suddivijaya/web news- 18/10/2023
ಸುದ್ದಿವಿಜಯ, ಜಗಳೂರು: ‘ವೈದ್ಯೋ ನಾರಾಯಣ ಹರಿ’ ಎಂದು ರೋಗಿಳು ವೈದ್ಯರನ್ನು ದೇವರಂತೆ ಕಾಣುತ್ತಾರೆ. ಅತ್ಯಂತ ಹಿಂದುಳಿದ ನಮ್ಮ ತಾಲೂಕಿನ ಜನರಿಗೆ ಗುಣಮಟ್ಟದ ಚಿಕಿತ್ಸೆ ಕೊಡಿ. ನಿಮಗೆ ಸಾಧ್ಯವಾಗದೇ ಇದ್ದರೆ ಜಾಗ ಖಾಲಿ ಮಾಡಿ ಎಂದು ವೈದ್ಯರಿಗೆ ಮತ್ತು ಸಿಬ್ಬಂದಿಗಳಿಗೆ ಶಾಸಕ ಬಿ.ದೇವೇಂದ್ರಪ್ಪ ಎಚ್ಚರಿಕೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ವೈದ್ಯ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕೋವಿಡ್ ನಮಗೆ ಪಾಠ ಕಲಿಸಿದೆ. ನೀವು ಬೆರಳು ತೋರಿಸಿಕೊಳ್ಳದಂತೆ ಕೆಲಸ ಮಾಡಬೇಕು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಲು ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದರು.
ಆಸ್ಪತ್ರೆಗೆ ಅಗತ್ಯವಿರುವ ವೈದ್ಯರ ಕೊರತೆ ನೀಗಿಸಲು ನಾನು ಬದ್ಧನಿದ್ದೇನೆ. ವೈದ್ಯರ ಕೊರತೆ ಇರುವುದನ್ನು ನನ್ನ ಗಮನಕ್ಕೆ ಬಂದಿದೆ. ಸಕಾಲಕ್ಕೆ ರೋಗಿಗಳಿಗೆ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದರೆ ಅದೇ ಸಾರ್ಥಕ ಕೆಲಸ. ನಿಮ್ಮ ನಿರ್ಲಕ್ಷ್ಯದಿಂದ ರೋಗಿಗಳು ಮೃತಪಟ್ಟರೆ ಅದನ್ನು ಜನ ಸಹಿಸುವುದಿಲ್ಲ.
ನೀವು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರವೇ ಸೇವಾ ಕ್ಷೇತ್ರವಾಗಿದ್ದು ನಿಮ್ಮ ಅಶಿಸ್ತು, ಅಜಾಗರೂಕತೆಯನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.
ನನ್ನ ಸ್ವಗ್ರಾಮ ಚಿಕ್ಕಮ್ಮನಹಟ್ಟಿಯ ಸ್ನೇಹಿತ ಕರಿಯಪ್ಪ ಮೊನ್ನೆ ಅನಾರೋಗ್ಯ ಸಮಸ್ಯೆ ಎಂದು ಬಂದಾಗ ವೈದ್ಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮೃತಪಟ್ಟ ಸುದ್ದಿ ಕೇಳಿ ಬೇಸರವಾಯಿತು.
ಆ ಘಟನೆ ಖಂಡಿಸಿ ಆಸ್ಪತ್ರೆ ಮುಂದೆ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಅಂತಹ ಘಟನೆಗಳು ಮರುಕಳಿಸಬಾರದು. ವೈದ್ಯಾಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಿ ಮತ್ತು ಸಿಬ್ಬಂದಿಯಿಂದ ಕೆಲಸ ಮಾಡಿಸಿ. ಕೆಟ್ಟ ಹೆಸರು ತರುವಂತಹ ಕೆಲಸ ಮಾಡಬೇಡಿ ಎಂದು ಸೂಚ್ಯವಾಗಿ ನುಡಿದರು.
ದಾದಿಯರು ರೋಗಿಗಳನ್ನು ಮಮತೆಯಿಂದ ಆರೈಕೆ ಮಾಡಬೇಕು. ‘ವೈದ್ಯರ ನಗುಮುಖ, ರೋಗಿ ಗುಣಮುಖ’ ಎಂಬ ಮಾತಿದೆ. ಡ್ಯೂಟಿ ಡಾಕ್ಟರ್‍ಗಳನ್ನು ಶಸ್ತ್ರಚಿಕಿತ್ಸೆಗೆ ಕಳುಹಿಸಬೇಡಿ. ನಿಮ್ಮ ಮನಸ್ಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಬೇಡಿ. ಏನೇ ಸಮಸ್ಯೆಗಳಿದ್ದರೂ ನನಗೆ ಕರೆ ಮಾಡಿ ಸಮಸ್ಯೆ ಬಗ್ಗೆ ಚರ್ಚಿಸಿ. ಬಗೆಹರಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು ಅಭಯ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ನಟರಾಜ್, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಷಣ್ಮುಖ, ಟಿಎಚ್‍ಒ ವಿಶ್ವನಾಥ್, ಡಾ.ಸಂಜಯ್, ಡಾ.ಜಗನ್ನಾಥ್ ಸೇರಿದಂತೆ ಎಲ್ಲ ವೈದ್ಯ ಸಿಬ್ಬಂದಿ ಉಪಸ್ಥಿತರಿದ್ದರು.
ಆಸ್ಪತ್ರೆ ಸಮಸ್ಯೆಗಳು:
ಆಸ್ಪತ್ರೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಮಳೆ ಬಂದರೆ ಸೋರುತ್ತದೆ. ಆಸ್ಪತ್ರೆಯಲ್ಲಿ ಫಿಜಿಷಿಯನ್ ಕೊರತೆ ಇದೆ. ರಾತ್ರಿ ಭದ್ರತಾ ಸಿಬ್ಬಂದಿ ಇಲ್ಲದೇ ಸಾರ್ವಜನಿಕರು ಬೇಕಾಬಿಟ್ಟು ಕುಡಿದು ಬಂದು ಆಸ್ಪತ್ರೆ ಮಲೀನ ಮಾಡುತ್ತಿದ್ದಾರೆ. ಆಸ್ಪತ್ರೆ ಶೌಚಾಲಯಗಳನ್ನು ಬಳಸಿ ಗಲೀಜು ಮಾಡುತ್ತಿದ್ದಾರೆ. ನುರಿತ ವೈದ್ಯರ ಕೊರತೆ ಇದೆ. ಸ್ಕ್ಯಾನಿಂಗ್ ಮಷೀನ್ ಇದ್ದರೂ ರೇಡಿಯೋಲಾಜಿಸ್ಟ್ ವೈದ್ಯರಿಲ್ಲದೇ 10 ಲಕ್ಷ ರೂ ಮೊತ್ತದ ಮಷೀನ್ ನಿರುಪಯುಕ್ತವಾಗಿದೆ. ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ಗಳ ಹಾವಳಿ.
ಆಕ್ಸಿಜನ್ ಘಟಕ ಕೆಲಸ ಮಾಡುತ್ತಿಲ್ಲ. ನುರಿತ ನರ್ಸ್‍ಗಳ ಕೊರತೆ. ವರ್ಗಾವಣೆಯಾಗಿರುವ ವೈದ್ಯರ ಸ್ಥಾನಕ್ಕೆ ವೈದ್ಯರನ್ನು ನೇಮಕವಾಗಿಲ್ಲ. ತಾಲೂಕಿನ ಪಿಎಚ್‍ಸಿಗಳಲ್ಲಿ ವೈದ್ಯರ ಕೊರತೆ ಇದೆ ಎಂದು ಸಾರ್ವಜನಿಕರು, ವೈದ್ಯರು, ವೈದ್ಯ ಸಿಬ್ಬಂದಿಗಳು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದು ಚರ್ಚಿಸಿದರು.