suddivijayanews05/07/2024
ಸುದ್ದಿವಿಜಯ, ಜಗಳೂರು: ಡೆಂಘಿ ಜ್ವರವನ್ನು ತಡೆಯುವ ಉದ್ದೇಶದಿಂದ ಭಾರತ ಸರಕಾರವು ವಿವಿಧ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಜನರಲ್ಲಿ ಕೂಡ ಇದರ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದು ತಹಸೀಲ್ದಾರ್ ಕಲೀಂವುಲ್ಲಾ ಖಾನ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ತಾಲೂಕು ಆರೋಗ್ಯ ಇಲಾಖೆ, ಪಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡೇಂಘಿ ಜ್ವರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತೀ ವರ್ಷ ಡೆಂಘಿ ಜ್ವರ ನಿವಾರಣೆ ಮಾಡಲು ಹಲವಾರು ರೀತಿಯ ತಯಾರಿ ನಡೆಸಲಾಗುತ್ತದೆ. ಜ್ವರದಿಂದ ಮೊದಲು ಮಕ್ಕಳನ್ನು ರಕ್ಷಿಸುವುದು ಅತೀ ಅಗತ್ಯವಾಗಿದೆ. ಇದರಿಂದ ನೀವು ಪ್ರತಿ ಹಂತದಲ್ಲೂ ಮಕ್ಕಳ ಬಗ್ಗೆ ಗಮನಹರಿಸಬೇಕು. ಅವರಿಗೆ ಉತ್ತಮ ಆರೋಗ್ಯ ನೀಡಬೇಕು.
ಮಕ್ಕಳಿಗೆ ಡೆಂಘಿ ಬರದಂತೆ ತಡೆಯಲು ಕೆಲವೊಂದು ವಿಧಾನಗಳು ಅನುಸರಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ವಿಶ್ವನಾಥ್ ಮಾತನಾಡಿ, ಡೆಂಘಿ ಒಂದು ವೈರಸ್ ಮೂಲಕ ತಗಲುವ ಜ್ವರವಾಗಿದ್ದು ಒಬ್ಬರಿಂದ ಒಬ್ಬರಿಗೆ ಹರಡುವ ಜ್ವರವಾಗಿದೆ. ಏಡಿಸ್ ಈಜಿಪ್ತಿ ಎಂಬ ಸೊಳ್ಳೆಯೇ ಈ ಮಾಧ್ಯಮವಾಗಿದ್ದು ಈ ಭಯಾನಕ ವೈರಸ್ ತಡೆಯಲು ಸ್ವಚ್ಛತೆ ಬಹಳ ಮುಖ್ಯವಾಗಿದೆ.
ಜ್ವರದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯು ಹೆಚ್ಚುತ್ತಲೇ ಇದೆ. ಮಕ್ಕಳಲ್ಲಿ ರೋಗ ಪ್ರತಿರೋಧಕ ಶಕ್ತಿಯು ಬೆಳೆಯುತ್ತಿರುವ ಕಾರಣದಿಂದಾಗಿ ಅವರಲ್ಲಿ ಈ ರೋಗದ ವಿರುದ್ಧ ಹೋರಾಡಲು ಸಾಧ್ಯವಾಗದೆ ರೋಗವು ತೀವ್ರ ಸ್ವರೂಪಕ್ಕೆ ತಲುಪುತ್ತದೆ. ಹಾಗಾಗಿ ಪರಿಸ್ಥಿತಿಗೆ ಸರಿಯಾಗಿ ತಯಾರಾಗಿ ಇರಬೇಕು ಎಂದರು.
ಮನೆಯನ್ನು ಸ್ವಚ್ಛವಾಗಿ ಇಡಬೇಕು. ನೀರನ್ನು ಶೇಖರಣೆ ಆಗಲು ಬಿಡಬಾರದು. ನೀರನ್ನು ಮುಚ್ಚದೆ ಇದ್ದರೆ ಆಗ ಅದರಲ್ಲಿ ಸೊಳ್ಳೆಗಳು ವಂಶಾಭಿವೃದ್ಧಿ ಮಾಡುವುದು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಮನೆ ಒಳಗಡೆ ಕೂಡ ಸೊಳ್ಳೆಗಳು ನೆಲೆ ನಿಲ್ಲದಂತೆ ಮಾಡಿದರೆ ಹತೋಟಿಗೆ ತರಬಹುದು ಎಂದರು.
ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಡೆಂಘಿ ಜ್ವರದ ಬಗ್ಗೆ ಜಾಗೃತಿ ಮೂಡಿಸುವ ನಾಮ ಫಲಕಗಳನ್ನು ಹಿಡಿದಿ ಪಟ್ಟಣದ ಬೀದಿ ಬೀದಿಗಳಲ್ಲಿ ಸಂಚರಿಸಿ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಷಣ್ಮುಖಪ್ಪ, ಡಾ. ಉಮೇಶ್, ಪ.ಪಂ ಆರೋಗ್ಯ ನಿರೀಕ್ಷಕ ಪ್ರಶಾಂತ್, ಆರೋಗ್ಯ ನಿರೀಕ್ಷಣಾಧಿಕಾರಿ ಉಮೇಶ್ ಸೇರಿದಂತೆ ಮತ್ತಿತರರಿದ್ದರು.