ಸುದ್ದಿವಿಜಯ, ಜಗಳೂರು: ತಾಲೂಕಿನ ದೇವಿಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(VSSN) ಹಾಳಾಗಿದ್ದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ರಾಜಕೀಯವೇ ಕಾರಣ. ಸಂಘವನ್ನು 2021ರಲ್ಲಿ ಸೂಪರ್ ಸೀಡ್ ಮಾಡಿಸಿ ಬೇಕಾಬಿಟ್ಟಿ ಸಾಲ ಕೊಡಿಸಿ ಅಧ್ವಾನ ಮಾಡಿದರು ಎಂದು ವಿಎಸ್‍ಎಸ್‍ಎನ್ ಅಧ್ಯಕ್ಷ ಬಸವಾಪುರ ರವಿಚಂದ್ರ ಗಂಭೀರ ಆರೋಪ ಮಾಡಿದರು.
ಸೋಮವಾರ ದೇವಿಕೆರೆ ಗ್ರಾಮದಲ್ಲಿ ವಿಎಸ್‍ಎಸ್‍ಎನ್ ನಿರ್ದೇಶಕರು ಮತ್ತು ರೈತ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಉದ್ದೇಶ ಪೂರ್ವಕವಾಗಿ ಮಾಜಿ ಶಾಸಕ ರಾಮಚಂದ್ರ ವಿಎಸ್‍ಎಸ್‍ಎನ್ ಹಾಳು ಮಾಡಲು ರಾಜಕೀಯ ಮಾಡಿದರು.
ನ.2021ರಲ್ಲಿ ನೋಟಿಸ್ ಕೊಡಿಸಿದರು. ಡಿ.2021ರಲ್ಲಿ ಸಹಕಾರ ಸಂಘವನ್ನು ಸೂಪರ್ ಸೀಡ್ ಮಾಡಿಸಿ ನಂತರ ಮಾ.2022ರಲ್ಲಿ 2.10 ಕೋಟಿ ರೂ ಹಣವನ್ನು ಕೊಟ್ಟವರಿಗೆ ಸಾಲ ಕೊಡಿಸಿ ರೈತರು ಬಡ್ಡಿ ಕಟ್ಟದಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಮಾಜಿ ಶಾಸಕರ ರಾಜಕೀಯ ಪಿತೂರಿಯಿಂದ ಎಂದು ನೇರವಾಗ್ದಾಳಿ ನಡೆಸಿದರು.
ಅವರ ವೈಯಕ್ತಿಕ ರಾಜಕೀಯದಿಂದ ಸಾಕಷ್ಟು ರೈತರಿಗೆ ಅನ್ಯಾಯವಾಯಿತು. ಅಧ್ಯಕ್ಷನಾದ ನನ್ನಮೇಲೆ ಭ್ರಷ್ಟಾಚಾರ ಆರೋಪ ಮಾಡಿದರು. ವೈಜನಾಥ್ ಕಮಿಟಿ ಪ್ಯಾಕೇಜ್‍ನ 58 ಲಕ್ಷ ರೂ ಹಣ ಭ್ರಷ್ಟಾಚಾರವಾಗಿದೆ ಎಂದು ನನಗೆ ನೋಟಿಸ್ ಕೊಟ್ಟಿದ್ದರು. ಆದರೆ ವೈಜನಾಥ್ ಕಮಿಟಿ ಪ್ಯಾಕೇಜ್‍ನ ಹಣ ಈಗಲೂ ಬ್ಯಾಂಕ್‍ನಲ್ಲೇ ಇದೆ.
ಸಂಘದ ಅಡಿ ಬರುವ ಮೆದಕೇರನಹಳ್ಳಿ ಗ್ರಾಮದಲ್ಲಿ 120 ಜನರಿಗೆ 1.85 ಕೋಟಿ ರೂ ಸಾಲ ಕೊಡುವಂತೆ ಮಾಡಿದವರು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇಶ್‍ರುದ್ರೇಶ್ ಅವರ ಅಳಿಯ ರುದ್ರೇಶ್ ಮತ್ತು ಈ ಹಿಂದೆ ಬ್ಯಾಂಕ್ ಅಧಿಕಾರಿಯಾಗಿದ್ದವರೇ ಕಾರಣ. ಇದಕ್ಕೆ ಮಾಜಿ ಶಾಸಕರ ಖುಮ್ಮಕ್ಕು ಇದೆ ಎಂದು ಆರೋಪಿಸಿದರು.
ಸೂಪರ್ ಸೀಡ್ ಮಾಡಿದ ನಂತರ ಒಂದೇ ಗ್ರಾಮಕ್ಕೆ ಅಷ್ಟೊಂದು ಸಾಲ ಕೊಡಿಸುವ ಅಗತ್ಯವೇನಿತ್ತು. ಈ ಸಂಘದ ದುಡ್ಡು ತಿಂದವರು ಮಾಜಿ ಶಾಸಕ ಎಸ್.ವಿ.ರಾಮಚಂದ್ರ. ನನಗೆ ರೈತರ ದುಡ್ಡು ತಿನ್ನುವ ಅವಶ್ಯಕತೆಯಿಲ್ಲ.
ದೇವರು ನನ್ನನ್ನು ಚನ್ನಾಗಿಟ್ಟಿದ್ದಾನೆ. ನನ್ನ ಮೇಲಿನ ಜಿದ್ದಿಗಾಗಿ ವಿಎಸ್‍ಎಸ್‍ಎನ್ ಸೂಪರ್ ಸೀಡ್ ಮಾಡಿಸಿ ನನ್ನನ್ನು ಕೋರ್ಟ್ ಗೆ ಅಲೆಯುವಂತೆ ಮಾಡಿದರು ಮಾಜಿ ಶಾಸಕ ಎಸ್‍ವಿಆರ್ ಎಂದು ವಾಗ್ದಾಳಿ ನಡೆಸಿದರು.
2008ರಲ್ಲಿ ಮಾಜಿ ಶಾಸಕ ಎಸ್‍ವಿಆರ್ ಕಾಂಗ್ರೆಸ್‍ನಲ್ಲಿದ್ದಾಗ ವಾಲ್ಮೀಕಿ ಜಯಂತಿ ಆಚರಣೆಗೆ ನನ್ನನ್ನು ಹಣ ಕೇಳಿದಾಗ ‘ನಿಮ್ಮ ಮನೆ ಬಾಗಿಲಿಗೆ ಬಂದು 50 ಸಾವಿರ ರೂ ಹಣ ಕೊಟ್ಟಿದ್ದೇನೆ. ಅಷ್ಟೇ ಅಲ್ಲದೇ ನೀವು ಕೇಳಿದಾಗಲೆಲ್ಲ ನಾನು ಬಂದು ಎಷ್ಟು ದುಡ್ಡುಕೊಟ್ಟಿದ್ದೇನೆ’ ಎಂದು ಗಾಣಗಟ್ಟೆ ಮಾಯಮ್ಮ ದೇವಿ ಸನ್ನಿಧಿಯಲ್ಲಿ ಆಣೆ ಮಾಡುತ್ತೇನೆ.ನೀನು ಬಂದು ಆಣೆ ಮಾಡಿ. 2008ರಲ್ಲಿ ಸೋನಿಯಾ ಗಾಂಧಿ ದಾವಣಗೆರೆ ಗೆ ಬಂದಾಗ ಅಭ್ಯರ್ಥಿಯಾಗಿದ್ದ ನಿನಗೆ ಬಸ್‍ಗಳಿಗೆ ಬಾಡಿಗೆ ಕೊಡಲು ನಿನ್ನ ಬಳಿ ಹಣ ಇರಲಿಲ್ಲ. ಆದರೆ ನಾನು ಲಕ್ಷಗಟ್ಟಲೆ ಹಣ ಕೊಟ್ಟಿದ್ದೇನೆ ಅದು ನೆನಪಿಲ್ಲವೇ ಎಂದು ಪ್ರಶ್ನಿಸಿದರು.
ನೀವು ಎರಡು ಬಾರಿ ಶಾಸಕರಾಗಿದ್ದರೂ ನಿಮ್ಮಿಂದ ಒಂದೇ ಒಂದು ರೂ ಸಹಾಯ ಪಡೆದಿಲ್ಲ. ಸಹಾಯ ಮಾಡಿದ ನನ್ನ ಮೇಲಿನ ದ್ವೇಷ ಸಾಧಿಸಿದ್ದು ನೀವು. ನಿಮ್ಮ ರಾಜಕೀಯ ದ್ವೇಷಕ್ಕೆ ಇಡೀ ವಿಎಸ್‍ಎಸ್‍ಎನ್ ಸೂಪರ್ ಸೀಡ್ ಮಾಡಿಸಿ ರೈತ ಸಮುದಾಯಕ್ಕೆ ಅನ್ಯಾಯ ಮಾಡಿದ್ದು ನೀವು ಎಂದು ಮಾಜಿ ಶಾಸಕ ಎಸ್‍ವಿ ರಾಮಚಂದ್ರ ವಿರುದ್ಧ ಕಿಡಿಕಾರಿದರು.
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ವೇಣುಗೋಪಾಲ್ ರೆಡ್ಡಿ, ಡಿಸಿಸಿ ಬ್ಯಾಂಕ್ ನೇರವಾಗಿ ರೈತರಿಗೆ ಸಾಲ ಕೊಡುವುದಿಲ್ಲ. ಬ್ಯಾಂಕ್ ವಿಎಸ್‍ಎಸ್‍ಎನ್‍ಗಳಿಗೆ ಸಾಲಕೊಡುತ್ತದೆ. ಆದರೆ ನೀವು ಸಾಲ ಕಟ್ಟದೇ ಇದ್ದರೆ ಹೇಗೆ ಸಂಘಗಳು ಉದ್ದಾರವಾಗುತ್ತವೆ ಎಂದರು.
ಇಡೀ ತಾಲೂಕಿನಲ್ಲೇ ಎಲ್ಲ ವಿಎಸ್‍ಎಸ್‍ಎನ್‍ಗಳು ಚನ್ನಾಗಿ ನಡೆಯುತ್ತಿಲ್ಲ. ನಮಗೆ ಸೊಸೈಟಿಗಳು ಉಳಿಯಬೇಕು. ರೈತರಿಗೆ ಸಾಲ ಸಿಗಬೇಕು ಎಂಬುದಷ್ಟೇ ನಮ್ಮ ಉದ್ದೇಶವಾಗಿದೆ. ಎಲ್ಲ ರೈತರು ವರ್ಷದ ಒಳಗೆ ಸಾಲ ಮರುಪಾವತಿಸಿದರೆ ವಿಎಸ್‍ಎಸ್‍ಎನ್‍ಗಳು ಉಳಿಯುತ್ತವೆ. ಸಾಲ ತೆಗೆದುಕೊಂಡ ರೈತರು ವಿಎಸ್‍ಎಸ್‍ಎನ್ ಉಳಿಸಿಕೊಳ್ಳಲು ರಿನಿವಲ್ ಮಾಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಡಿಸಿಸಿ ಬ್ಯಾಂಕ್ ಅಧಿಕಾರಿ ಪ್ರಭುದೇವ್, ಬಿಳಿಚೋಡು ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಬೀರಪ್ಪ, ಸೂಪರ್‍ವೈಸರ್ ಮಂಜುನಾಥ್, ಉಪಾಧ್ಯಕ್ಷ ಮಂಜಪ್ಪ, ನಿರ್ದೇಶಕರಾದ ರಾಮಪ್ಪ, ರಂಗಪ್ಪ, ಶಿವಕುಮಾರಯ್ಯ, ಮೆದಗಿನಕೆರೆ ವೀರೇಂದ್ರಪಾಟೀಲ್, ಗುರುಸ್ವಾಮಿ, ಎಸ್.ಎಂ.ಮಂಜನಗೌಡ ಸೇರಿದಂತೆ ವಿಎಸ್‍ಎಸ್‍ಎನ್ ರೈತರ ಸದಸ್ಯರು ಇದ್ದರು.