ಸುದ್ದಿವಿಜಯ, ಜಗಳೂರು: ತಾಲೂಕಿನ ಯಾವುದೇ ಕೆರೆಗಳಿರಲೀ, ಒತ್ತುವರಿಯಾಗುವುದನ್ನು ತಡೆಗಟ್ಟಬೇಕು, ಅಕ್ರಮ ಮನೆಗಳ ನಿರ್ಮಾಣಕ್ಕೆ ಅವಕಾಶ ನೀಡದೇ ಕೆರೆಗಳ ರಕ್ಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣಾ ಸಭೆಯಲ್ಲಿ ಮಾತನಾಡಿದರು.ಮಳೆಗಾಲ ಕಡಿಮೆಯಾದಂತೆಲ್ಲಾ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾರುವುದರಿಂದ ಒತ್ತುವರಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಈಗಾಗಲೇ ಜಗಳೂರು ಪಟ್ಟಣದ ಕೆರೆ ವಿಸ್ತೀರ್ಣದಲ್ಲಿ ಸಾಕಷ್ಟು ಒತ್ತುವರಿಯಾಗಿ ಅಧಿಕಾರಿಗಳ ನಿರ್ಲಕ್ಷದಿಂದ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ನೀರು ನುಗ್ಗಿ ಹಾನಿಯಾದಾಗ ಅಲ್ಲಿನ ನಿವಾಸಿಗಳು ಬೀದಿ ಪಾಲಾಗುತ್ತಾರೆ. ಆದ್ದರಿಂದ ಕೆರೆಗಳ ಬಗ್ಗೆ ಕಾಳಜಿ ಇರಬೇಕು ಎಂದು ಸಲಹೆ ನೀಡಿದರು.
ಮನೆಗಳಿಗೆ ನೀರು ನುಗ್ಗದಂತೆ ಸುತ್ತಲೂ ಟ್ರಂಚ್‍ಗಳನ್ನು ಹೊಡೆಯಬೇಕು, ಒತ್ತುವರಿ ಮಾಡಿದ ಕುಟುಂಬಗಳಿದ್ದರಿಂದ ಅವರು ಸರ್ಕಾರಿ ಜಾಗಗಳಿಗೆ ಸ್ಥಳಾಂತರಿಸಿ ಶಾಶ್ವತವಾದ ನಿವೇಶನ ನೀಡಿ ಸೂರು ಕಲ್ಪಿಸಿಕೊಡುವ ಕೆಲಸವನ್ನು ಪಿಡಿಒಗಳು ಮಾಡಬೇಕು ಎಂದರು.
ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರ ಸೇರಿದಂತೆ ಸರ್ಕಾರಿ ಕಟ್ಟಡಗಳು ಶಿಥಿಲಗೊಂಡು ದುಸ್ಥಿತಿಯಲ್ಲಿರುವ ಎಲ್ಲಾ ಕಟ್ಟಡಗಳ ಸಂಪೂರ್ಣ ಮಾಹಿತಿ ಪಡೆದು ಅಗತ್ಯವಿರುವ ಅನುದಾನವನ್ನು ಬಳಸಿಕೊಂಡು ದುರಸ್ಥಿಪಡಿಸಬೇಕು. ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಹಿರೇಮಲ್ಲನಹೊಳೆ ಗ್ರಾಮ ಕೆರೆಯ ದಡದಲ್ಲಿ 40ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸವಾಗಿದ್ದಾರೆ. ಬಿಳಿಚೋಡು ಕೆರೆ ಮತ್ತು ಹಳ್ಳ ತುಂಬಿ ಹರಿದರೇ ಜನತಾ ಕಾಲನಿಯ ಮನೆಗಳಿಗೆ ನೀರು ನುಗ್ಗುತ್ತವೆ. ಅಸಗೋಡು ಗ್ರಾಮದ ಕೆರೆಯ ಪಕ್ಕದ 10ಕ್ಕೂ ಹೆಚ್ಚು ಮನೆಗಳು ಮಳೆಯಿಂದ ಭಾಗಶಃ ಹಾನಿಯಾಗಿದ್ದರಿಂದ ಸಂತ್ರಸ್ಥರಿಗೆ 10 ಸಾವಿರ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿ.ಪಂ ಸಿಇಓ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿ ಅಭಾವ ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು, ಮಳೆಗಾಲದಲ್ಲಿ ನೀರು ಹರಿದು ಹೋಗಲು ಚರಂಡಿಗಳ ವ್ಯವಸ್ಥೆ ಮಾಡಬೇಕು, ಹೂಳು ತುಂಬಿದ ಚರಂಡಿಗಳನ್ನು ಸ್ವಚ್ಛತೆ ಮಾಡಬೇಕು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಓವರ್ ಹೆಡ್ ಟ್ಯಾಂಕ್‍ಗಳನ್ನು ಶುಚಿಗೊಳಿಸಬೇಕು, ಪ್ರಾಥಮಿಕ ಆರೋಗ್ಯ ಮತ್ತು ಉಪ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗಳು ನಡೆಯಲು ಕ್ರಮಕೈಗೊಳ್ಳಬೇಕು, ಬಹುತೇಕ ಕಡೆ ದುಸ್ಥಿತಿಗೊಂಡಿರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಪಡಿಸಿ ಜನರು ಶುದ್ದ ನೀರು ಪೂರೈಕೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ನರೇಗಾ ಯೋಜನೆಯಡಿ ಅಭಿವೃದ್ದಿ ಕೆಲಸ ಮಾಡುವ ಉತ್ತಮ ಅವಕಾಶಗಳಿವೆ, ಜನರಿಗೂ ಕೂಲಿ ಕೆಲಸ ನೀಡಬಹುವುದು. ಕೆರೆ, ಚೆಕ್ ಗಳಲ್ಲಿ ಹೂಳು ತೆಗೆಯುವುದು, ಗಿಡ ಗಂಟೆಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬಹುವುದು ಎಂದರು.
ಸಮಾಜ ಕಲ್ಯಾಣ ಇಲಾಖೆಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಮಾತನಾಡಿ,ಪಟ್ಟಣದಲ್ಲಿ ಸುಸಜ್ಜಿತ ಹಾಸ್ಟೆಲ್ ಕಟ್ಟಡಗಳಿದ್ದು ವಿದ್ಯಾರ್ಥಿಗಳ ವಸತಿಗೆ ಯಾವುದೇ ತೊಂದರೆಯಿಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಉಪವಿಭಾಗ ಅಧಿಕಾರಿ ದುರ್ಗಾಶ್ರೀ, ತಾ.ಪಂಇಓ ಚಂದ್ರಶೇಖರ್ ಸೇರಿದಂತೆ ಮತ್ತಿತರಿದ್ದರು.