ಸುದ್ದಿವಿಜಯ, ಜಗಳೂರು: ಕಳೆದ ವರ್ಷ 2023ರ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯಿಂದ ಬೆಳೆ ನಷ್ಟವಾದ ಜಿಲ್ಲೆಗಳ ರೈತರಿಗೆ ಬರ ಪರಿಹಾರವಾಗಿ ಬಿಡುಗಡೆ ಮಾಡಲಾಗಿರುವ ಹಣ ನೇರವಾಗಿ ರೈತರ ಖಾತೆಗೆ ಪಾವತಿಯಾಗಿಲ್ಲದ ಕಾರಣ ತಾಲೂಕಿನ ಕೃಷಿ ಇಲಾಖೆ ಕಚೇರಿಗೆ ಸೋಮವಾರ ವಿವಿಧ ಗ್ರಾಮಗಳ ರೈತರು ಮುಗಿಬಿದ್ದು ಅಧಿಕಾರಿಗಳನ್ನು ಹಣ ಬಂದಿಲ್ಲ ಎಂದು ಪ್ರಶ್ನೆ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.
ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 1,50,621.7 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು ಮೇ.2 ರಂದು ಸರಕಾರ ಆದೇಶದಂತೆ ಮಾರ್ಗಸೂಚಿ ಅನ್ವಯ ಬೆಳೆ ಪ್ರದೇಶಕ್ಕೆ ಅನುಗುಣವಾಗಿ ಬಾಕಿಯಿದ್ದ ರೈತರಿಗೆ ನೇರವಾಗಿ ರೈತರ ಖಾತೆಗೆ ಪಾವತಿ ಮಾಡಲಾಗಿದೆ ಎಂದು ತಿಳಿಸಿದ್ದರೂ ಸಹ ಹಣ ರೈತರ ಖಾತೆಗೆ ಬಂದಿಲ್ಲ.
ಕೆಲ ರೈತರಿಗಷ್ಟೇ ಹಣ ಜಮೆಯಾಗಿದ್ದು, ಉಳಿದ ರೈತರು ನಮಗೆ ಹಣ ಯಾಕೆ ಬಂದಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳ ಬಳಿ ಪ್ರಶ್ನಿಸುತ್ತಿದ್ದಾರೆ. ಜಗಳೂರು ಪಟ್ಟಣದ ಕೃಷಿ ಇಲಾಖೆ ಕಚೇರಿಗೆ ಬರಪರಿಹಾರ ಬಾರದ ಕಾರಣ ಭೇಟಿ ಕೊಡುತ್ತಿರುವ ರೈತರು.
ಜಗಳೂರು ತಾಲೂಕಿನ 27263 ರೈತರಿಗೆ 5,36,64,034 ಕೋಟಿ ಹಣ ಬಿಡುಗಡೆಯಾಗಿದೆ. ಆದರೆ ಇನ್ನೂ ನಮಗೂ ಹಣ ಖಾತೆಗೆ ಬಂದಿಲ್ಲ. ನಾವು ಬರಪರಿಹಾಕ್ಕಾಗಿ ಕಾಯುತ್ತಿದ್ದೇವೆ.
ಸರಕಾರ ಒಬ್ಬರಿಗೆ ಹಣ ಹಾಕುವುದು ಇಬ್ಬೊಬ್ಬರಿಗೆ ಹಾಕದೇ ಇರುವುದು ತಾರತಮ್ಯ ನೀತಿ ಅನುಸರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯನಿರ್ವಹಿಸದ ಸಹಾಯವಾಣಿ:
ಜಿಲ್ಲೆಯ ಆಯಾ ತಾಲೂಕಿಗೆ ಪ್ರತ್ಯೇಕ ಸಹಾಯವಾಣಿ ತೆರೆಯಲಾಗಿದೆ. ಜಗಳೂರು ತಾಲೂಕಿನ ರೈತರಿಗೆ 8431977870 ನಂಬರ್ ಕೊಡಲಾಗಿದೆ. ಕೃಷಿ ಇಲಾಖೆ ನೋಟಿಸ್ ಬೋರ್ಡ್‍ನಲ್ಲಿ ಅಂಡಿಸಲಾಗಿದೆ. ಆದರೆ ಅದಕ್ಕೆ ಕರೆ ಮಾಡಿದರೆ ಯಾರೂ ರಿಸೀವ್ ಮಾಡುವುದಿಲ್ಲ ಎಂದು ರೈತರು ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೋಸಿದ ಅಧಿಕಾರಿಗಳು: ದಾಖಲೆಗಳೊಂದಿಗೆ ದಂಡು ದಂಡಾಗಿ ಬರುವ ರೈತರ ಪ್ರಶ್ನೆಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಉತ್ತರ ಕೊಡಲು ಸಾಧ್ಯವಾಗದೇ ರೋಸಿ ಹೋದರು.
ಎಫ್‍ಐಡಿ, ಆಧಾರ್ ಜೋಡಣೆ, ಪಹಣಿ, ಬ್ಯಾಂಕ್ ಪಾಸ್ ಬುಕ್ ಹೀಗೆ ಅನೇಕ ದಾಖಲೆಗಳೊಂದಿಗೆ ಬರುವ ರೈತರು ನನ್ನ ಅಕೌಂಡ್‍ಗೆ ಹಣ ಬಂದಿಲ್ಲ ಚಕ್ ಮಾಡಿ ಸ್ವಾಮಿ ಎಂದು ದೊಂಬಾಲು ಬಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.