ಜಗಳೂರು ತಾಲೂಕಿನಲ್ಲಿ ಕರಡಿಗಳ ದಾಳಿ, ತಪ್ಪಿಸಿಕೊಳ್ಳುವುದು ಹೇಗೆ?

Suddivijaya
Suddivijaya June 17, 2024
Updated 2024/06/17 at 1:17 PM

suddivijayanews17/6/2024
ಸುದ್ದಿವಿಜಯ, ವಿಶೇಷ, ಜಗಳೂರು: ತಾಲೂಕಿನ ಭೈರನಾಯಕನಹಳ್ಳಿ ಮತ್ತು ಗುಡ್ಡದಲಿಂಗಣ್ಣನಹಳ್ಳಿ ಗ್ರಾಮದಲ್ಲಿ ಕಳೆದ ಶನಿವಾರ (ಜೂ.15)ಮತ್ತು ಭಾನುವಾರ(ಜೂ.16) ಎರಡು ಪ್ರತ್ಯೇಕ ಕರಡಿ ದಾಳಿ ಪ್ರಕರಣಗಳು ಸುತ್ತಮುತ್ತಲ ಗ್ರಾಮಗಳ ಜನರನ್ನು ಬೆಚ್ಚಿ ಬೀಳಿಸಿವೆ.

ತಾಲೂಕಿನ ರಂಗಯ್ಯನದುರ್ಗ ಕೊಂಡುಕುರಿ ವನ್ಯಜೀವಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗುಡ್ಡದಲಿಂಗಣ್ಣನಹಳ್ಳಿ, ಭೈರನಾಯಕನಹಳ್ಳಿ, ತಾರೆಹಳ್ಳಿ, ಗೋಡೆ ಮತ್ತು ಅಣಬೂರು ಗುಡ್ಡಗಳಲ್ಲಿ ಕರಡಿಗಳು ಹೆಚ್ಚು ವಾಸಿಸುವ ತಾಣಗಳಾಗಿವೆ.

ಈ ಎರಡು ಪ್ರತ್ಯೇಕ ಅನಿರೀಕ್ಷಿತ ಈ ಘಟನೆಗಳಿಂದ ಕುಟಂಬವಷ್ಟೇ ಅಲ್ಲ, ಇಡೀ ರೈತ ಸಮುದಾಯ, ಸುತ್ತಮುತ್ತಲ ಹಳ್ಳಿಗಳ ಜನ ಬೆಚ್ಚಿ ಬಿದ್ದಿದ್ದಾರೆ.

ಜಗಳೂರು ತಾಲೂಕಿನ ರಂಗಯ್ಯನ ದುರ್ಗ ಅರಣ್ಯ ಪ್ರದೇಶದಲ್ಲಿ ಅಳವಡಿಸಿರುವ ಕ್ಯಾಮರಾಟ್ರಾಪ್‍ನಲ್ಲಿ ಸೆರೆಸಿಕ್ಕ ಕರಡಿಗಳ ಚಿತ್ರ
ಜಗಳೂರು ತಾಲೂಕಿನ ರಂಗಯ್ಯನ ದುರ್ಗ ಅರಣ್ಯ ಪ್ರದೇಶದಲ್ಲಿ ಅಳವಡಿಸಿರುವ ಕ್ಯಾಮರಾಟ್ರಾಪ್‍ನಲ್ಲಿ ಸೆರೆಸಿಕ್ಕ ಕರಡಿಗಳ ಚಿತ್ರ

ಯಾವ ಪ್ರಾಣಿಯ ದಾಳಿಯಾದರೂ ಸಹಿಸಿಕೊಳ್ಳಬಹುದು. ಆದರೆ ಕರಡಿ ದಾಳಿಯ ಚಿತ್ರಹಿಂಸೆ ಸಹಿಸಿಕೊಳ್ಳುವುದು ಅಸಾಧ್ಯ. ಕರಡಿಗಳಿಗೆ ನಾಲ್ಕು ಇಂಚುಗಳಷ್ಟು ಉದ್ದ ಇರುವ ಉಗುರುಗಳಿಂದ ಒಮ್ಮೆ ಪರಚಿತು ಎಂದಾದರೆ ಮಿದುಳು, ದವಡೆ ಎಲ್ಲವೂ ಕಿತ್ತು ಬರುತ್ತದೆ. ಸ್ಥಳದಲ್ಲೇ ಜೀವ ಹೋದರೂ ಸರಿ. ಇಲ್ಲವಾದರೆ ಅದರಿಂದ ಆಗುವ ಹಿಂಸೆ ಅಷ್ಟಿಷ್ಟಲ್ಲ.

ಹೀಗಾಗಿ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಆಗದಂತೆ ಎಚ್ಚರವಹಿಸಬೇಕಾದರೆ ಕೆಲವೊಂದು ರಕ್ಷಣಾ ಕಲೆಗಳನ್ನು ಮೈಗೂಡಿಸಿಕೊಳ್ಳಬೇಕು ಎನ್ನುತ್ತಾರೆ ಕರಡಿಗಳ ಬಗ್ಗೆ ಅಧ್ಯಯನ ಮಾಡಿರುವ ತಾಲೂಕು ಅರಣ್ಯಾಧಿಕಾರಿ(ಆರ್‍ಎಫ್‍ಒ) ಶ್ರೀನಿವಾಸ್.

ಕರಡಿದಾಳಿಯಾದಾಗ ಹೀಗೆ ಮಾಡಿ:

*ಕಾಡಂಚಿನ ಗ್ರಾಮಗಳ ರೈತರು ಕರಡಿಗಳಿಗೆ ಇಷ್ಟವಾಗುವ ಹಲಸು, ಮಾವು ಮತ್ತಿತರ ಹಣ್ಣಿನ ಬೆಳೆಗಳನ್ನು ಜಮೀನಿನ ಸುತ್ತ ಹಾಕಬೇಡಿ.
*ಕರಡಿ ಮೊದಲು ದಾಳಿ ಮಾಡುವುದು ಮನುಷ್ಯನ ತಲೆ ಭಾಗಕ್ಕೆ. ಹೀಗಾಗಿ ಕರಡಿ ಎದುರಾದಾಗ ಬೋರಲಾಗಿ ಮಲಗಿಬಿಡಿ. ಮನುಷ್ಯನ ತಲೆ ಕಾಣದಿದ್ದರೆ ಅದು ತನಗೆ ಯಾವ ಅಪಾಯವೂ ಇಲ್ಲ ಎಂದು ಭಾವಿಸಿ ದಾಳಿಯ ಮನೋಭಾವ ಬದಲಿಸಬಹುದು.

*ಕರಡಿ ಸಮೀಪಕ್ಕೆ ಬಂದಾಗ ಮಲಗಲು ಸಾಧ್ಯವಿಲ್ಲ ಎಂದಾದರೆ ಹಾಕಿರುವ ಬಟ್ಟೆ ಅಥವಾ ಟೀಚರ್ಟ್, ಸೀರೆಯನ್ನು ತಲೆಗೆ ಮುಚ್ಚಿಬಿಡಿ.
*ದಾಳಿ ಮಾಡುವಾಗ ಕೈಯಲ್ಲೊಂದು ಕೋಲು ಇದ್ದರೆ ಕರಡಿ ಮೊದಲು ಅದಕ್ಕೆ ತನ್ನ ಕೈಗಳಿಂದ ಬಡಿಯುತ್ತದೆ. ಆ ಬಡಿಗೆಯನ್ನು ಕಚ್ಚುತ್ತಿರುತ್ತದೆ. ಆ ಹೊತ್ತಿಗೆ ಓಡಿ ಪರಾರಿಯಾಗಬಹುದು.

*ಜಾಂಬವಂತ ವಾಸವಾಗಿರುವ ಕಲ್ಲು ಬಂಡೆಗಳು, ಗುಹೆಗಳ ಸಮೀಪ ಹೋಗದೇ ಇರಬೇಕು. ಹೋದರೂ ಕೈಯಲ್ಲೊಂದು ಕೋಲು ಇಟ್ಟುಕೊಂಡಿರಬೇಕು. ಕೋಲನ್ನು ಕಲ್ಲುಗಳಿಗೆ ಬಡಿಯುತ್ತ ಸದ್ದು ಮಾಡುತ್ತಿರಬೇಕು. ಆಗ ಮನುಷ್ಯರು ಇದ್ದಾರೆ ಎಂಬುದು ಗೊತ್ತಾಗಿ ಅವುಗಳು ಗುಹೆಯಿಂದ ಹೊರಗೆ ಬರುವುದಿಲ್ಲ.

*ಮರಿಗಳ ಜೊತೆ ಕರಡಿ ಇದೆ ಎಂದಾದರೆ ಮನುಷ್ಯರು ಏನೊ ತೊಂದರೆ ಕೊಡದೆ ಇದ್ದರೂ ತಾಯಿ ಕರಡಿ ದಾಳಿಗೆ ಮುಂದಾಗುತ್ತದೆ. ಹೀಗಾಗಿ ಮರಿಗಳ ಜೊತೆಗಿರುವ ಕರಡಿಗಳ ಬಗ್ಗೆ ಎಚ್ಚರ ವಹಿಸಿ.

*ಕರಡಿಗಳು ಇರುವ ಜಾಗದಲ್ಲಿ ಮನುಷ್ಯರು ಗುಂಪಾಗಿ, ಸದ್ದು ಮಾಡುತ್ತಾ ಹೋಗಬೇಕು.

*ಕರಡಿಗಳು ಮರ ಏರುವುದರ್ಲಿ ಎಕ್ಸ್‍ಪರ್ಟ್. ಕರಡಿ ಅಟ್ಟಿಸಿಕೊಂಡು ಬರುವಾಗ ನಾವು ಮರ ಏರಿ ಕುಳಿತರೆ ಸ್ಪಲ್ಪ ಸುರಕ್ಷಿತವೇ. ಕರಡಿಯೂ ಮರ ಏರಿ ಬಂದರೂ ನೆಲದ ಮೇಲೆ ಇರುವಷ್ಟು ಹೊಡೆಯುವ ಶಕ್ತಿ ಮರದ ಮೇಲೆ ಇರುವುದಿಲ್ಲ.

*ತಮ್ಮ ಜಮೀನುಗಳ ಸುತ್ತಮುತ್ತ ಇರುವ ಲಂಟನಾ, ಕವಳ ಹಣ್ಣಿನ ಗಿಡದ ಪೊದರೆಗಳಲ್ಲಿ ಅಡಗಿ ಕುಳಿತಿರುತ್ತವೆ. ಅವುಗಳನ್ನು ಸ್ವಚ್ಛಗೊಳಿಸಿ.

ಯಾವುದೇ ಕಾಡು ಪ್ರಾಣಿ ದಾಳಿಯಿಂದ ರೈತ ತನ್ನ ಜಮೀನಿನಲ್ಲಿ ಮೃತಪಟ್ಟರೆ 15 ಲಕ್ಷದವರೆಗೆ ಪರಿಹಾರ ಬರುತ್ತದೆ. ಅಂಗಾಗ ಕಳೆದುಕೊಂಡರೆ 10 ಲಕ್ಷ ಹಣ ಬರುತ್ತದೆ.

ಅಷ್ಟೆ ಅಲ್ಲ 6 ತಿಂಗಳವರೆಗೆ 5 ಸಾವಿರ ಜೀವನೋಪಾಯಕ್ಕೆ ನೀಡಲಾಗುತ್ತದೆ. ಆದರೆ ಆ ವ್ಯಕ್ತಿ ಕಾಡಿನಲ್ಲಿ ಮೃತಪಟ್ಟರೆ ಪರಿಹಾರ ನೀಡಲು ವನ್ಯಜೀವಿ ಕಾಯ್ದೆಯಲ್ಲಿ ಅವಕಾಶವಿಲ್ಲ. ಹೀಗಾಗಿ ರೈತರು ಸಂರಕ್ಷಿತ ಅರಣ್ಯಗಳಿಗೆ ಹೋಗಬಾರದು ಎಂದು ಆರ್‍ಎಫ್‍ಒ ಶ್ರೀನಿವಾಸ್ ಮನವಿ ಮಾಡಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!