ಸುದ್ದಿವಿಜಯ, ಜಗಳೂರು: ದೇವನಗರಿ, ವಿದ್ಯಾಕಾಶಿ, ಬೆಣ್ಣೆದೋಸೆ ನಗರಿ ಎಂದೇ ಖ್ಯಾತವಾಗಿರುವ ದಾವಣಗೆರೆಯಲ್ಲಿ 2024ರ ಲೋಕಸಭೆ ಚುನಾವಣೆ ಕಾವು ಜೋರಾಗಿದ್ದು, ಈ ಬಾರಿ ಹೊಸ ಅಭ್ಯರ್ಥಿಗಳೇ ಹೆಚ್ಚು ಆಕಾಂಕ್ಷಿಗಳಾಗಿದ್ದಾರೆ. ಈ ಕ್ಷೇತ್ರದಿಂದ ಸ್ಪರ್ಧೆಗಾಗಿ ಬಿಜೆಪಿಯಿಂದ ಆಕಾಂಕ್ಷಿಗಳ ದಂಡೇ ಸಿದ್ಧವಾಗುತ್ತಿದೆ.
ಈ ಪಟ್ಟಿಯಲ್ಲಿ ಆರ್ ಎಸ್ ಎಸ್ (RSS) ಹಿನ್ನೆಲೆಯುಳ್ಳ ಪ್ರಬುದ್ಧ ವಾಗ್ಮಿ, ಉಪನ್ಯಾಸಕ ಬಿಎನ್‍ಎಂ ಸ್ವಾಮಿ (ಬಿ.ಎನ್.ಮಲ್ಲಿಕಾರ್ಜುನಸ್ವಾಮಿ) ಮುಂಚೂಣೆಯಲ್ಲಿದ್ದಾರೆ.
ಹೌದು, ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದವರಾದ ಬಿಎನ್‍ಎಂ ಸ್ವಾಮಿ ಪ್ರಸ್ತುತ ನಾಲಂದ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಘ ಪರಿವಾರ ಹಿನ್ನೆಲೆಯುಳ್ಳ ಅವರು ಕೇವಲ ಉಪನ್ಯಾಸಕರಷ್ಟೇ ಅಲ್ಲ ಪ್ರಬುದ್ಧ ವಾಗ್ಮಿಗಳಾಗಿದ್ದಾರೆ.
ಲೋಕ ಸಮರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ನಲ್ಲಿ ಹೆಚ್ಚು ಆಕಾಂಕ್ಷಿಗಳಾಗಿದ್ದು, ಜನರ ಮನಸ್ಸು ಸೆಳೆಯಲು ಆಕಾಂಕ್ಷಿಗಳು ನಾನಾ ತಂತ್ರಗಳನ್ನು ಹೂಡುತ್ತಿದ್ದಾರೆ.
ಆದರೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿಎನ್‍ಎಂ ಸ್ವಾಮಿ ಅವರು ಸದ್ದಿಲ್ಲದೇ ರಾಷ್ಟ್ರಮಟ್ಟದ ಬಿಜೆಪಿ ಉನ್ನತ ನಾಯಕರ ಸಂಪರ್ಕದಲ್ಲಿ ಟಿಕೆಟ್‍ಗಾಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಗಳು:
ಪ್ರಸ್ತುತ ಬಿಜೆಪಿಯಲ್ಲಿ ನಿವೃತ್ತ ಸರಕಾರಿ ಅಧಿಕಾರಿ ಕೊಟ್ರೇಶ್, ವೈದ್ಯ ಡಾ.ರವಿ ಕುಮಾರ್, ಸಂಸದ ಜಿಎಂ ಸಿದ್ದೇಶ್ವರ ಮಗ ಅನಿತ್, ಮಾಜಿ ಶಾಸಕ ರೇಣುಕಾಚಾರ್ಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಮೂಲತಃ ಸಂಘ ಪರಿವಾರದ ಮುಖಂಡರೊಂದಿಗೆ ಗುರುತಿಸಿಕೊಂಡಿರುವ ಸ್ವಾಮಿ ಅವರು ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಎಲೆ ಮರೆಯ ಕಾಯಿಯಂತೆ ಸೇವೆ ಮಾಡುತ್ತಾ ಬಂದಿರುವ ಅವರಿಗೆ ಬಿಜೆಪಿ ರಾಷ್ಟ್ರೀಯ ವರಿಷ್ಠರ ಆಶೀರ್ವಾದವೂ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬಿಜೆಪಿಯಲ್ಲಿ ಅಚ್ಚರಿ ಅಭ್ಯರ್ಥಿ ಆಯ್ಕೆ ಮಾಡುವುದರಲ್ಲಿ ವರಿಷ್ಠರು ಯಾರಿಗೂ ಗುಟ್ಟು ಬಿಟ್ಟುಕೊಡುವುದಿಲ್ಲ.
ಇದಕ್ಕೆ ತಾಜಾ ಉದಾಹರಣೆ ಎಂದರೆ ಮಧ್ಯಪ್ರದೇಶ, ಛತ್ತಿಸ್‍ಗಢ ಮತ್ತು ರಾಜಸ್ಥಾನ ರಾಜ್ಯಗಳ ಸಿಎಂ ಆಯ್ಕೆಯಾಗಿದ್ದು ಅದೇ ಮಾದರಿಯಲ್ಲಿ ಕರ್ನಾಟಕ ಲೋಕ ಸಮರದಲ್ಲೂ ಹೊಸ ಮುಖಗಳಿಗೆ ಮಣೆಹಾಕಿ ಅವರನ್ನು ರಾಜಕೀಯ ಮುನ್ನಲೆಗೆ ತರುವಲ್ಲಿ ಬಿಜೆಪಿ ವರಿಷ್ಠರು ಚಿಂತಿಸುತ್ತಿದ್ದಾರೆ ಎನ್ನಲಾಗಿದೆ.
ಉಜ್ವಲ ಸಮಾಜ ನಿರ್ಮಾಣಕ್ಕೆ ಕೈಂಕರ್ಯ:
ನಿವೃತ್ತ ಶಿಕ್ಷಕ ನಾಗೇಂದ್ರಪ್ಪ ಪುತ್ರರಾಗಿರುವ ಬಿಎನ್‍ಎಂ ಸ್ವಾಮಿ ಅವರು ದೇಶವನ್ನು ಭ್ರಷ್ಟಚಾರ ಮುಕ್ತ ಶುಭ್ರ ಮನಸ್ಸಿನ ಜನರ ನಾಡನ್ನಾಗಿಸುವಲ್ಲಿ ತಮ್ಮದೇ ಆಶಯಗಳನ್ನು ಮತ್ತು ಗುರಿಗಳನ್ನು ಇಟ್ಟುಕೊಂಡಿದ್ದಾರೆ.
ಸರಳ ಮತ್ತು ಪ್ರಭಾವಿ ವ್ಯಕ್ತಿಯಾಗಿರುವ ಅವರು ಸ್ಪಟಿಕ ಮಣಿಯಂತೆ. ಬಿಎಸ್ಸಿ, ಎಂಇಡಿ ಶಿಕ್ಷಣ ಪಡೆದಿರುವ ಅವರು ಪ್ರಸ್ತುತ ಶಿಕ್ಷಣ ಶಾಸ್ತ್ರ ಉಪನ್ಯಾಸಕರಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಜೀವ ಸದಸ್ಯತ್ವ ಮತ್ತು ತಾಲೂಕು ಘಟಕದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ದಾನಿ ಸದಸ್ಯ ಮತ್ತು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಜೀವ ಸದಸ್ಯರಾಗಿದ್ದಾರೆ.
ಸಂಘ ಪರಿವಾರದ ಭಾಗವಾಗಿರುವ ಎಬಿವಿಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು.
ಜಗಳೂರು ತಾ. ಸಂಪರ್ಕ ಪ್ರಮುಖ್, ಪರಿಸರ ಮತ್ತು ಜಲ ಸಂರಕ್ಷಣಾ ಪ್ರಮುಖ್, ಜಿಲ್ಲಾ ಮಾಧ್ಯಮೀಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ,
ತುಮಕೂರು ವಿಭಾಗ ಮಾಧ್ಯಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಹೋರಾಟ ಸಮಿತಿ ತಾಲೂಕು ಖಜಾಂಚಿಯಾಗಿದ್ದಾರೆ.
ಸದ್ದುಗದ್ದಲ ವಿರದ ಸಾಧನೆ…
ಉಪನ್ಯಾಸಕ ಬಿಎನ್‍ಎಂ ಸ್ವಾಮಿ ಈಗಾಗಲೇ ಸಂಸದ ಜಿಎಂ ಸಿದ್ದೇಶ್ವರ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ನೀವು ಸ್ಪರ್ಧಿಸದೇ ಇದ್ದರೆ ನಮಗೆ ಟಿಕೆಟ್ ಕೊಡಿಸಿ ಎಂದು ಕೋರಿಕೊಂಡಿದ್ದಾರೆ. ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿದ್ದೇಶ್ವರ್ ಅವರು ಬದಲಾಗುವ ರಾಜಕೀಯ ವಿದ್ಯಮಾನಕ್ಕೆ ಸದಾ ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ನಿವೃತ್ತ ಸರಕಾರಿ ಅಧಿಕಾರಿ ಕೊಟ್ರೇಶ್, ವೈದ್ಯ ಡಾ.ರವಿ ಕುಮಾರ್, ಸಂಸದ ಜಿಎಂ ಸಿದ್ದೇಶ್ವರ ಮಗ ಅನಿತ್, ಮಾಜಿ ಶಾಸಕ ರೇಣುಕಾಚಾರ್ಯ ಜೊತೆ ಬಿಎನ್‍ಎಂ ಸ್ವಾಮಿ ಅವರ ಹೆಸರು ಕೇಳಿಬರುತ್ತಿದ್ದು
ಪಕ್ಷಗಳ ವರಿಷ್ಠರ ಸೆಳೆಯಲು ಆಕಾಂಕ್ಷಿಗಳು ಸಾಕಷ್ಟು ಪ್ರಯತ್ನದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಎಂಪಿ ಸ್ಥಾನಕ್ಕೆ ಹೊಸ ಮುಖಗಳು ಅಖಾಡಕ್ಕೆ ಇಳಿದು, ಸ್ಫರ್ಧಾಳು ಯಾರು ಎಂಬುದು ಮಾತ್ರ ಇನ್ನೂ ನಿಗೂಢ.