ಸುದ್ದಿವಿಜಯ, ಜಗಳೂರು: ತಾಲೂಕಿನ ಕಸ್ತೂರಿಪುರ ಗ್ರಾಮದ ಬಳಿ ಇರುವ ಕುಳ್ಳೋಬನಹಳ್ಳಿ ಸರ್ವೆ ನಂ-24 ರಲ್ಲಿ ಒಂದೂವರೆ ತಿಂಗಳ ಹಿಂದೆ ವ್ಯಕ್ತಿಯೊಬ್ಬ ಮೃತಪಟ್ಟು ಕಾಡು ಪ್ರಾಣಿಗಳು ತಿಂದು ಹಾಕಿದ್ದ ಮೃತದೇಹವನ್ನು ಪತ್ತೆಹಚ್ಚಿದ ಜಗಳೂರು ಪೊಲೀಸರು ಸೋಮವಾರ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ಕಸ್ತೂರಿಪುರ ಗ್ರಾಮದ ಅನಂತ ಮಳೆ ಇಲ್ಲದ ಕಾರಣ ಎರಡು ತಿಂಗಳಿಂದ ಹೊಲಕ್ಕೆ ಹೋಗಿರಲಿಲ್ಲ. ಭಾನುವಾರ ಸಂಜೆ ಜಮೀನಿಗೆ ಹೋಗಿದ್ದಾಗ ಮೆಕ್ಕೆಜೋಳದ ಹೊಲದಲ್ಲಿ ತಲೆ ಬುರುಡೆ ಇಲ್ಲದ ಕೇವಲ ಮೂಳೆಗಳಿರುವ ಅಸ್ತಿಪಂಜರ ಇರುವುದನ್ನು ನೋಡಿದ್ದಾರೆ. ತಕ್ಷಣ ರೈತ, ಪೊಲೀಸರಿಗೆ ದೂರು ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್‍ರಾವ್ ಮತ್ತು ಪಿಎಸ್‍ಐ ಮಂಜುನಾಥ್ ಸ್ವಾಮಿ ನೇತೃತ್ವದ ತಂಡ ಪರಿಶೀಲಸಿದಾಗ ಅಂದಾಜು 55 ರಿಂದ 60 ವರ್ಷ ವಯಸ್ಸಿನ ವ್ಯಕ್ತಿಯ ದೇಹ ಪತ್ತೆಯಾಗಿದೆ.ಜಗಳೂರು ಪಟ್ಟಣದ ಪೊಲೀಸ್ ಪೇದೆ ರೇವಣಸಿದ್ದಪ್ಪ ಅನಾಥ ಶವ ಅಂತ್ಯಸಂಸ್ಕಾರ ಮಾಡಿದ ಚಿತ್ರ.
ಚಪ್ಪಲಿ, ಧರಿಸಿದ ಬಟ್ಟೆ, ಉಡುದಾರ ಮತ್ತಿತರ ವಸ್ತುಗಳನ್ನು ಪರೀಕ್ಷಿಸಿ ಇದು ವೃದ್ಧನ ದೇಹ ಎಂದು ಖಾತ್ರಿ ಮಾಡಿಕೊಂಡು ರೈತನಿಂದ ದೂರು ಸ್ವೀಕರಿಸಿದ್ದಾರೆ.ಕಾಡುಪ್ರಾಣಿಗಳು ಮೃತ ದೇಹವನ್ನು ಕಿತ್ತು ತಿಂದಿರುವುದರಿಂದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಹೀಗಾಗಿ ದೇಹದ ಭಾಗಗಳನ್ನು ಸಂಗ್ರಹಿಸಿ ಜಗಳೂರು ಪಟ್ಟಣದ ಆಸ್ಪತ್ರೆಯಲ್ಲಿ ಶವಪರೀಕ್ಷೆ ಮಾಡಿಸಿ ಎಫ್‍ಎಸ್‍ಎಲ್ ವರದಿಗೆ ಮೃತ ದೇಹದ ಕೆಲವು ಭಾಗಗಳನ್ನು ಕಳುಹಿಸಿಕೊಟ್ಟಿದ್ದಾರೆ. ಶವಪರೀಕ್ಷೆ ಮುಗಿದ ನಂತರ ಪೊಲೀಸ್ ಸಿಬ್ಬಂದಿಗಳು ಸೇರಿ ಅನಾಥ ಶವವನ್ನು ಪಟ್ಟಣದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.