ಸುದ್ದಿವಿಜಯ, ಜಗಳೂರು: ಭಾರತದ ಸಂವಿಧಾನ ಅತ್ಯಂತ ಶಿಸ್ತುಬದ್ಧವಾಗಿದ್ದು ಡಾ.ಅಂಬೇಡ್ಕರ್ ಎಲ್ಲವರ್ಗದ ಜನರಿಗೂ ಸಮಾನ ಅವಕಾಶ ಕಲ್ಪಿಸಿದ್ದಾರೆ. ಭಾರತ ಸಂವಿಧಾನದಲ್ಲಿ ಕೆಲವನ್ನು ತಿದ್ದುಪಡಿ ಮಾಡುವ ಅವಕಾಶವಿದೆಯೇ ವಿನಃ ಅದನ್ನು ಬದಲಾಯಿಸುವ ತಂತ್ರಗಾರಿಕೆ ಯಾರಿಂದಲೂ ಸಾಧ್ಯವಿಲ್ಲವೆಂದು ವಕೀಲ ಹಾಗೂ ಪತ್ರಕರ್ತ ಡಿ.ಶ್ರಿನಿವಾಸ್ ಅಭಿಪ್ರಾಯಪಟ್ಟರು.
ಪಟ್ಟಣದ ಹೋ.ಚಿ ಬೋರಯ್ಯ ಸ್ಮಾರಕ ಪ.ಜಾತಿ, ಪ.ಪಂಗಡ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಸ್ವಾತಂತ್ರ್ಯ, ಸಮಾನತೆ, ಸಹೋದರತ್ವದ ಪರಿಕಲ್ಪನೆಗಳನ್ನು ಫ್ರಾನ್ಸ್ ದೇಶದ ಸಂವಿಧಾನದಿಂದ ಪಡೆಯಲಾಗಿದೆ. ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಸೋವಿಯತ್ ಒಕ್ಕೂಟದಿಂದ ಪಡೆಯಲಾಗಿದ್ದು, ರಾಜ್ಯ ನಿರ್ದೇಶನ ತತ್ವಗಳು ಐಲೆರ್ಂಡ್ ಸಂವಿಧಾನದ ಕೊಡುಗೆಗಳಾಗಿವೆ. ಜಪಾನ್ ದೇಶದಿಂದ ಸರ್ವೋಚ್ಛ ನ್ಯಾಯಾಲಯದ ಕಾರ್ಯನಿರ್ವಹಣೆಯ ಕಾನೂನು ಪಡೆಯಲಾಗಿದೆ ಎಂದರು.
ಭಾರತದ ಎಲ್ಲ 18 ವರ್ಷಗಳ ವಯೋಮಿತಿಯ ಮೇಲಿರುವ ಕಾನೂನುಬದ್ಧ ಮತ ಚಲಾಯಿಸುವ ಅಧಿಕಾರ ಹೊಂದಿರುವ ಪ್ರಜೆಗಳು ಧರ್ಮ, ಜಾತಿ, ಮತ, ಲಿಂಗ ಅಥವಾ ಶಿಕ್ಷಣ ಮಟ್ಟದ ಭೇದವಿಲ್ಲದೇ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಆದರೆ ಚುನಾಯಿತರನ್ನು ಆಯ್ಕೆ ಮಾಡುವಾಗ ಆಲೋಚಿಸಿ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.
ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ, ಸಂವಿಧಾನದ ಬಗ್ಗೆ ಪ್ರತಿ ಪ್ರಜೆಯೂ ಓದಬೇಕು. ಬಹುತೇಕ ಕಾಲೇಜು ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳೊಂದಿಗೆ ಸಂಚಾದ ಮಾಡಿ ಚರ್ಚಿಸ ಅದರ ಆಳವನ್ನು ಅರಿಯಬೇಕು ಎಂದರು.
ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯೊದಗಿಸಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ನಮ್ಮ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು ಎಂದರು.
ಈ ಸಂದರ್ಭದಲ್ಲಿ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಓಂಕಾರಪ್ಪ, ವಕೀಲರಾದ ಬಸವರಾಜ್, ಸಣ್ಣ ಓಬಯ್ಯ, ತಿಪ್ಪೇಸ್ವಾಮಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಡಯ್ಯ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಪ್ರಾಧ್ಯಾಪಕ ನಾಗರಾಜ್ ಸೇರಿದಂತೆ ಮತ್ತಿತರರಿದ್ದರು.