ಸುದ್ದಿವಿಜಯ, ಜಗಳೂರು: ಕರ್ತವ್ಯ ಲೋಪ ಮತ್ತು ಎಸ್ಡಿಎಂಸಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಬೇಕಾ ಬಿಟ್ಟಿಯಾಗಿ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಹಿನ್ನೆಲೆ ತಾಲೂಕಿನ ದೇವಿಕೆರೆ ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅರ್ಜುಮನ್ ಬಾನು ವಿರುದ್ಧ ಗ್ರಾಮಸ್ಥರು, ವಿದ್ಯಾರ್ಥಿಗಳು, ಪೋಷಕರು, ಗ್ರಾಪಂ ಅಧ್ಯಕ್ಷರು, ಸದಸ್ಯರು ಗುರುವಾರ ಸಿಡಿದೆದ್ದು ಶಾಲೆಗೆ ಬೀಗ ಜಡಿದು ಮಲ್ಪೆ, ಮೊಳಕಾಲ್ಮೂರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಮುಖ್ಯ ಶಿಕ್ಷಕಿ ಅರ್ಜುಮನ್ ಬಾನು ಅವರು 2018ರಲ್ಲಿ ದೇವಿಕೆರೆ ಗ್ರಾಮದ ಸರಕಾರಿ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ವರ್ಗಾವಣೆಯಾಗಿದ್ದರು. ಅಂದಿನಿಂದಲೂ ಶಾಲಾ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಪ್ರತಿ ವಿದ್ಯಾರ್ಥಿಯಿಂದ 550 ರೂ ಶುಲ್ಕ ವಸೂಲಿ ಮಾಡಿ ರಸೀದಿ ಕೊಡದೇ ವಂಚನೆ ಮಾಡಿದ್ದಾರೆ.
ಅದನ್ನು ಸರಕಾರಕ್ಕೆ ಪಾವತಿ ಮಾಡಿಲ್ಲ. ವಾರಕ್ಕೆ ಮೂರು ದಿನ ಶಾಲೆಗೆ ಬರುತ್ತಾರೆ. ಬಂದ ದಿನವಾದರೂ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸದೇ ಮಧ್ಯಾಹ್ನ 12.30ಕ್ಕೆ ಹೊರಟು ಹೋಗುತ್ತಾರೆ.ಜಗಳೂರು ತಾಲೂಕಿನ ದೇವಿಕೆರೆ ಗ್ರಾಮದ ಮುಖ್ಯ ಶಿಕ್ಷಕಿ ಭ್ರಷ್ಟಾಚಾರ ಖಂಡಿಸಿ ವಿದ್ಯಾರ್ಥಿಗಳು, ಪೋಷಕರು, ಗ್ರಾಪಂ ಸದಸ್ಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಹಾಜರಾತಿ ಪುಸ್ತಕದಲ್ಲಿ ಶಾಲೆಗೆ ಒಒಡಿ ಎಂದು ಹಾಕಿ ಅಮೇಲೆ ಅವುಗಳ ಮೇಲೆ ಸಹಿ ಮಾಡಿರುತ್ತಾರೆ. ಇದರ ಬಗ್ಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ. ಶಾಲೆಗೆ ಬಾರದ ದಿನವನ್ನು ಮರುದಿನ ತಮ್ಮ ಹಾಜರಾತಿಯಲ್ಲಿ ಸಹಿ ಮಾಡುತ್ತಾರೆ.
ಸಿಎಂಎಲ್ ಮತ್ತು ಎಚ್ಪಿಎಲ್ ಎಂದು ರಜೆ ಹಾಕಿದ್ದಾರೆ. ಮೇಲಾಧಿಕಾರಿಗಳಿಗೆ ಇದರ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಗೈರು ಹಾಜರಿಯಾದ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವ ಯಾವುದೇ ಕೆಲಸವನ್ನು ಮುಖ್ಯ ಶಿಕ್ಷಕಿ ಮಾಡಿರುವುದಿಲ್ಲ.
ಸಹ ಶಿಕ್ಷರನ್ನು ಕಳುಹಿಸಿ ಶಾಲೆ ಹಾಜರಾಗದ ಮಕ್ಕಳನ್ನು ಕರೆತರುವ ಕೆಲಸವನ್ನು ಅವರು ಮಾಡುತ್ತಿಲ್ಲ. ಹೀಗೆ ಮಾಡಿದರೆ ಮಧ್ಯಾಹ್ನದ ಬಿಸಿಯೂಟದಲ್ಲಿ ಹಣ ಉಳಿಯುತ್ತದೆ ಎನ್ನುವ ಮನೋಭಾವ ಮುಖ್ಯ ಶಿಕ್ಷಕಿಯದ್ದಾಗಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಎಂ.ಎಲ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.ಅಷ್ಟೇ ಅಲ್ಲ ವಿದ್ಯಾರ್ಥಿಗಳಿಗೆ ಸರಕಾರದಿಂದ ವಿತರಿಸಲಾಗಿರುವ ಶೂ ಸಾಕ್ಸ್ ಅನುದಾನದಲ್ಲಿ ಭ್ರಷ್ಟಾಚಾರವಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ಎಸ್ಡಿಎಂಸಿ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಶಾಲೆಯಲ್ಲಿ ಕುಡಿಯುವ ನೀರು ಮತ್ತು ಶೌಚಾಲಯವಿಲ್ಲ. ಅದಕ್ಕೆಂದೇ ಬಂದಿರುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಮಕ್ಕಳಿಗೆ ಕಳೆದ 5 ತಿಂಗಳಿಂದ ಹಾಲು, ಮೊಟ್ಟೆ ವಿತರಣೆ ಮಾಡಿಲ್ಲ ಅದರ ಬಗ್ಗೆ ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ಗ್ರಾಪಂ ಸದಸ್ಯ ಬಸವಾಪುರ ರವಿಚಂದ್ರ ಆಕೋಶ ವ್ಯಕ್ತಪಡಿಸಿದರು.
ಎಸ್ಡಿಎಂಸಿ ಅನುದಾನ, ಆರ್ಎಂಎಸ್ಎ ಅನುದಾನ ಸೇರಿ ಒಟ್ಟಾರೆ ಸರಕಾರದಿಂದ ಬರುವ ಯಾವ ಅನುದಾನವನ್ನು ಶಾಲಾ ಅಭಿವೃದ್ಧಿಗೆ ಬಳಕೆಯಾಗಿಲ್ಲ. ಆದರೆ ಹಣ ಮಾತ್ರ ಡ್ರಾ ಮಾಡಲಾಗಿದೆ.ಅಷ್ಟೇ ಅಲ್ಲ ಪೊಲೀಸ್ ಕಡೆಟ್ ಅನುದಾನ 50 ಸಾವಿರ ರೂಗಳನ್ನು ಮಕ್ಕಳಿಗೆ ಬಳಸದೇ ಮುಖ್ಯ ಶಿಕ್ಷಕಿ ಅರ್ಜುಮನ್ ಬಾನು ಮತ್ತು ಕ್ಲರ್ಕ್ ಶಮೀಮ್ ಉನ್ನಿಸಾ ಸುಳ್ಳು ರಸೀದಿಗಳನ್ನು ಸೃಷ್ಟಿಸಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ರಣದಮ್ಮ ಚಂದ್ರಪ್ಪ ಆರೋಪಿಸಿದರು.
ಅವರ ಮೇಲಿರುವ ಆರೋಪಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಶಾಸಕ ಬಿ.ದೇವೇಂದ್ರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಕಳೆದ ಮೂರು ಎರಡು ತಿಂಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಗಮನಕ್ಕೆ ತಂದಿದ್ದಾರೆ.
ಆದರೂ ಮುಖ್ಯ ಶಿಕ್ಷಕಿ ದುಂಡಾವರ್ತನೆ ಮತ್ತು ಭ್ರಷ್ಟಾಚಾರದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಸ್ಡಿಎಂಸಿ ಸದಸ್ಯರು, ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಿಂದ ಗಂಟೆಗೂ ಹೆಚ್ಚು ಸಮಯ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಬಿಳಿಚೋಡು ಮತ್ತು ಜಗಳೂರು ಪಟ್ಟಣದ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯರಾದ ಗುರುಸ್ವಾಮಿ, ನಾಗರಾಜ್, ಶೃಂಗೇಶ್, ಊರಿನ ಮುಖಂಡರು, ಪೋಷಕರು ಮುಖ್ಯ ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೇಲಾಧಿಕಾರಿಗಳಿಗೆ ವರದಿ
ಮುಖ್ಯ ಶಿಕ್ಷಕಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಡಿಡಿಪಿಐ ಮತ್ತು ಶಿಕ್ಷಣ ಇಲಾಖೆ ಆಯುಕ್ತರಿಗೆ ವರದಿ ಕಳುಹಿಸಲಾಗಿದೆ. ವರದಿಗೆ ಅಧಿಕಾರಿಗಳಿಂದ ಏನು ಪ್ರತಿಕ್ರಿಯೆ ಬರುತ್ತದೋ ನೋಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಇಒ ಈ. ಹಾಲಮೂರ್ತಿ ಪ್ರತಿಕ್ರಿಯೆ ನೀಡಿದರು.