ಸುದ್ದಿವಿಜಯ, ಜಗಳೂರು: ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಗೆಲುವಿಗೆ ಕಾರ್ಯಕರ್ತರು, ಅಭಿಮಾನಿಗಳು ಶನಿವಾರ ಪಟ್ಟಣದ ಗಾಂಧಿವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ದೇವೇಂದ್ರಪ್ಪ ಅವರ ಪುತ್ರ ಕೀರ್ತಿಕುಮಾರ್ ಅವರಿಗೆ ಹೂ ಮಾಲೆ ಹಾಕುವ ಮೂಲಕ ಅಭಿನಂದಿಸಿದ ಅಭಿಮಾನಿಗಳು ಭುಜದ ಮೇಲೆ ಹೊತ್ತು ಮೆರವಣಿಗೆ ಮಾಡಿ ಜೈಕಾರ ಕೂಗಿದರು.
ಇದೇ ವೇಳೆ ಮಾತನಾಡಿದ ಕೀರ್ತಿಕುಮಾರ್, ಇದು ಎಲ್ಲರ ಗೆಲುವು. ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ಜನರು ಮತಹಾಕಿದ್ದಾರೆ. ಅತ್ಯಂತ ಹಿಂದುಳಿದ ತಾಲೂಕು ಎಂಬ ಖ್ಯಾತಿ ಹೊಂದಿರುವ ಜಗಳೂರು ಕ್ಷೇತ್ರವನ್ನು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ಅಭಿವೃದ್ಧಿ ಪಡಿಸುವ ಗುರಿ ನಮ್ಮ ತಂದೆಯವರದ್ದಾಗಿದೆ.
ಸಾಮಾಜಿಕ ನ್ಯಾಯ, ಸರ್ವರಿಗೂ ಸಮ ಬಾಳು, ಸಮಪಾಲು ತತ್ವದ ಅಡಿ ಸರಕಾರದ ಎಲ್ಲ ಸೌಲಭ್ಯಗಳನ್ನು ಜನರಿಗೆ ನ್ಯಾಯಯುತವಾಗಿ ಸಲ್ಲಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು. ಗ್ರಾಮೀಣ ಭಾಗಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿ ದೇವೇಂದ್ರಪ್ಪ ಅವರಿಗೆ ಜೈಕಾರ ಕೂಗಿದರು.