ಸುದ್ದಿವಿಜಯ, ಜಗಳೂರು: ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಕಳೆದ ಸೋಮವಾರ ಚರಂಡಿ ಸ್ವಚ್ಛಗೊಳಿಸುವ ವೇಳೆ ವಿಷ ಸೇವಿಸಿ ಮೃತಪಟ್ಟ ಸತ್ಯಪ್ಪ(50), ಮೈಲಪ್ಪ(41) ಮೃತ ಕೂಲಿಕಾರ್ಮಿಕರ ಕುಟುಂಬಗಳಿಗೆ ಗ್ರಾಪಂ ವತಿಯಿಂದ ತಲಾ ಮೂರು ಲಕ್ಷ ರೂ ಪರಿಹಾರ ಚಕ್‍ನ್ನು ಸೋಮವಾರ ಶಾಸಕ ಎಸ್.ವಿ.ರಾಮಚಂದ್ರ ವಿತರಿಸಿದರು.
ಮೃತ ಕುಟುಂಬಗಳ ನಿವಾಸಕ್ಕೆ ಭೇಟಿ ನೀಡಿ ಮೂರು ಲಕ್ಷದ ಚಕ್ ಜೊತೆಗೆ ವೈಯಕ್ತಿಕವಾಗಿ 50 ಸಾವಿರ ರೂ ಹಣ ನೀಡಿ ಸಾಂತ್ವನ ಹೇಳಿದರು.
ಇದೇ ವೇಳೆ ಮಾತನಾಡಿದ ಅವರು, ಮೃತ ಕಾರ್ಮಿಕರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟಂಬದವರಿಗೆ ಗ್ರಾಪಂನಲ್ಲಿ ಖಾಲಿ ಇರುವ ಹುದ್ದೆಗಳನ್ನು ನೀಡಲು ತಾಪಂ ಇಓ ವೈ.ಎಚ್.ಚಂದ್ರಶೇಖರ್ ಅವರಿಗೆ ಸೂಚನೆ ನೀಡಿದ್ದೇನೆ ಎಂದರು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ ಎಂ.ಕೋಟೆ ಮಾತನಾಡಿ, ಕಾರ್ಮಿಕರ ಕುಟುಂಬಗಳಲ್ಲಿ ಈ ರೀತಿ ಅವಘಡಗಳು ಆಗಬಾರದು. ಇದೊಂದು ದೊಡ್ಡ ದುರಂತ.
ಗ್ರಾಪಂಗಳಲ್ಲಿ ಕಾರ್ಮಿಕರನ್ನು ಅತಿಯಾಗಿ ಅವಲಂಬಿಸದೇ ಮಷೀನ್‍ಗಳ ಸಹಾಯ ಬಳಸಿ ಕಾಮಗಾರಿಗಳನ್ನು ಮಾಡಬೇಕು.
ಇನ್ನೊಮ್ಮೆ ಇಂತಹ ಘಟನೆಗಳು ಆಗದಂತೆ ಎಚ್ಚರ ವಹಿಸಬೇಕು ಎಂದು ಗ್ರಾಪಂ ಆಡಳಿತ ವರ್ಗಕ್ಕೆ ಸೂಚನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ, ಹಿಂದುಳಿದ ವರ್ಗದ ಕಾರ್ಮಿಕರಿಗೆ ಈ ರೀತಿ ಅನ್ಯಾಯ ಆಗಬಾರದು.
ಅವರನ್ನೇ ನಂಬಿದ ಅವರ ಕುಟುಂಬ ವರ್ಗದವರಿಗೆ ಸರಕಾರದಿಂದ ಸಲ್ಲಬೇಕಾದ ಪರಿಹಾರವನ್ನು ನ್ಯಾಯಯುತವಾಗಿ ಸಲ್ಲಿಸುವ ಪ್ರಯತ್ನವನ್ನು ತಾಲೂಕು ಆಡಳಿತ ಮಾಡುತ್ತದೆ ಎಂದು ಭರವಸೆ ನೀಡಿದರು.
ತಾಪಂ ಇಓ ವೈ.ಎಚ್.ಚಂದ್ರಶೇಖರ್ ಮಾತನಾಡಿ, ಈಗಾಗಲೇ ಈ ಅವಘಡಕ್ಕೆ ಕಾರಣವಾಗಿರುವ ಪಿಡಿಒ ಶಶಿಧರ್ ಪಾಟೀಲ್ ಅವರನ್ನು ಅಮಾನತ್ತು ಮಾಡಲಾಗಿದೆ.
ಸದ್ಯಕ್ಕೆ ಎರಡು ಕುಟುಂಬಗಳಿಗೆ ತಲಾ 3 ಲಕ್ಷ ರೂ ಹಣ ಪರಿಹಾರ ನೀಡಿದ್ದೇವೆ. ಉಳಿದ ಮೂರು ಲಕ್ಷಗಳ ಹಣದ ಚಕ್ ಅನ್ನು ಶೀಘ್ರವೇ ವಿತರಿಸಲಾಗುವುದು ಎಂದರು.
ಈ ವೇಳೆ ತಹಶೀಲ್ದಾರ್, ಜಿ.ಸಂತೋಷ್‍ಕುಮಾರ್, ಗ್ರಾಪಂ ಅಧ್ಯಕ್ಷ ಭೀಮಣ್ಣ, ಪಿಡಿಓ ತಿಮ್ಮೇಶ್, ಸೊಕ್ಕೆ ನಾಗರಾಜ್, ಬಿಜೆಪಿ ಮುಖಂಡ ಹಿರೇಮಲ್ಲನಹೊಳೆ ಶಶಿಧರ್ ಸೇರಿದಂತೆ ಅನೇಕರು ಇದ್ದರು.