಶ್ ಅವರು ಬಂಡಾಯ ಅಭ್ಯರ್ಥಿ ಎಂದು ಘೋಷಣೆ ಮೊಳಗಿಸಿದ್ದಾರೆ.

ಅವರನ್ನು ಸಿದ್ದರಾಮಯ್ಯನವರಂತಹ ಪ್ರಮುಖ ನಾಯಕರು ರಾಜೇಶ್ ಅವರ ಮನವೊಲಿಸಸುವ ಕೆಲಸ ಮಾಡುತ್ತಿದ್ದಾರೆ. ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರನ್ನು ಗೆಲ್ಲಿಸಿ ಕಾಂಗ್ರೆಸ್ ಉಳಿಸಿ ಎಂದು ಅವರು ಮನವಿ ಮಾಡಿದರು.

ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್‍ರಾಜ್ ಪಟೇಲ್ ಮಾತನಾಡಿ, ಬಿಜೆಪಿ ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ಈಡುಮಾಡಿದೆ. ಈ ಬಾರಿ ಕಾಂಗ್ರೆಸ್ 130 ಕ್ಷೇತ್ರಗಳಲ್ಲಿ ಗೆದ್ದೆಗೆಲ್ಲುತ್ತದೆ. ನಮ್ಮ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ 165 ಭರವಸೆಗಳಲ್ಲಿ 163 ಭರವಸೆಗಳನ್ನು ಈಡೇರಿಸಿದ್ದರು.

ಆದರೆ ಬಿಜೆಪಿ ಭರವಸೆಗಳು ಜನ ಸಮಾನ್ಯರಿಗೆ ತಲುಪುವಲ್ಲಿ ವಿಫಲವಾಗಿವೆ. ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿಪರ ಮತ ಕೇಳುವ ಮೂಲಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರನ್ನು ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹ್ಮದ್, ಅರಸಿಕೆರೆ ಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮಂಜುನಾಥ್, ಬಿಳಿಚೋಡು ಓಬ್ಣಣ್ಣ, ಗುರುಸಿದ್ದಪ್ಪ, ತಾಲೂಕು ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ತಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ, ಕಂಬತ್ತಹಳ್ಳಿ ಮಂಜುನಾಥ್, ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಿ.ಡಿ. ಪ್ರಕಾಶ್ ಸೇರಿದಂತೆ ಅನೇಕರು ಇದ್ದರು.

ಎರಡು ಸಾವಿರ ಕಾರ್ಯಕರ್ತರು ಭಾಗಿ

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮೂರು ಸಾವಿರಕ್ಕಿಂತ ಅಧಿಕ ಕಾಂಗ್ರೆಸ್ ಕಾರ್ಯಕತರು ಅರಸಿಕೆರೆ, ಬಿಳಿಚೋಡು, ಸೊಕ್ಕೆ ಸೇರಿದಂತೆ ಅನೇಕ ಭಾಗಗಳಿಂದ ಆಗಮಿಸಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಕಾರ್ಯಕರ್ತರು ಶಪಥ ಮಾಡಿದರು. ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಗೆದ್ದೆಗೆಲ್ಲುತ್ತಾರೆ ಎಂದು ಘೋಷಣೆ ಕೂಗಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!