ಸುದ್ದಿ ವಿಜಯ, ಜಗಳೂರು:ತಾಲೂಕುಕಿನ ದಿದ್ದಿಗೆ ಗ್ರಾಪಂ ಪಿಡಿಒ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸಕಾಲಕ್ಕೆ ಸರಿಯಾಗಿ ಕಚೇರಿಗೆ ಬರುವುದಿಲ್ಲ.
ನೈರ್ಮಲ್ಯ, ರೋಗ ರುಜನೆಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಜನರು ಗ್ರಾಪಂ ಕಚೇರಿ ಒಳಗೆ ಚರಂಡಿಯ ತ್ಯಾಜ್ಯ ಸುರಿದು ಬುಧವಾರ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಪಂಚಾಯಿತಿಗೆ ಆಗಮಿಸಿದ ಸಾರ್ವಜನಿಕರು ಕಚೇರಿಯಲ್ಲಿ ಪಿಡಿಒ ಇಲ್ಲದೇ ಇರುವುದನ್ನು ಕಂಡು ರೊಚ್ಚಿಗೆದ್ದ ಅವರು ಚರಂಡಿಗಳಲ್ಲಿ ತುಂಬಿದ್ದ ತ್ಯಾಜ್ಯವನ್ನು ಪುಟ್ಟಿಯಲ್ಲಿ ತುಂಬಿಕೊಂಡು ಕಚೇರಿಯಲ್ಲಿ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಅಭಿವೃದ್ದಿ ಅಧಿಕಾರಿ ಬಸವರಾಜಪ್ಪ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆದರೆ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೇ ಇರುವುದರಿಂದ ಸರಕಾರಿ ಕೆಲಸಗಳಿಗಾಗಿ ಅಲೆದಾಡುವಂತಾಗಿದೆ.
ಅಧಿಕಾರಿಗಳು ಕೈ ತುಂಬ ವೇತನ ಪಡೆಯುತ್ತಿದ್ದರು ಕೆಲಸ ಮಾಡದೇ ಕಳ್ಳಾಟವಾಡುತ್ತ ಸಮಯ ಕಳೆಯುತ್ತಿದ್ದಾರೆ ಇಂತವರಿಂದ ಸಮಾಜಕ್ಕೆ ಕಳಂಕವಾಗಿದೆ ಎಂದು ಸಾರ್ವಜನಿಕರು ದೂರಿದರು.
ಗ್ರಾಮ ಪಂಚಾಯಿತಿಯಲ್ಲಿ ಕಂದಾಯ, ಇ-ಸ್ವತ್ತು, ಪ್ರಮಾಣ ಪತ್ರ ಸೇರಿದಂತೆ ವಿವಿಧ ಕೆಲಸಗಳಿಗೆ ಕಚೇರಿಗೆ ಓಡಾಡಲಾಗುತ್ತಿದೆ.
ಒಮ್ಮೆಯೂ ಅಧಿಕಾರಿ ಸಿಗುತ್ತಿಲ್ಲ. ಕರೆ ಮಾಡಿದರೆ ಸ್ವೀಕರಿಸುವುದಿಲ್ಲ.
ಹಾಗಾಗಿ ಸಂಬಂಧಿಸಿದ ಮೇಲಾಧಿಕಾರಿಗಳ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು.
ನಮ್ಮ ಗ್ರಾಮ ಪಂಚಾಯಿತಿಯಿಂದ ಅವರನ್ನು ವರ್ಗಾವಣೆ ಮಾಡಬೇಕು, ಮುಂದುವರಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮದ ಮುಖಂಡರು ಎಚ್ಚರಿಕೆ ನೀಡಿದರು.
ಕಳೆದ ಎರಡ್ಮೂರು ತಿಂಗಳಿಂದಲೂ ಗ್ರಾಮದ ಎಲ್ಲ ಚರಂಡಿಗಳಲ್ಲಿ ತುಂಬಿರುವ ಹೂಳು ತೆಗೆಯುವಂತೆ ಅನೇಕ ಬಾರಿ ಮನವಿ ಮಾಡಿಕೊಳ್ಳಲಾಗಿತ್ತು.
ಗ್ರಾಮ ಸಭೆ, ವಾರ್ಡ್ ಸಭೆಗಳಲ್ಲೂ ಗಮನಕ್ಕೆ ತರಲಾಗಿತ್ತು. ಆದರೆ ಯಾವುದಕ್ಕೂ ಕಿವಿಗೊಡದ ಪಿಡಿಒ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ.
ಹಾಗಾಗಿ ಬೇಸತ್ತು ಪಂಚಾಯಿತಿ ಪಿಡಿಒ ಆಸನ, ಟೇಬಲ್ ಮೇಲೆ ಕಸ ಸುರಿಯಲಾಗಿದೆ. ಪ್ರತಿ ಚರಂಡಿಗಳಲ್ಲೂ ತ್ಯಾಜ್ಯ ತುಂಬಿ ಚರಂಡಿಗಳಲ್ಲಿ ಗಬ್ಬು ನಾರುತ್ತಿದೆ.
ಇದರ ನಡುವೆಯೂ ಗ್ರಾಮದಲ್ಲಿ ಹಬ್ಬ ಮಾಡಲಾಗುತ್ತಿದೆ ಎಂದು ಬೇಸರಗೊಂಡರು.
ಪ್ರತಿ ಕೆಲಸಕ್ಕೆ ಪಟ್ಟಣ ಬರಲು ಸಾಧ್ಯವಾಗುವುದಿಲ್ಲ.
ಕೇವಲ ಚರಂಡಿ ಸ್ವಚ್ಛತೆಗೊಳಿಸಲು ಮೂರು ತಿಂಗಳಾದರು ಕ್ರಮಕೈಗೊಳ್ಳದೇ ನಿರ್ಲಕ್ಷ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಉಮಾ ಮಹಾದೇವ್ ಅವರು ಗಮನಹರಿಸಬೇಕು.
ಪಂಚಾಯಿತಿಗಳ ಚಿತ್ರಣವನ್ನು ಬದಲಾಯಿಸಬೇಕು. ನಿರ್ಲಕ್ಷಿಸುವ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆಗ್ರಗಿಸಿದರು.
ಈ ಸಂದರ್ಭದಲ್ಲಿ ಸುರೇಶ್, ಮಹಾದೇವಪ್ಪ, ಪ್ರವೀಣ್, ನಾಗರಾಜಪ್ಪ, ಶಾಂತಪ್ಪ, ಅಮರೇಶ್ ಸೇರಿದಂತೆ ಮತ್ತಿತರರಿದ್ದರು.