ಮದ್ಯವೆಸನ ಬಿಟ್ಟರೆ ನಿಮ್ಮ ಬದುಕು ಉಜ್ವಲ: ಮಾಜಿ ಶಾಸಕ ಟಿ.ಗುರುಸಿದ್ದನಗೌಡ್ರು ಸಲಹೆ!

Suddivijaya
Suddivijaya July 27, 2023
Updated 2023/07/27 at 12:28 PM

ಸುದ್ದಿವಿಜಯ,ಜಗಳೂರು: ಯುವಕರೇ ಮದ್ಯ ವೆಸನಕ್ಕೆ ಬಲಿಯಾದರೆ ಈ ದೇಶ ಕಟ್ಟುವವರು ಯಾರು. ನೀವು ವೆಸನದಿಂದ ಮುಕ್ತರಾದಷ್ಟೇ ನಿಮ್ಮ ಬದುಕು ಉಜ್ವಲವಾಗಲಿದೆ ಎಂದು ಮಾಜಿ ಶಾಸಕ ಟಿ.ಗುರುಸಿದ್ದನಗೌಡ್ರು ಹೇಳಿದರು.

ಜಗಳೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಎಂಟು ದಿನಗಳ ಕಾಲ ನಡೆದ 1691ನೇ ಮದ್ಯ ವರ್ಜನ ಶಿಬಿರ ಸಮಾರೋಪ ಸಮಾರಂಭದಲ್ಲಿ ಗುರುವಾರ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ಯುವ ಸಮುದಾಯ ಬಲಿಷ್ಠವಾಗಬೇಕು. ಶೇ.100ರಲ್ಲಿ ಶೇ.60 ರಷ್ಟು ಮದ್ಯ ವೆಸನಿಗಳಾದರೆ ನಾಡನ್ನು ಕಟ್ಟುವವರು ಯಾರು. ನಮ್ಮ ದೇಶಕ್ಕೆ ಪ್ರಜಾತಂತ್ರವ್ಯವಸ್ಥೆ ಜಾರಿಗೆ ತರಲು ನೂರಾರು ವರ್ಷಗಳೇ ಬೇಕಾಯಿತು.

ಆದರೆ ಸ್ವಾತಂತ್ರ್ಯ ಸಿಕ್ಕ ಮೇಲೆ ದೇಶದ ಯುವ ಸಮುದಾಯ ಬಲಿಷ್ಠವಾಗಬೇಕು ಎಂಬುದು ಎಲ್ಲರ ಆಶಯ. ಆದರೆ ವೆಸನಗಳ ದಾಸರಾದರೆ ಮುಂದಿನ ಪೀಳಿಗೆಗೆ ಸಂದೇಶ ನೀಡುವವರಾರು ಎಂದು ಪ್ರಶ್ನಿಸಿದರು.

ಯಾರೋ ಹೇಳುತ್ತಾರೆ. ಬೇರೆಯವರ ಬೋಧನೆಯಿಂದ ನಿಮ್ಮ ಬದುಕು ಬದಲಾವಣೆಯಾಗುತ್ತದೆ. ಮದ್ಯ ಬಿಡುತ್ತೇನೆ ಎಂದರೆ ಅದು ಅಸಾಧ್ಯ. ನಿಮ್ಮ ಜೀವನ ಉಜ್ವಲವಾಗಲು ಸಾರಾಯಿ ಎಂಬ ದರಿದ್ರ ಬಿಡಿ ಎಂದು ತಿಳಿ ಹೇಳಿದರು.

ಹೆಬ್ಬಾಳ ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಮಾತನಾಡಿ, ಅಜ್ಞಾನ ಕಡೆಯಿಂದ ಸುಜ್ಞಾನ ಕಡೆಗೆ ಸಾಗಿದರೆ ಜೀವನ ಸಾರ್ಥಕವಾದೀತು. ಮದ್ಯವೆಸನ ಬಿಟ್ಟು ಸಮಾಜ ಮುಖಿಯಾಗಿ ಕೆಲಸ ಮಾಡಬೇಕು. ಕಟುಕನ ಮನೆಯ ಪಂಜರದ ಗಿಣಿಯಾಗದೇ ಆಶ್ರಮದ ಗಿಣಿಯಾಗಬೇಕು.

ಆಮಿಷ್ಯಕ್ಕೆ ಬಲಿಯಾಗಬಾರದು. 12ನೇ ಶತಮಾನದ ಅನುಭವ ಮಂಟಪದಲ್ಲಿ ಕಾಯಕಕ್ಕೆ ಒತ್ತು ನೀಡಲಾಗುತ್ತಿತ್ತು. ಕಾಯಕದಿಂದ ಮಾತ್ರ ನಿಮ್ಮ ಕೆಟ್ಟ ಚಟಗಳಿಂದ ಮುಕ್ತಿ ಸಿಗಲು ಸಾಧ್ಯವಾಗುತ್ತದೆ ಎಂದರು.

ನೀವು ಕುಡಿತ ಬಿಟ್ಟರೆ ವರ್ಷಕ್ಕೆ ಲಕ್ಷಾಂತರ ಹಣ ಉಳಿಸಬಹುದು. ಸರಕಾರ ಕೊಡುಗ ಗ್ಯಾರಂಟಿ ಹಿಂದೆ ನೀವು ಬೀಳುವುದು ತಪ್ಪುತ್ತದೆ. ಜ್ಞಾನಿಗಳ ಸಂಘ ಮಾಡಿ ಜೀವನ ಪರ್ಯಂತ ಚಟ ಬಿಟ್ಟು ಸುಖ ಸಂಸಾರ ಮಾಡಿ ಸ್ವರ್ಗ ಕಾಣಿರಿ ಎಂದು ತಿಳಿ ನೀತಿ ಹೇಳಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಷಡಾಕ್ಷರಪ್ಪ, ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಇಒ ಸುರೇಶ್‍ರೆಡ್ಡಿ, ಟಿಎಚ್‍ಒ ಬಿ.ಓ.ನಾಗರಾಜ್, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ.ಎಸ್.ಚಿದಾನಂದ, ಫಾದರ್ ವಿಲಿಯಂ ಮಿರಾಂದ, ಬಿ.ಲೋಕೇಶ್, ರೇವಣ್ಣ, ಓ.ಮಂಜಣ್ಣ, ಹೊನ್ನೂರ್‍ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!