ಸುದ್ದಿವಿಜಯ, ಜಗಳೂರು: ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಶುಕ್ರವಾರ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಕೃಷಿ ಹಾಗೂ ಪಶು ವೈದ್ಯಕೀಯ ಇಲಾಖೆ ಸಹಯೋಗದಲ್ಲಿ ಜಾನುವಾರು ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್, ಕೃಷಿ ಕ್ಷೇತ್ರಕ್ಕೆ ಪೂರಕವಗಿರುವ ಎತ್ತುಗಳು ಮತ್ತು ಎಮ್ಮೆ, ಹಸುಗಳ ಆರೋಗ್ಯ, ಕ್ಷೇಮ ಪ್ರತಿ ರೈತನ ಜವಾಬ್ದಾರಿಯಾಗಿದೆ.
ರೈತರ ಆರ್ಥಿಕತೆಯ ಮತ್ತೊಂದು ಮೂಲ ಹೈನೋದ್ಯಮವಾಗಿದೆ. ಮನುಷ್ಯನಿಗೆ ನಿತ್ಯ ಬೇಕಾಗುವ ಹಾಲು ಮತ್ತು ಹಾಲಿನ ಉತ್ಪನ್ನಗಳ ಹೆಚ್ಚಳಕ್ಕೆ ಹಸುಗಳ ಆರೋಗ್ಯ ಅತ್ಯವಶ್ಯಕ.

ಇತ್ತೀಚಿನ ದಿನಗಳಲ್ಲಿ ಹಸುಗಳು ಗರ್ಭ ಕಟ್ಟುವಲ್ಲಿ ವಿಫಲವಾಗುತ್ತಿವೆ. ಅದಕ್ಕೆ ಕಾರಣ ಅತಿಯಾದ ಉಷ್ಣಾಂಶವಾಗಿದೆ. ಅಲ್ಲದೇ ಕಳೆದ ವರ್ಷ ಗಂಟು ರೋಗ ಕಾಣಿಸಿಕೊಂಡಿದ್ದು ರೈತರ ಆರ್ಥಿಕತೆಗೆ ಹೊಡೆತ ಕೊಟ್ಟಿತ್ತು.
ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕೃಷಿ ಮತ್ತು ಪಶು ವೈದ್ಯಕೀಯ ಇಲಾಖೆ ಜೊತೆಯಾಗಿ ರಾಸುಗಳ ಆರೋಗ್ಯ ತಪಾಸಣಾ ಶಿಬಿರವನ್ನು ತಾಲೂಕಿನ ತೋರಣಗಟ್ಟೆ, ಬಿದರಕೆರೆ, ಭರಮಸಮುದ್ರ ಸೇರಿದಂತೆ ಅನೇಕ ಕಡೆ ಆಯೋಜನೆ ಮಾಡಲಾಗಿದೆ ಎಂದರು.
ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಲಿಂಗರಾಜು ಮಾತನಾಡಿ, ಬರಡು ರಾಸುಗಳ ಸಂಖ್ಯೆ ಹೆಚ್ಚಾಗುತ್ತಿದ್ದು ರೈತರು ಅವುಗಳನ್ನು ಕಸಾಯಿ ಖಾನೆಗಳಿಗೆ ಸಾಗಾಟ ಹೆಚ್ಚಾಗುತ್ತಿದೆ.
ಹೀಗಾಗಿ ಅವುಗಳನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಕೊಡಿಸಿ ಬರಡು ರಾಸು ಮುಕ್ತ ತಾಲೂಕು ಮಾಡಲು ಹಳ್ಳಿಗಳಲ್ಲಿ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.
ಶಿಬಿರದಲ್ಲಿ 200ಕ್ಕೂ ಹೆಚ್ಚು ಎಮ್ಮೆ, ಹಸು ಸೇರಿದಂತೆ ಅನೇಕ ಪಶುಗಳಿಗೆ ಚಿಕಿತ್ಸೆ ಕೊಡಿಸಲಾಯಿತು.
ಈ ವೇಳೆ ಕೃಷಿ ಇಲಾಖೆ ಅಧಿಕಾರಿ ಬೀರಪ್ಪ ಕೊರವರ, ನಿವೃತ್ತ ಪಶು ವೈದ್ಯಾಧಿಕಾರಿಗಳು ಡಾ.ನಂಜಣ್ಣ, ಹಿರಿಯ ಪಶುವೈದ್ಯ ಪರೀಕ್ಷಕ ಕೆ.ಎಸ್.ಶಾಂತಕುಮಾರ್, ಕಿರು ಪಶುವೈದ್ಯ ಪರೀಕ್ಷಕ ರಾಜಭಕ್ಷಿ ಸೇರಿದಂತೆ ಅನೇಕರು ಇದ್ದರು.