ಸುದ್ದಿವಿಜಯ, ಜಗಳೂರು: ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಬುಧವಾರ ಸಂಜೆ ಪತ್ನಿ ತ್ರಿವೇಣಿ (26) ಮೇಲೆ ಹಲ್ಲೆ ಮಾಡಿ ವೇಲ್‍ನಿಂದ ನೇಣು ಬಿಗಿದು ಪತಿ ಯನ್ನಪ್ಪ(23) ಹತ್ಯೆ ಮಾಡಿದ್ದಾನೆ ಎಂದು ಮೃತ ತ್ರಿವೇಣಿ ತಾಯಿ ಶಾಂತಮ್ಮ ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.
ಪ್ರತಿ ನಿತ್ಯ ನನ್ನ ಮಗಳಿಗೆ ಮಾನಸೀಕ ಕಿರುಕುಳ ನೀಡಿ ಹಣ ತರುವಂತೆ ಪೀಡಿಸುತ್ತಿದ್ದ ಎಂದು ಯನ್ನಪ್ಪ ಅವರ ತಂದೆ, ತಾಯಿ, ಇಬ್ಬರು ತಮ್ಮಂದಿರು ಹಾಗೂ ಒಬ್ಬ ತಂಗಿಯ ಮೇಲೆ ದೂರು ದಾಖಲಾಗಿದೆ.
ಕಳೆದ 5 ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಮೀಪದ ಜೋಗಿಹಟ್ಟಿ ಗ್ರಾಮದ ತ್ರಿವೇಣಿ ಅವರನ್ನು, ತಾಲೂಕಿನ ಮಲ್ಲಾಪುರದ ಯನ್ನಪ್ಪ ಅವರಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು.
ಇವರಿಗೆ 5 ವರ್ಷದ ಮಗು ಇದ್ದು, ಪತಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ.
ವರದಕ್ಷಿಣೆ ಹಣ ತರುವಂತೆ ನಿತ್ಯ ಪೀಡಿಸುತ್ತಿದ್ದ ಯನ್ನಪ್ಪ, ನನ್ನ ಮಗಳ ನಡೆಯನ್ನು ಅನುಮಾಸಿಸುತ್ತಿದ್ದ. ಹೊರಗೆ ಎಲ್ಲೇ ಹೋದರೂ, ಯಾರನ್ನೇ ಮಾತನಾಡಿಸಿದರೂ ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದ.
ಅಲ್ಲದೇ ಇತ್ತೀಚೆಗೆ 1 ಲಕ್ಷ ರೂ ತೆಗೆದು ಕೊಂಡು ಬಾ ಎಂದು ತವರು ಮನೆಗೆ ಕಳುಹಿಸಿದ್ದ. ಸಾಲ ಸೂಲ ಮಾಡಿ ಹಣ ಕಳುಹಿಸಿದ್ದೆವು.
ಯುಗಾದಿ ದಿನ ಇಸ್ಪೀಟ್ ಜೂಜಾಡಲು ಪತ್ನಿಗೆ ಹಣ ಕೊಡುವಂತೆ ಪೀಡಿಸುತ್ತಿದ್ದ. ಇಲ್ಲ ಎಂದು ನಿರಾಕರಿಸಿದ್ದಕ್ಕೆ ಕುಟುಂದ ಎಲ್ಲರೂ ಸೇರಿ ದೈಹಿಕವಾಗಿ ಹಲ್ಲೆ ಮಾಡಿ ವೇಲ್‍ನಿಂದ ನೇಣು ಹಾಕಿ ಹತ್ಯೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಜಗಳೂರು ಸಿಪಿಐ ಎಂ.ಶ್ರೀನಿವಾಸ್ ರಾವ್, ಪಿಎಸ್‍ಐ ಡಿ.ಸಾಗರ್ ಅವರು ಆರೋಪಿ ಯನ್ನಪ್ಪ ಮತ್ತು ಅವರ ತಂದೆ,ತಾಯಿಯನ್ನು ಬಂಧಿಸಿ, ತನಿಖೆ ಆರಂಭಿಸಿದ್ದಾರೆ. ಮೃತ ತ್ರಿವೇಣಿ ಅವರ ಸಂಬಂಧಿಕರ ರೋದನ ಪೊಲೀಸ್ ಠಾಣೆಯ ಮುಂದೆ ಮುಗಿಲು ಮುಟ್ಟಿತ್ತು.