ಸುದ್ದಿವಿಜಯ, ಜಗಳೂರು: ಹಿಂದುಳಿದ ಜಗಳೂರು ತಾಲೂಕಿನ ಅಭಿವೃದ್ಧಿಗೆ ನೂತನ ಶಾಸಕ ಬಿ.ದೇವೇಂದ್ರಪ್ಪ ಅವರು ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡುತ್ತಾರೆ. ಜನರ ವಿಶ್ವಾಸಕ್ಕೆ, ಆಶೋತ್ತರಗಳಿಗೆ ತಕ್ಕನಾಗಿ ಕೆಲಸ ಮಾಡಲಿದ್ದಾರೆ ಎಂಬ ನಂಬಿಕೆಯಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಮಂಜಪ್ಪ ಹೇಳಿದರು.
ಅರಸಿಕೆರೆ ಗ್ರಾಮದ ಕೋಲಶಾಂತೇಶ್ವರ ಸಭಾಂಗಣದಲ್ಲಿ ಮಂಗಳವಾರ ಕೃತಜ್ಞತಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಸವಲತ್ತು ಜನರಿಗೆ ತಲುಪಬೇಕು. ತಾಲೂಕಿನ ಅಭಿವೃದ್ಧಿಗೆ ಅವರು ಅವಿಸ್ಮರಣೀಯವಾದ ಕೆಲಸ ಮಾಡುವ ವಿಶ್ವಾಸವಿದೆ ಎಂದರು.
ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್‍ರಾಜ್ ಪಟೇಲ್ ಮಾತನಾಡಿ, ಚುನಾವಣೆ ಘೋಷಣೆಯಾಗಿ ಗೆಲುವಿಗಾಗಿ ಹೋರಾಟಕ್ಕೆ ಇಳಿದಾಗ ಕೆಲವರು ಮತದಾರರಿಗೆ ಗೊಂದಲ ಸೃಷ್ಟಿಸಿದರು. 7 ಪಂಚಾಯಿತಿಗಳಿಂದ ಕಡಿಮೆ ಮತಗಳು ಬಂದವು.
ದೇವೇಂದ್ರಪ್ಪ ಕೆಳಮಟ್ಟದಿಂದ ಮೇಲೆ ಬಂದವರು. ನೇರವಾಗಿ ಮಾತನಾಡುತ್ತಾರೆ. ಅಭಿವೃದ್ಧಿ ಚಿಂತನೆಗಳನ್ನು ಇಟ್ಟುಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೂ ತಲುಪಿಸಿದ್ದಾರೆ. ಮುಂಬರುವ ಜಿಪಂ, ತಾಪಂ, ಲೋಕ ಸಭಾ ಚುನಾವಣೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಮುಟ್ಟಿಸಬೇಕು. ಈಭಾಗದಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಕಿ ಹೆಚ್ಚು ಮತಗಳಿಸಬೇಕು ಎಂದರು.
ಕೆಪಿಸಿಸಿ ಎಸ್‍ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಆಗಿದ್ದು ಆಗಿ ಹೋಗಿದೆ. ಅನೇಕ ಹಳ್ಳಿಗಳಲ್ಲಿ ಕಡಿಮೆ ಮತ ಬಿದ್ದಿವೆ. ಮುಂದಿನ ಚುನಾವಣೆಯಲ್ಲಿ ಸವಾಲಾಗಿ ಸ್ವೀಕರಿಸೋಣ. ಏಳು ಪಂಚಾಯಿತಿಗಳಲ್ಲಿ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬೀಳಲ್ಲ. ಕಾರ್ಯಕರ್ತರು, ಮುಖಂಡರು ಪಕ್ಷದ ಪಿಲ್ಲರ್‍ಗಳು. ಗ್ರಾ.ಪಂ ಮಟ್ಟದಲ್ಲಿ ಕಾರ್ಯ ಕರ್ತರನ್ನು ಕರೆಸಿ ಸಭೆ ನಡೆಸಿ ಕೆಲಸ ಮಾಡಿ. ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸಿ ಎಂದರು.
ಕಾಂಗ್ರೆಸ್ ಮುಖಂಡ ಯರಬಳ್ಳಿ ಉಮಾಪತಿ ಮಾತನಾಡಿ, ಕಾಂಗ್ರೆಸ್ ಪಕ್ಷ ಸಾಕು ಎಂದಾದವರು ಹೊರಗೆ ಹೋಗಲು ದಾರಿಗಳಿವೆ. ಪಕ್ಷ ಸೋತಾಗಲೂ ಪಕ್ಷದಲ್ಲಿದ್ದೇವೆ. ಗೆದ್ದಾಗಲೂ ಪಕ್ಷದಲ್ಲಿದ್ದೇವೆ. ಪಕ್ಷ ಬಿಟ್ಟು ಹೋಗುವವರು ಹೋಗಬಹುದು ಎಂದು ಪಕ್ಷ ವಿರೋಧಿಗಳಿಗೆ ಚಾಟಿ ಬೀಸಿದರು.
ಕಾರ್ಯಕ್ರಮದಲ್ಲಿ ಶಾಂತಲಿಂಗ ದೇಶೀಕೆಂದ್ರ ಮಹಾ ಸ್ವಾಮೀಜಿಗಳು ಶಾಸಕ ದೇವೇಂದ್ರಪ್ಪ ಅವರಿಗೆ ಆಶೀರ್ವಾದ ಮಾಡಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹ್ಮದ್, ಜಿಪಂ ಮಾಜಿ ಸದಸ್ಯ ರವೀಂದ್ರ, ಸುರೇಶ್, ಡಗ್ಗಿಬಸಾಪುರ ವೀರಬಸಪ್ಪ, ವಿಜಯ ಕೆಂಚೋಳ್, ಅಮಹದ್ ಅಲಿ, ಬೂದಾಳ್ ಮಂಜಣ್ಣ, ಜಿ.ಡಿ ಪ್ರಕಾಶ್, ಜನಾರ್ಧನ್, ಶೆಟ್ಟಿನಾಯ್ಕ್, ಸಿದ್ದರಾಮ, ಕುಮಾರ್, ಕುಮಾರ ನಾಯ್ಕ್, ಕೆಂಚಣ್ಣ, ಗಣೇಶ್ ನಾಯ್ಕ್, ಆನಂದ್, ಪಲ್ಲಾಘಟ್ಟೆ ಶೇಖರಪ್ಪ, ಸಿ.ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ಇದ್ದರು.